ಸಾರಾಂಶ
ಬೆಂಗಳೂರು : ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಗುತ್ತಿಗೆದಾರರ ಸಂಘ ಮಾಡಿದ್ದ ಶೇ.40ರಷ್ಟು ಕಮಿಷನ್ ಆರೋಪಕ್ಕೆ ದೊಡ್ಡ ತಿರುವು ಸಿಕ್ಕಿದ್ದು, ಈ ಆರೋಪವೇ ಸುಳ್ಳು ಎಂಬುದು ಲೋಕಾಯುಕ್ತ ತನಿಖೆಯಿಂದ ಬೆಳಕಿಗೆ ಬಂದಿದೆ.
ಈ ಕಮಿಷನ್ ಆರೋಪ ಮುಂದಿಟ್ಟು ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಹೋರಾಟ ಮಾಡಿದ್ದ ಹಾಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗವಾದಂತಾಗಿದೆ. ಇದರ ಬೆನ್ನಲ್ಲೇ ಈ ವಿಷಯ ಪ್ರತಿಪಕ್ಷ ಬಿಜೆಪಿ ಮತ್ತು ಆಡಳಿತಾರೂಢ ಕಾಂಗ್ರೆಸ್ ನಡುವೆ ಜಟಾಪಟಿಗೂ ಕಾರಣವಾಗಿದೆ.
ಈ ಹಿಂದೆ ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಇದ್ದಾಗ, ರಾಜ್ಯ ಗುತ್ತಿಗೆದಾರರ ಸಂಘವು ಸರ್ಕಾರದ ವಿರುದ್ಧ ಶೇ.40ರಷ್ಟು ಕಮಿಷನ್ ಆರೋಪ ಮಾಡಿತ್ತು. ಬಿಬಿಎಂಪಿ ಕಾಮಗಾರಿಗಳಲ್ಲೂ ಶೇ.40ರಷ್ಟು ಕಮಿಷನ್ ಆರೋಪ ಮಾಡಲಾಗಿತ್ತು. ಈ ಸಂಬಂಧ ಸರ್ಕಾರವು ಲೋಕಾಯುಕ್ತ ತನಿಖೆಗೆ ಆದೇಶಿಸಿತ್ತು.
ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ನಡೆಸಿದ ತನಿಖೆಯಲ್ಲಿ ಈ ಕಮಿಷನ್ ಆರೋಪಕ್ಕೆ ಪೂರಕವಾಗಿ ಯಾವುದೇ ಸಾಕ್ಷಿ-ಪುರಾವೆಗಳು ಸಿಕ್ಕಿಲ್ಲ. ಹೀಗಾಗಿ ಇದೊಂದು ಆಧಾರರಹಿತ ಹಾಗೂ ಸುಳ್ಳು ಆರೋಪ ಎಂದು ವರದಿ ಸಿದ್ಧಪಡಿಸಿ ಲೋಕಾಯುಕ್ತಕ್ಕೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ಸರ್ಕಾರದ ವಿರುದ್ಧದ ಈ ಶೇ.40ರಷ್ಟು ಕಮಿಷನ್ ಆರೋಪವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನಾಯಕರು ರಾಜಕೀಯವಾಗಿ ಪ್ರಬಲ ಅಸ್ತ್ರವಾಗಿ ಬಳಸಿಕೊಂಡು ಬಿಜೆಪಿ ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಹೋರಾಟ ಮಾಡಿದ್ದರು. ಪೇಸಿಎಂ ಎಂಬ ಕ್ಯೂಆರ್ ಕೋಡ್ ಆಧಾರಿತ ಪೋಸ್ಟರ್ ಅಂಟಿಸಿ ಬಿಜೆಪಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸಿದ್ದರು. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಿಜೆಪಿ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡಿದ್ದರು. ಇದನ್ನು ಬಳಸಿಕೊಂಡು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಪ್ರಚಂಡ ಬಹುಮತ ಪಡೆದು ಅಧಿಕಾರಕ್ಕೂ ಬಂದಿತ್ತು.
ಈಗ ಕಾಂಗ್ರೆಸ್ ಸರ್ಕಾರದ ಅಧಿಕಾರದ ಅವಧಿಯಲ್ಲೇ ಲೋಕಾಯುಕ್ತ ಪೊಲೀಸರು ಈ ಶೇ.40ರಷ್ಟು ಕಮಿಷನ್ ಆರೋಪದ ತನಿಖೆ ಪೂರ್ಣಗೊಳಿಸಿ ವರದಿ ಸಿದ್ಧಪಡಿಸಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘ ಮಾಡಿದ್ದ ಆರೋಪಕ್ಕೆ ಯಾವುದೇ ಸಾಕ್ಷ್ಯ-ಪುರಾವೆಗಳು ಇಲ್ಲ. ಹೀಗಾಗಿ ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಂಬಿಕಾಪತಿ ಆರೋಪ ಸುಳ್ಳು:
ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಬಿಬಿಎಂಪಿ ಆಟದ ಮೈದಾನಗಳ ಕಾಮಗಾರಿಗಳ ಗುತ್ತಿಗೆ ವೇಳೆ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳಿಗೆ ಶೇ.40ರಷ್ಟು ಕಮಿಷನ್ ನೀಡಿದ್ದಾಗಿ ಗಂಭೀರ ಆರೋಪ ಮಾಡಿದ್ದರು. ಈ ಅಂಬಿಕಾಪತಿ ಅವರು ಬಿಬಿಎಂಪಿ ಪೂರ್ವ ವಲಯ ಅಥವಾ ಇತರೆ ವಲಯಗಳ ವ್ಯಾಪ್ತಿಯಲ್ಲಿ ಆಟದ ಮೈದಾನಗಳ ಸಂಬಂಧ ಕಳೆದ ಆರು ವರ್ಷಗಳಲ್ಲಿ ಯಾವುದೇ ಗುತ್ತಿಗೆ ಪಡೆಯದೇ ಇರುವುದು ಕಂಡುಬಂದಿದೆ. ಹೀಗಾಗಿ ಅಂಬಿಕಾಪತಿ ಮಾಡಿರುವ ಆರೋಪ ಸುಳ್ಳು ಎಂದು ಲೋಕಾಯುಕ್ತ ತನಿಖಾ ವರದಿಯಲ್ಲಿ ದಾಖಲಿಸಲಾಗಿದೆ ಎನ್ನಲಾಗಿದೆ.
ಲೋಕಾಯುಕ್ತರು ಈ ತನಿಖಾ ವರದಿಯನ್ನು ಅನುಮೋದಿಸಿದರೆ, ಈ ಶೇ.40ರಷ್ಟು ಕಮಿಷನ್ ಆರೋಪದ ದೂರಿನಲ್ಲಿ ತನಿಖೆ ಕೈಗೊಳ್ಳಬೇಕಾದ ಯಾವುದೇ ಅಂಶಗಳು ಇಲ್ಲ. ಹೀಗಾಗಿ ಈ ದೂರನ್ನು ಮುಕ್ತಾಯಗೊಳಿಸಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.