ಸಾರಾಂಶ
ಕೆ.ಸಿ. ವೀರೇಂದ್ರ ಅಲಿಯಾಸ್ ಪಪ್ಪಿ ಹಾಗೂ ಇತರರು ಆರೋಪಿಗಳಾಗಿರುವ ಆನ್‌ಲೈನ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.) ಮತ್ತೆ ದಾಳಿ ನಡೆಸಿದೆ. ಚಳ್ಳಕೆರೆಯ ಬ್ಯಾಂಕ್ ಲಾಕರ್‌ನಿಂದ 50.33 ಕೋಟಿ ರು. ಮೌಲ್ಯದ 40 ಕೆ.ಜಿ. ಬಂಗಾರವನ್ನು ಜಪ್ತಿ ಮಾಡಿದೆ.
ಬೆಂಗಳೂರು : ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಅಲಿಯಾಸ್ ಪಪ್ಪಿ ಹಾಗೂ ಇತರರು ಆರೋಪಿಗಳಾಗಿರುವ ಆನ್‌ಲೈನ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.) ಮತ್ತೆ ದಾಳಿ ನಡೆಸಿದೆ. ಚಳ್ಳಕೆರೆಯ ಬ್ಯಾಂಕ್ ಲಾಕರ್‌ನಿಂದ 50.33 ಕೋಟಿ ರು. ಮೌಲ್ಯದ 40 ಕೆ.ಜಿ. ಬಂಗಾರವನ್ನು ಜಪ್ತಿ ಮಾಡಿದೆ.
ಇದರೊಂದಿಗೆ ಇದುವರೆಗೆ ಶಾಸಕರು ಹಾಗೂ ಅವರ ಸಂಬಂಧಿಕರಿಂದ ಚಿನ್ನಾಭರಣ ಮತ್ತು ಕಾರುಗಳು ಸೇರಿದಂತೆ 150 ಕೋಟಿ ರು. ಮೌಲ್ಯದ ವಸ್ತುಗಳನ್ನು ಇ.ಡಿ. ಮುಟ್ಟುಗೋಲು ಹಾಕಿಕೊಂಡಂತಾಗಿದೆ.
ಅಕ್ರಮ ಹಣ ವರ್ಗಾವಣೆ ಜಾಲದ ಬೆನ್ನತ್ತಿದ್ದ ಅಧಿಕಾರಿಗಳು ಗುರುವಾರ ಚಳ್ಳಕೆರೆಯ ಬ್ಯಾಂಕ್‌ನಲ್ಲಿದ್ದ ಎರಡು ಲಾಕರ್‌ಗಳನ್ನು ಪರಿಶೀಲಿಸಿದಾಗ 24 ಕ್ಯಾರೆಟ್‌ನ 50.33 ಕೋಟಿ ರು. ಮೌಲ್ಯದ 40 ಕೆಜಿ ಚಿನ್ನದ ಗಟ್ಟಿಗಳು ಪತ್ತೆಯಾಗಿವೆ ಎಂದು ಪ್ರಕಟಣೆಯಲ್ಲಿ ಇ.ಡಿ. ಹೇಳಿದೆ.
ಕೆಲ ದಿನಗಳ ಹಿಂದೆ ಆನ್‌ಲೈನ್ ಬೆಟ್ಟಿಂಗ್ ದಂಧೆ ಸಂಬಂಧ ಶಾಸಕ ವೀರೇಂದ್ರ ಅವರನ್ನು ಇ.ಡಿ. ಅಧಿಕಾರಿಗಳು ಬಂಧಿಸಿದ್ದರು. ಆಗ 21 ಕೆಜಿ ಬಂಗಾರ, ಐಷಾರಾಮಿ ಕಾರುಗಳು, ಬೆಳ್ಳಿ ಆಭರಣಗಳು ಸೇರಿದಂತೆ 103 ಕೋಟಿ ರು. ಮೌಲ್ಯದ ವಸ್ತುಗಳನ್ನು ಇ.ಡಿ. ಮುಟ್ಟುಗೋಲು ಹಾಕಿಕೊಂಡಿತ್ತು. ಬಳಿಕ ಎರಡನೇ ಹಂತದಲ್ಲಿ ಮತ್ತೆ 50.33 ಕೋಟಿ ರು. ಬೆಲೆಯ ಚಿನ್ನ ಸಿಕ್ಕಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ವಿವಿಧ ಆನ್‌ಲೈನ್ ಬೆಟ್ಟಿಂಗ್ ಮೂಲಕ ಶಾಸಕ ವೀರೇಂದ್ರ ಅವರು 2 ಸಾವಿರ ಕೋಟಿ ರು. ಸಂಪಾದಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ನಕಲಿ ಬ್ಯಾಂಕ್ ಖಾತೆಗಳ ಮೂಲಕ ಅಕ್ರಮವಾಗಿ ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ಗಳಿಸಿದ ಹಣವನ್ನು ಅವರು ವರ್ಗಾಯಿಸಿದ್ದರು. ಈ ನಕಲಿ ಖಾತೆಗಳ ತೆರೆಯಲು ಜನರಿಗೆ ಹಣದಾಸೆ ತೋರಿಸಿ ಸ್ವವಿವರ ಪಡೆದುಕೊಂಡಿದ್ದರು. ದೇಶ-ವಿದೇಶದಲ್ಲಿ ಶಾಸಕರ ಆನ್‌ಲೈನ್ ಬೆಟ್ಟಿಂಗ್ ಜಾಲ ಹರಿಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.