40 ಕ್ವಿಂಟಲ್‌ ಅನ್ನ, 6 ಸಾವಿರ ಲೀಟರ್‌ ಸಾಂಬಾರ!

| Published : Feb 27 2025, 12:32 AM IST

ಸಾರಾಂಶ

ಸಿದ್ದರೂಡರ ಜಾತ್ರೆ ನಿಮಿತ್ತ ದಾಸೋಹಕ್ಕೆ 35-40 ಕ್ವಿಂಟಲ್‌ ಅಕ್ಕಿಯ ಅನ್ನ, 6 ಸಾವಿರ ಲೀಟರ್‌ ಸಾಂಬಾರ... 4 ಕ್ವಿಂಟಲ್‌ ಗೋಧಿ ಮತ್ತು 8 ಕ್ವಿಂಟಲ್‌ ಬೆಲ್ಲದ ಪಾಯಸ ತಯಾರಿಸಲಾಗುತ್ತಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: 35-40 ಕ್ವಿಂಟಲ್‌ ಅಕ್ಕಿಯ ಅನ್ನ, 6 ಸಾವಿರ ಲೀಟರ್‌ ಸಾಂಬಾರ... 4 ಕ್ವಿಂಟಲ್‌ ಗೋಧಿ ಹುಗ್ಗಿ ಮತ್ತು 8 ಕ್ವಿಂಟಲ್‌ ಬೆಲ್ಲದ ಪಾಯಸ..!

ಇದು ಉತ್ತರ ಕರ್ನಾಟಕದ ಆರಾಧ್ಯ ದೈವ ಸಿದ್ಧಾರೂಢರ ಜಾತ್ರಾ ಮಹೋತ್ಸವದ ದಿನದಂದು ಮಠದ ಭೋಜನಾಲಯದಲ್ಲಿ ಸಿದ್ಧಪಡಿಸುವ ಪ್ರಸಾದದ ಒಂದು ಸಾಲಿನ ವಿವರ.

"ಸಿದ್ಧಾರೂಢರ ಸಾರು ಉಂಡವರೆಲ್ಲ ಪಾರು " ಎಂಬ ಘೋಷವಾಕ್ಯವಿದೆ. ಅದೇ ರೀತಿ ನಿತ್ಯ ನಿರಂತರವಾಗಿ ಅನ್ನದಾಸೋಹ ನಡೆಯುತ್ತಲೇ ಇರುತ್ತದೆ. ಜಾತ್ರೆಗಂತೂ ಇದರ ಪ್ರಮಾಣ ವಿಪರೀತವಾಗಿರುತ್ತದೆ. ದವಸ ಧಾನ್ಯಕ್ಕೂ ಇಲ್ಲಿ ಕೊರತೆ ಇಲ್ಲ. ಎಷ್ಟೋ ಜನ ಹಳ್ಳಿಗಳಿಂದ ತರಕಾರಿ, ದವಸ ಧಾನ್ಯಗಳನ್ನು ಟ್ರ್ಯಾಕ್ಟರ್‌ಗಟ್ಟಲೇ ತಂದು ಹೇಳದೇ ಕೇಳದೇ ಇಲ್ಲಿಟ್ಟು ಹೋಗುವುದುಂಟು.

ಜಾತ್ರೆಯ ದಿನದಂದು ಮಠದ ಭೋಜನಾಲಯದಲ್ಲಿ 30-35 ಕ್ವಿಂಟಲ್‌ ಅಕ್ಕಿಯಿಂದ ತಯಾರಿಸಿದ ಅನ್ನ, 1200 ಲೀಟರ್‌ ಸಾಂಬಾರ ಸಿದ್ಧಪಡಿಸುವ ದೊಡ್ಡ ದೊಡ್ಡ ಕುಕ್ಕರ್‌ನಂಥ ಕೊಪ್ಪರಿಗಳಿವೆ. ಅಂತಹವುಗಳಲ್ಲಿ ಸಾಂಬಾರ ಸಿದ್ಧಪಡಿಸಲಾಗುತ್ತದೆ. ಒಟ್ಟು 6 ಸಾವಿರ ಲೀಟರ್‌ ಸಾಂಬಾರ ಸಿದ್ಧವಾಗಲಿದೆಯಂತೆ. ಅದಕ್ಕೆ 40 ಕೆಜಿ ಖಾರಾ, 12 ಕೆಜಿ ಅರಿಷಣ, 8 ಕೆಜಿ ಬೆಳ್ಳೊಳ್ಳಿಯ ವಗ್ಗರಣೆ, ನೂರಾರು ಕೆಜಿ ತರಕಾರಿ, ಹೀಗೆ ಸಾಂಬಾರು ಸಿದ್ಧಪಡಿಸಿದರೆ, ಗೋದಿ ಪಾಯಸ ಮಾಡಲಾಗುತ್ತದೆ. 4 ಕ್ವಿಂಟಲ್‌ ಗೋದಿಗೆ 7.5- 8 ಕ್ವಿಂಟಲ್‌ ಬೆಲ್ಲ, 1 ಕ್ವಿಂಟಲ್‌ ತುಪ್ಪ, 1 ಕ್ವಿಂಟಲ್‌ ಗೋಡಂಬಿ, 30 ಕೆಜಿ ಕೇರ್‌ ಬೀಜ, 50 ಕೆಜಿ ಉತ್ತತ್ತಿ, 5 ಕೆಜಿ ಗಸಗಸೆ, 2.5 ಕೆಜಿ ಏಲಕ್ಕಿ, 12-15 ಕ್ವಿಂಟಲ್‌ ಗೋದಿ ಪಾಯಸ್‌ ಸಿದ್ಧಪಡಿಸಲಾಗುತ್ತದೆ. 2 ಕ್ವಿಂಟಲ್‌ ಬದನೆಕಾಯಿ ಪಲ್ಯ ಮಾಡಲಾಗುತ್ತದೆ. ಇದೆಲ್ಲವೂ ಸಿದ್ಧವಾಗಿ ಪ್ರಸಾದ ಪ್ರಾರಂಭವಾಗುವುದು ಬೆಳಗ್ಗೆ 11ಕ್ಕೆ. ಇನ್ನು ಅದಕ್ಕಿಂತ ಮುಂಚೆ ಉಪಾಹಾರ ನೀಡಲಾಗುತ್ತದೆ. ಅದಕ್ಕೆ 5 ಕ್ವಿಂಟಲ್‌ ಅಕ್ಕಿ ಫುಲಾವ್‌ ಮಾಡಲಾಗುತ್ತದೆ. ಮಠದ ಹೊರಗೆ ಅಂದರೆ ರಥಬೀದಿ, ಮಠದ ಹಿಂಬದಿಯಲ್ಲಿ ಎಲ್ಲ ಕಡೆಗಳಲ್ಲೂ ಖಾಸಗಿ ವ್ಯಕ್ತಿಗಳು, ಹಂಚುತ್ತಲೇ ಇರುತ್ತಾರೆ. ಆದರೂ ಮಠದ ಭೋಜನಾಲಯದಲ್ಲಿ ಸಾವಿರಾರು ಜನ ಪ್ರಸಾದ ಸ್ವೀಕರಿಸುತ್ತಾರೆ.

ಶಿವರಾತ್ರಿ ದಿನ

ಶಿವರಾತ್ರಿಯ ದಿನ ಮಠದ ಭೋಜನಾಲಯದಲ್ಲಿ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದ್ದಾರೆ. 3600 ಲೀಟರ್‌ ಸಾಂಬಾರು ಮಾಡಿದ್ದರೆ, 8 ಕ್ವಿಂಟಲ್‌ ಪಾಯಸ ಮಾಡಲಾಗಿತ್ತು. 20 ಕ್ವಿಂಟಲ್‌ ಅಕ್ಕಿಯ ಅನ್ನ ಸಿದ್ಧಪಡಿಸಲಾಗಿತ್ತು. ಬೆಳಗ್ಗೆ ಉಪಾಹಾರಕ್ಕೆ 4 ಕ್ವಿಂಟಲ್‌ ಪಲಾವ್‌ ಮಾಡಲಾಗಿತ್ತು ಎಂದು ಅಡುಗೆಯ ಸೂಪರವೈಸರ್‌ ಸುನೀಲ ಕಮ್ಮಾರ ತಿಳಿಸುತ್ತಾರೆ.

ಅಡುಗೆಯನ್ನು ಮಠದಲ್ಲಿ ಪ್ರತಿನಿತ್ಯ ಮಾಡುವ ಸಿಬ್ಬಂದಿಯೇ ತಯಾರಿಸುತ್ತಿದ್ದು, ಅವರಿಗೆ ಮರಕುಂಬಿ, ಮುರ್ಕಿಬಾವಿ, ಗುಜಾನಟ್ಟಿ, ಹೀಗೆ ಬೇರೆ ಬೇರೆ ಊರುಗಳಿಂದ ಬಂದಿರುವ ಭಕ್ತರು ನೆರವು ನೀಡುತ್ತಿರುವುದು ವಿಶೇಷ. ಹೀಗಾಗಿ. ಅಡುಗೆ ತಯಾರಿಸುವುದು ಹೆಚ್ಚಿನ ಸಮಸ್ಯೆ ಎನಿಸುತ್ತಿಲ್ಲ.ಯಾವುದೇ ಸಮಸ್ಯೆಯಾಗಿಲ್ಲ

ಅಡುಗೆ ತಯಾರಿಸಲು ಯಾವುದೇ ಬಗೆಯ ಸಮಸ್ಯೆಯಾಗಿಲ್ಲ. ಮಠದ ಸಿಬ್ಬಂದಿಯೂ ಇದ್ದಾರೆ. ಜತೆಗೆ ಬೇರೆ ಬೇರೆ ಹಳ್ಳಿಗಳಿಂದ ಬಂದಿರುವ ಭಕ್ತರೂ ಇಲ್ಲಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

- ಸುನೀಲ ಕಮ್ಮಾರ, ಅಡುಗೆ ಮನೆಯ ಸೂಪರವೈಸರ್‌ರಾತ್ರಿಯಿಂದಲೇ ಸಿದ್ಧತೆ

ಅಡುಗೆ ಸಿದ್ಧಪಡಿಸುವ ಕೆಲಸ ನಿರಂತರವಾಗಿ ನಡೆಯುತ್ತಲೇ ಇದೆ. ರಾತ್ರಿಯಿಂದಲೇ ಅಡುಗೆ ಸಿದ್ಧಪಡಿಸುವ ಕೆಲಸ ನಡೆದೇ ಇದೆ. ಜಾತ್ರೆಯ ದಿನ 35-40 ಕ್ವಿಂಟಲ್‌ ಅನ್ನ, 6 ಸಾವಿರ ಲೀಟರ್‌ ಸಾಂಬಾರ ಸಿದ್ಧಪಡಿಸುವ ಸಿದ್ಧತೆ ಇದೆ.

- ಚಂದ್ರು ಪಾಟೀಲ, ಮುಖ್ಯ ಅಡುಗೆಕಾರ