ಆರು ತಿಂಗಳಲ್ಲಿ 40 ಮಹಿಳೆಯರು ನಾಪತ್ತೆ

| Published : Jun 27 2024, 01:08 AM IST

ಸಾರಾಂಶ

ಕಲಬುರಗಿ ಜಿಲ್ಲೆಯಲ್ಲಿ ಕಳೆದಾರು ತಿಂಗಳಲ್ಲಿ ನಾಪತ್ತೆಯಾಗಿರುವ ವಯಸ್ಕ ಮಹಿಳೆಯರ ಸಂಖ್ಯೆ ಬರೋಬ್ಬರಿ 40, ಆದರೆ ಪೊಲೀಸರ ತನಿಖೆಯಲ್ಲಿ ಪತ್ತೆ ಆಗಿರೋದು 15 ಮಹಿಳೆಯರು ಮಾತ್ರ.

ಕನ್ನಡಪ್ರಭ ವಾರ್ತೆ ಕಲಬುರಗಿ

ಜಿಲ್ಲೆಯಲ್ಲಿ ಕಳೆದಾರು ತಿಂಗಳಲ್ಲಿ ನಾಪತ್ತೆಯಾಗಿರುವ ವಯಸ್ಕ ಮಹಿಳೆಯರ ಸಂಖ್ಯೆ ಬರೋಬ್ಬರಿ 40, ಆದರೆ ಪೊಲೀಸರ ತನಿಖೆಯಲ್ಲಿ ಪತ್ತೆ ಆಗಿರೋದು 15 ಮಹಿಳೆಯರು ಮಾತ್ರ, 6 ತಿಂಗಳಲ್ಲೇ ಜಿಲ್ಲೆಯಲ್ಲಿ 9 ಅತ್ಯಾಚಾರ ಪ್ರಕರಣ ದಾಖಲಾಗಿದ್ದು, 7ರಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.

ಬುಧವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಹಿಳಾ ಮೀಸಲಾತಿ, ಸರ್ಕಾರಿ-ಖಾಸಗಿ ಸಂಸ್ಥೆಯಲ್ಲಿ ಅಂತರಿಕ ದೂರು ಸಮಿತಿ ರಚನೆ, ಮಹಿಳಾ ದೌರ್ಜನ್ಯ ಪ್ರಕರಣ ಮತ್ತು ಸುರಕ್ಷತೆ ಕುರಿತಂತೆ ಅಧಿಕಾರಿಗಳೊಂದಿಗೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ನಡೆಸಿದಂತಹ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿದ್ದ ಎಸ್ಪಿ ಅಕ್ಷಯ್‌ ಹಾಕೆ ನೀಡಿದ ಮಾಹಿತಿ ಸರ್ವರ ಗಮನ ಸೆಳೆಯಿತು.

ಇನ್ನು ಅಪ್ರಾಪ್ತೆಯರ ನಾಪತ್ತೆಯ 22 ಪ್ರಕರಣ ದಾಖಲಾಗಿದ್ರೆ, 21ರಲ್ಲಿ ಬಾಲಕಿಯರು ಪತ್ತೆಯಾಗಿದ್ದಾರೆ, ಇನ್ನೊಂದು ಬಾಲಕಿ ನಾಪತ್ತೆ ಪ್ರಕರಣ ಬಾಕಿ ಇದೆ ಎಂದು ಎಸ್ಪಿ ಅಕ್ಷಯ್‌ ಮಹಿತಿ ಸಭೆಗೆ ತಿಳಿಸಿದಾಗ, ಮಹಿಳಾ ಅಪಹರಣ ಪ್ರಕರಣಗಳ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ ಅಧ್ಯಕ್ಷರು, ಇದಕ್ಕೆ ಕಡಿವಾಣ ಹಾಕಬೇಕೆಂದರು.

ಸಭೆಯ ವೇದಿಕೆಯಿಂದಲೇ ಅವರು ಕಳೆದ ಒಂದೂವರೆ ವರ್ಷದ ಹಿಂದೆ ಕಾಣೆಯಾಗಿರುವ ಮಗಳಿಗಾಗಿ ಪರಿತಪಿಸುತ್ತಿರುವ ಜೇವರ್ಗಿಯ ಖಾದ್ಯಾಪೂರದ ಬಸಪ್ಪ ಅವರೊಂದಿಗೆ ಮಾತನಾಡಿ ವಿವರ ಪಡೆದರು. ಈ ಪ್ರಕರಣದಲ್ಲಿನ ಬೆಳವಣಿಗೆಗಳ ಮಾಹಿತಿ ಪಡೆದು ಕ್ರಮಕ್ಕೆ ಸೂಚಿಸಿದರು.

ದೌರ್ಜನ್ಯ ಪ್ರಕರಣ ಕಡಿಮೆಗೊಳಿಸಲು ಅರಿವೇ ಮದ್ದಾಗಿದೆ. ವಿಶೇಷವಾಗಿ ದೌರ್ಜನ್ಯ, ಪೋಕ್ಸೋ, ಬಾಲ್ಯ ವಿವಾಹ ನಿಷೇಧ ಹೀಗೆ ವಿವಿಧ ವಿಷಯಗಳ ಕುರಿತು ಶಾಲೆ, ಕಾಲೇಜು ಹಾಗೂ ವಸತಿ ನಿಲಯದಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮ ಪ್ರತಿ 6 ತಿಂಗಳಿಗೊಮ್ಮೆ ಆಯೋಜಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಎಸ್.ಪಿ ಅಕ್ಷಯ್ ಹಾಕೈ ಮಾತನಾಡಿ, ಜಿಲ್ಲೆಯಲ್ಲಿ ವಿಶೇಷವಾಗಿ ಹಳ್ಳಿ, ತಾಂಡಾದಲ್ಲಿ ನಡೆಯುವ ಬಾಲ್ಯ ವಿವಾಹ ತಡೆಗಟ್ಟಲು ಅರಿವು ಮೂಡಿಸಲಾಗುತ್ತಿದೆ. ಜಿಲ್ಲೆಯ ಗ್ರಾಮಾಂತರದಲ್ಲಿ 16, ನಗರದಲ್ಲಿ 10 ಸೇರಿ 26 ಇ.ಆರ್.ಎಸ್.ಎಸ್.-112 ವಾಹನಗಳಿದ್ದು, ಪ್ರತಿ ದಿನ ಸುಮಾರು 30-40 ಕರೆ ಬರುತ್ತಿದ್ದು, ಇವುಗಳಿಗೆ ತಕ್ಷಣವೇ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಮ್ಮ ಇಲಾಖೆಯ ಕಾರ್ಯಚಟುವಟಿಕೆ ಕುರಿತು ಮಾಹಿತಿ ನೀಡಿದರು.

ಗೊಬ್ಬೂರ ಭೇಟಿಯಲ್ಲಿ ಅನೇಕ ತೊಂದರೆಗಳು ಬಹಿರಂಗ: ಮಂಗಳವಾರ ಅಫಜಲ್ಪುರ ತಾಲೂಕಿನ ಗೊಬ್ಬೂರ ಪಿ.ಎಚ್.ಸಿ.ಗೆ ಭೇಟಿ ನೀಡಿದ್ದೆ. ಇದೂವರೆಗೆ ಅಲ್ಲಿ ಆರೋಗ್ಯ ಶಿಬಿರ ನಡೆಸಿಲ್ಲ ಎಂದು ಮಹಿಳೆಯರು ದೂರಿದ್ದರು. ನಾನು ಬರುತ್ತಿದ್ದೇನೆ ಎಂದರೆ ಶಿಬಿರ ಆಯೋಜಿಸಿದ್ದೀರಾ, ಹಿಂದೇಕೆ ಆಯೋಜನೆ ಮಾಡಿಲ್ಲ ಎಂದು ಅರೋಗ್ಯ ಅಧಿಕಾರಿಗಳನ್ನು ಖಾರವಾಗಿ ಪ್ರಶ್ನಿಸಿದರು. ಇನ್ನು ಅಲ್ಲಿದ ಗ್ರಾಮ ಪಂಚಾಯತಿ ಮಹಿಳಾ ಅಧ್ಯಕ್ಷೆಗೆ ಯಾವುದರ ಬಗ್ಗೆ ಅರಿವು ಇಲ್ಲ ಎಂದರು. ಜಿಲ್ಲಾ ಪಂಚಾಯ್ತಿ ಸಿ.ಇ.ಓ ಭಂವರ್ ಸಿಂಗ್ ಮೀನಾ ಮಾತನಾಡಿ, ಮಹಿಳಾ ಜನಪ್ರತಿನಿಧಿ ಪ್ರಕರಣಗಳಲ್ಲಿ ಸರ್ಕಾರಿ ಸಭೆ-ಸಮಾರಂಭಗಳಿಗೆ ಪತಿಗಳನ್ನು ಸಭೆಗೆ ಆಹ್ವಾನಿಸದೆ ಮಹಿಳಾ ಜನಪ್ರತಿನಿಧಿಗಳಿಗೆ ಸರ್ಕಾರಿ ಯೋಜನೆಗಳು ಮತ್ತು ಅವರ ಜವಾಬ್ದಾರಿ ಕುರಿತು ಮಾಹಿತಿ ನೀಡಬೇಕೆಂದು ತಮ್ಮ ಕೆಳ ಹಂತದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಡಿ.ಸಿ.ಪಿ. ಕನಿಕಾ ಸಿಕ್ರಿವಾಲ್, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಹೆಚ್ಚುವರಿ ಎಸ್.ಪಿ. ಶ್ರೀನಿಧಿ, ಎ.ಸಿ.ಪಿ. ಬಿಂದುಮಣಿ ಆರ್.ಎನ್., ಡಿ.ಸಿ.ಪಿ.ಓ ಮಂಗಲಾ ಪಾಟೀಲ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.

ಮಿಷನ್ ಸುರಕ್ಷಾ ಕಾರ್ಯಕ್ರಮಕ್ಕೆ ಅಭಿನಂದನೆ: ಸಭೆಯಲ್ಲಿ ಭಾಗವಹಿಸಿದ ಡಿ.ಸಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಜಿಲ್ಲೆಯಲ್ಲಿ ಬಾಲಕೀಯರ ಸಂರಕ್ಷಣೆ ಮತ್ತು ಅರಿವು ಮುಡಿಸುವ ನಿಟ್ಟಿನಲ್ಲಿ ಮಿಷನ್ ಸುರಕ್ಷಾ ಯೋಜನೆಯಡಿ 450 ಜನರನ್ನು ಮಾಸ್ಟರ್ ಟ್ರೇನರ್ ಗಳನ್ನು ನೇಮಕಗೊಳಿಸಿ ಸುಮಾರು 2,198 ಶಾಲೆ, ಕಾಲೇಜು, ವಸತಿ ನಿಲಯಕ್ಕೆ ಹೋಗಿ 4 ಲಕ್ಷ ಮಕ್ಕಳಿಗೆ ಅರಿವು ಮೂಡಿಸಲಾಗಿದೆ ಎಂದಾಗ ಡಾ.ನಾಗಲಕ್ಷ್ಮೀ ಚೌಧರಿ ಮಾತನಾಡಿ, ಅರಿವು ಹೆಚ್ಚಾದರೆ ಕ್ರೈಂ ಕಡಿಮೆಯಾಗಿ ಕೆಲಸವು ಕಡಿಮೆಯಾಗುತ್ತದೆ. ಮಿಷನ್ ಸುರಕ್ಷಾ ಅನುಷ್ಠನಾಕ್ಕೆ ಶ್ರಮಿಸಿದ ಜಿಲ್ಲಾಡಳಿತಕ್ಕೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಅಭಿನಂದನೆ ಸಲ್ಲಿಸಿಸಿದರು.

ಕ್ಯಾಂಪಸ್ ಮರ್ಡರ್ ಹಿನ್ನೆಲೆ, ಭದ್ರತೆ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳದ್ದು: ಇತ್ತೀಚೆಗೆ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರ ಮರ್ಡರ್ ಪ್ರಕರಣಗಳು ಕಾಣುತ್ತಿವೆ. ಧಾರವಾಡ ನೇಹಾ ಪ್ರಕರಣ ನಮ್ಮ ಮುಂದಿದೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಡಿ.ಸಿ, ಎಸ್.ಪಿ ಅವರು ಪತ್ರ ಬರೆದು ಭದ್ರತೆ ಜವಾಬ್ದಾರಿ ಸಂಸ್ಥೆದು ಎಂದು ಸ್ಪಷ್ಟವಾಗಿ ತಿಳಿಸಬೇಕು. ಹೆಚ್ಚಿನ ಶುಲ್ಕ ಪಡೆಯುವ ಸಂಸ್ಥೆಗಳು ವಿದ್ಯಾರ್ಥಿಗಳ ಸುರಕ್ಷಾ ಜವಾಬ್ದಾರಿ ಹೊರಬಾರದೆ ಎಂದರು.