ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿರಾಜ್ಯ ಕಾಂಗ್ರೆಸ್ ಸರ್ಕಾರ ತಾನು ಘೋಷಿಸಿದ 5 ಗ್ಯಾರಂಟಿಗಳಲ್ಲಿ ವಿಫಲವಾಗಿದ್ದು, ಇದೀಗ ರಾಜ್ಯದ ಬಡವರ ಬಿಪಿಎಲ್ ಪಡಿತರ ಕಾರ್ಡ್‌ಗಳನ್ನು ರದ್ದು ಮಾಡುವ 6ನೇ ಗ್ಯಾರಂಟಿಯನ್ನು ಜಾರಿಗೊಳಿಸಲು ಹೊರಟಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆರೋಪಿಸಿದ್ದಾರೆ.
ಅವರು ಶುಕ್ರವಾರ ಉಡುಪಿ ಜಿಲ್ಲಾ ಬಿಜೆಪಿ ರೈತ ಮೋರ್ಚಾದ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಉಡುಪಿ ಜಿಲ್ಲೆಯೊಂದರಲ್ಲಿಯೇ ಸರ್ಕಾರ ಸುಮಾರು 40 ಸಾವಿರಕ್ಕೂ ಹೆಚ್ಚು ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸುವ ಪ್ರಕ್ರಿಯೆ ನಡೆಸುತ್ತಿದೆ. ಈ ಮೂಲಕ ಕಾಂಗ್ರೆಸ್ ಜಿಲ್ಲೆಯ ಬಡ ಜನತೆಗೆ ಸರ್ಕಾರಿ ಸೌಲಭ್ಯಗಳಿಂದ ವಂಚಿತರನ್ನಾಗಿಸುತ್ತಿದೆ. ಸರ್ಕಾರ ಇದನ್ನು ತಕ್ಷಣ ಕೈ ಬಿಡದಿದ್ದಲ್ಲಿ ಈ ಸಂತ್ರಸ್ಥ ಬಿಪಿಎಲ್ ಪಡಿತರ ಕುಟುಂಬಗಳನ್ನು ಸೇರಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಎಚ್ಚರಿಕೆ ನೀಡಿದ್ದಾರೆ.ಗ್ಯಾರಂಟಿ ಯೋಜನೆಗಳಿಂದ ದಿವಾಳಿಯಾಗಿರುವ ರಾಜ್ಯ ಸರ್ಕಾರ ಈಗ ಬಡವರಿಗೆ ಪಡಿತರ ನೀಡುವುದಕ್ಕೂ ಹಣ ಇಲ್ಲದೇ, ಪ್ರತಿ ಗ್ರಾಮಗಳಲ್ಲಿ 250 - 300 ಕುಟುಂಬಗಳ ಬಿಪಿಎಲ್ ಕಾರ್ಡ್ ರದ್ದುಗೊಳಿಸಲು ಸೂಚಿಸಿದೆ. ಬಡವರಿಗೆ ನೀಡುವ ಬಿಪಿಎಲ್ ಕಾರ್ಡನ್ನು ಕಸಿದುಕೊಂಡು, ಗ್ಯಾರೆಂಟಿ ಯೋಜನೆಗಳಿಗೆ ಹಣ ಹೊಂದಿಸಲು ಹೊರಟಿದೆ ಎಂದವರು ಹೇಳಿದರು.
ಉಡುಪಿ ನಗರದ ಪ್ರವಾಸಿ ಮಂದಿರದ ವಿದ್ಯುತ್ ಬಿಲ್ ಪಾವತಿಸದೇ ಮೆಸ್ಕಾಂ ಸಂಪರ್ಕ ಕಡಿತಗೊಳಿಸಿದೆ. ಶಾಲಾ ಕಾಲೇಜುಗಳಲ್ಲಿಯೂ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ಎಂ.ಆರ್.ಐ/ಸಿಟಿ ಸ್ಕ್ಯಾನಿಂಗ್ ಗುತ್ತಿಗೆ ಪಡೆದ ಸಂಸ್ಥೆಗೆ ಹಣ ಪಾವತಿಸದೇ ಬಡವರು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿರುವುದಕ್ಕೆ ಉಡುಪಿ ಜಿಲ್ಲೆಯ ಈ ದುರವಸ್ಥೆ ಜಲ್ವಂತ ಸಾಕ್ಷಿಯಾಗಿದೆ ಎಂದರು.ಉಡುಪಿ ಕೆಲ ಕಾಂಗ್ರೆಸ್ ನಾಯಕರು ರಾಜ್ಯ ಸರ್ಕಾರದ ಬಳಿ ಅನುದಾನ ನೀಡುವುದಕ್ಕೆ ಹಣದ ಕೊರತೆ ಇಲ್ಲ ಎನ್ನುತ್ತಿದ್ದಾರೆ. ಅವರು ಸರ್ಕಾರ ಉಡುಪಿ ಜಿಲ್ಲೆಗೆ ಎಷ್ಟು ಅನುದಾನ ನೀಡಿದೆ ಎಂಬ ಬಗ್ಗೆ ದಾಖಲೆ ಸಹಿತ ಚರ್ಚೆಗೆ ಬರಲಿ ಎಂದು ಶಾಸಕರು ಸವಾಲು ಹಾಕಿದರು.ಸುದ್ದಿಗೋಷ್ಠಿಯಲ್ಲಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ರೈತ ಮೋರ್ಚದ ನಾಯಕರಾದ ಕಮಲಾಕ್ಷ ಹೆಬ್ಬಾರ್, ಶ್ಯಾಮಪ್ರಸಾದ್ ಭಟ್, ಗುರುನಂದ ನಾಯಕ್, ಪುಷ್ಪರಾಜ್ ಶೆಟ್ಟಿ ಮುಂತಾದವರಿದ್ದರು.------------------------------
ಉಡುಪಿ ಜಿಲ್ಲೆಯಲ್ಲಿ ಬಡವರ ಪಡಿತರ ಕಾರ್ಡ್ ರದ್ದಾಗಿಲ್ಲ: ಪ್ರಸಾದ್ ರಾಜ್ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ಶಾಸಕರು ಜಿಲ್ಲೆಯಲ್ಲಿ 40 ಸಾವಿರ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 38,765 ಬಿಪಿಎಲ್ ಕಾರ್ಡ್‌ಗಳು ರದ್ದಾಗಿವೆ. ಅದರಲ್ಲಿ 37,395 ಕಾರ್ಡುದಾರರು ವಾರ್ಷಿಕ 1.20 ಲಕ್ಷ ರು.ಗೂ ಹೆಚ್ಚು ಆದಾಯ ಹೊಂದಿದ್ದರಿಂದ ರದ್ದಾಗಿದೆ. ಬಡವರ ಬಿಪಿಎಲ್ ಕಾರ್ಡ್‌ಗಳು ರದ್ದಾಗಿಲ್ಲ. ಬಡವರ ಕಾರ್ಡ್ ರದ್ದಾಗಿವೆ ಎಂಬ ಎಂಬ ಶಾಸಕರ ಹೇಳಿಕೆ ದಾಖಲೆಯನ್ನು ಕೊಡಲಿ. ಇಲ್ಲವಾದಲ್ಲಿ ರಾಜೀನಾಮೆ ನೀಡಲಿ ಎಂದು ಕಾಂಗ್ರೆಸ್ ನಾಯಕ ಪ್ರಸಾದ್ ರಾಜ್ ಸವಾಲು ಹಾಕಿದ್ದಾರೆ.
ರಾಜ್ಯ ಸರ್ಕಾರ ದಿವಾಳಿಯಾಗಿದೆ, ಶಾಸಕರಿಗೆ ಅನುದಾನ ನೀಡುತ್ತಿಲ್ಲ ಎಂಬ ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕೇಂದ್ರದ ಬಿಜೆಪಿ ಸರ್ಕಾರದಿಂದ ಈ ಜಿಲ್ಲೆಗೆ ಎಷ್ಟು ಅನುದಾನ ಬಂದಿದೆ. ದೇಶದ ಬಜೆಟ್ 48 ಲಕ್ಷ ಕೋಟಿ ರು., ರಾಜ್ಯದ ಬಜೆಟ್ 3.50 ಲಕ್ಷ ಕೋಟಿ ರು. ಅದರಲ್ಲಿ 2 ಸಾವಿರ ಕೋಟಿ ರು.ಗಳನ್ನು ಈ ಕ್ಷೇತ್ರಕ್ಕೆ ತರಲಾಗದವರು ಯಾಕೆ ಶಾಸಕರಾಗಿರಬೇಕು ಎಂದು ಪ್ರಶ್ನಿಸಿದರು. ಮೋದಿ ಬಳಿ ಹೋಗಿ ಅನುದಾನ ಕೇಳಲಿ, ಅವರಿಗೆ ಭಯವಾದರೇ ನಮ್ಮನ್ನು ಕರೆದುಕೊಂಡು ಹೋಗಲಿ, ನಾವು ಅವರೊಂದಿಗೆ ಮಾತನಾಡುತ್ತೇವೆ ಎಂದರು.ಉಡುಪಿ ಕೃಷ್ಣಮಠದ ಪರ್ಯಾಯೋತ್ಸವಕ್ಕೆ ಸರ್ಕಾರ ನೀಡಿಲ್ಲ ಎನ್ನುವ ಶಾಸಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಪ್ರಸಾದ್‌ರಾಜ್, ಪರ್ಯಾಯೋತ್ಸವಕ್ಕೆ ಹಣ ಬಿಡುಗಡೆ ಮಾಡುವ ಬಗ್ಗೆ ಸರ್ಕಾರ ಆಶ್ವಾಸನೆ ನೀಡಿರಲಿಲ್ಲ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ರಹ್ಮಾವರ ಕಾಂಗ್ರೆಸ್ ಮುಖಂಡ ದಿನಕರ್ ಹೇರೂರು, ಎನ್‌ಎಸ್‌ಯುಐ ಮುಖಂಡ ಶರತ್ ಕುಂದರ್ ಉಪಸ್ಥಿತರಿದ್ದರು.