ಸಾಮೂಹಿಕ ದಯಾ ಮರಣ ಕೋರಿದ ಬರಗಿ ಗ್ರಾಮದ ೪೦ ಕುಟುಂಬ!

| Published : Feb 01 2025, 12:03 AM IST

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮದ ೪೦ ಕುಟುಂಬಕ್ಕೆ ದಯಾ ಮರಣ ನೀಡಬೇಕು ಎಂದು ತಹಸೀಲ್ದಾರ್‌ ಕಚೇರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಬರಗಿ ಗ್ರಾಮದ ೪೦ ಕುಟುಂಬಕ್ಕೆ ಮನೆಗೆ ಹೋಗಲು ದಾರಿ ಇಲ್ಲ, ಬಿಡಿಸಿ ಕೊಡಿ ಎಂದು ಮನವಿ ಕೊಟ್ಟರೂ ದಾರಿ ಬಿಡಿಸದ ಕಾರಣ ಆಕ್ರೋಶಗೊಂಡ ೪೦ ಕುಟುಂಬದವರು ಸಾಮೂಹಿಕ ದಯಾ ಮರಣ ಕೋರಿ ತಹಸೀಲ್ದಾರ್‌ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಪ್ರಸಂಗ ಶುಕ್ರವಾರ ನಡೆದಿದೆ.

ರೈತಸಂಘದ ಮುಖಂಡರ ಸಾರಥ್ಯದಲ್ಲಿ ಬರಗಿ ಗ್ರಾಮದ ೪೦ ಕುಟುಂಬದ ಮುಖ್ಯಸ್ಥರು ತಹಸೀಲ್ದಾರ್‌ ಕಚೇರಿಗೆ ಆಗಮಿಸಿ ಶಿರಸ್ತೇದಾರ್‌ ಮಹೇಶ್‌ಗೆ ಮನವಿ ಕೊಟ್ಟಿದ್ದು, ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ಒತ್ತಾಯಿಸಿದ್ದಾರೆ.ಏನಿದು ವಿಚಾರ?:

ಬರಗಿ ಗ್ರಾಮದ ಬಿ.ಕೆ.ದೇವಣ್ಣ, ನಾಗಪ್ಪ ಗ್ರಾಮದ ೪೦ ಕುಟುಂಬ ತಿರುಗಾಡುವ ದಾರಿಯಲ್ಲಿ ಅಕ್ರಮವಾಗಿ ಮನೆ ಹಾಗೂ ಕಾಂಪೌಂಡ್‌ ನಿರ್ಮಿಸಿದ್ದಾರೆ. ಈ ಬಗ್ಗೆ ಗ್ರಾಮದ ೪೦ ಮಂದಿ ಕುಟುಂಬಸ್ಥರು ಜಿಪಂ ಸಿಇಒ, ತಾಪಂ ಇಒ ಹಾಗೂ ಬರಗಿ ಗ್ರಾಪಂ ಪಿಡಿಒಗೆ ದೂರು ಸಲ್ಲಿಸಿದ್ದರು. ದೂರಿನ ಬಳಿಕ ಗ್ರಾಪಂನಲ್ಲಿ ನಿರ್ಣಯ ಮಾಡಿ ೪೦ ಕುಟುಂಬದ ಮನೆಗಳಿಗೆ ತೆರಳಲು ದಾರಿ ಬಿಡಬೇಕು ಎಂದು ತೀರ್ಮಾನ ಆಗಿತ್ತು. ಒತ್ತುವರಿ ಬಿಡುವಂತೆ ಬಿ.ಕೆ.ದೇವಣ್ಣ ಹಾಗೂ ನಾಗಪ್ಪಗೆ ತಿಳಿಸಲಾಗಿತ್ತು.

ಗ್ರಾಪಂ ನಿರ್ಣಯಕ್ಕೂ ಬೆಲೆ ಕೊಡದ ಬಿ.ಕೆ.ದೇವಣ್ಣ ಹಾಗೂ ನಾಗಪ್ಪ ರಾಜಕೀಯ ಪ್ರಭಾವ ಬಳಸಿ ಗ್ರಾಮದಲ್ಲಿ ತಿರುಗಾಡಲು ಅವಕಾಶ ನೀಡುತ್ತಿಲ್ಲ. ಅಧಿಕಾರಿಗಳಿಗೆ ಮತ್ತೆ ಮನವಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ. ವಾಸದ ಮನೆಗಳಿಗೆ ಹೋಗಲು ದಾರಿಯೇ ಇಲ್ಲ ಅಂದ್ಮೇಲೆ ಜೀವನ ನಡೆಸುವುದು ಹೇಗೆ? ಎಂಬ ನೋವಿನಿಂದ ೪೦ ಕುಟುಂಬಗಳಿಗೆ ಸಾಮೂಹಿಕ ದಯಾ ಮರಣ ನೀಡಬೇಕು ಎಂದು ಪ್ರತ್ಯೇಕವಾದ ದೂರಿನಲ್ಲಿ ಹೇಳಿದ್ದಾರೆ.