ಕನ್ನಡಪ್ರಭ ವಾರ್ತೆ ಮಂಡ್ಯ

ನಲ್ವತ್ತು ವರ್ಷದ ಪರಿಶ್ರಮಕ್ಕೆ ಈಗ ಫಲ ಸಿಕ್ಕಿದೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಿರುವುದು ನನಗೆ ಅತೀವ ಖುಷಿ ತಂದಿದೆ. ನಾನೂ ಸಹ ಡಿಕೆಶಿ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಪಟ್ಟಿದ್ದೆ. ಈಗ ಈಡೇರುತ್ತಿದೆ ಎಂದು ಶಾಸಕ ಪಿ. ರವಿಕುಮಾರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಕಷ್ಟ ಕಾಲದಲ್ಲೂ ಡಿ.ಕೆ.ಶಿವಕುಮಾರ್ ಅವರು ನನ್ನೊಂದಿಗೆ ಇದ್ದರು. ಮುಂದೆಯೂ ಅವರು ನನ್ನ ಬೆಂಬಲಕ್ಕೆ ನಿಲ್ಲುತ್ತಾರೆ. ನನ್ನ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದು ಕೆಲಸ ಮಾಡಿದ್ದೇನೆ ಎಂದರು.

ಕಳೆದ ಮೂರು ವರ್ಷಗಳ ನಮ್ಮ ಸರ್ಕಾರದ ಅಧಿಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಒಂದು ಕಪ್ಪುಚುಕ್ಕೆ ಇಲ್ಲದಂತೆ ಆಡಳಿತ ನಡೆಸಿದ್ದಾರೆ. ಅದೇ ಮಾದರಿಯಲ್ಲಿ ಡಿ.ಕೆ.ಶಿವಕುಮಾರ್ ಕೂಡ ಮುಂದುರಿಸಿಕೊಂಡು ಹೋಗುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಇಷ್ಟು ದಿನ ಸಿದ್ದರಾಮಯ್ಯ ಆಡಳಿತ ಸರಿಯಿಲ್ಲ ಎಂದು ವಿಪಕ್ಷಗಳು ಹೇಳುತ್ತಿದ್ದರು. ಈಗ ಸಿದ್ದರಾಮಯ್ಯ ಅವರಿಗೆ ಅನ್ಯಾಯ ಆಗಿದೆ ಎನ್ನುತ್ತಿದ್ದಾರೆ. ಅವರದ್ದು ಡಬಲ್ ಸ್ಟ್ಯಾಂಡ್. ನಾಯಕತ್ವ ಬದಲಾವಣೆ ವಿಚಾರದಲ್ಲಿ ಅವರಂತೆ ನಮ್ಮಲ್ಲೂ ಜಗಳ ಆಗುತ್ತೆ ಎಂದು ನಿರೀಕ್ಷಿಸಿದ್ದರು. ಆದರೆ, ಯಾವುದೇ ಗೊಂದಲವಿಲ್ಲದೆ ಎಲ್ಲವೂ ಸರಳವಾಗಿಯೇ ನಡೆದು ಅಧಿಕಾರ ಹಸ್ತಾಂತರವಾಗಿದೆ ಎಂದರು.


ನನಗೆ ಯಾವುದೇ ಸಚಿವ ಸ್ಥಾನದ ಮೇಲೆ ಆಸೆ ಇಲ್ಲ. ನಾನು ಮೊದಲ ಬಾರಿ ಆಯ್ಕೆಯಾಗಿದ್ದೇನೆ. ಹಿರಿಯರಿಗೆ ಅವಕಾಶ ಸಿಗಲಿ. ಆದರೆ, ಅರ್ಹ ಹೊಸಬರಿಗೂ ಅವಕಾಶ ಸಿಗಬೇಕು. ಪಕ್ಷದಲ್ಲಿ ಅಶೋಕ್ ರೈ, ಶಿವಗಂಗಾ ಬಸವರಾಜು, ಭರತ್‌ರೆಡ್ಡಿ, ಪ್ರದೀಪ್ ಈಶ್ವರ್ ಅಂತಹ ಹೊಸ ಹಾಗೂ ಉತ್ಸಾಹವಿರುವ ಶಾಸಕರಿಗೆ ಅವಕಾಶ ಸಿಗಬೇಕು ಎಂದು ಪ್ರತಿಪಾದಿಸಿದರು.

ನನ್ನ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಸಿಕ್ಕಿದೆ. ನಾನು ಇನ್ನೂ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕು. ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಸಿಕ್ಕಿರುವುದು ನನಗೇ ಸಿಕ್ಕಷ್ಟೇ ಖುಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಜಿಲ್ಲೆಗೆ ಎರಡು ಸಚಿವ ಸ್ಥಾನ ಸಿಗಲಿ ಎಂಬುದು ನಮ್ಮ ಬೇಡಿಕೆ. ಸಚಿವರಾಗಿ ಚಲುವರಾಯಸ್ವಾಮಿ ಅವರು ಉತ್ತಮ ಕೆಲಸ ಮಾಡಿದ್ದಾರೆ. ನರೇಂದ್ರಸ್ವಾಮಿ ಅವರಿಗೆ ಬೇರೆ ಕೋಟಾ ಇದೆ. ಆದರೆ, ರಮೇಶ್‌ ಬಂಡಿಸಿದ್ದೇಗೌಡ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರ ತಂದೆ ಮತ್ತು ತಾಯಿ ಕೂಡ ಶಾಸಕರಾಗಿ ಕೆಲಸ ಮಾಡಿದ್ದಾರೆ. ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ಸಿಕ್ಕರೆ ಇನ್ನಷ್ಟು ಅಭಿವೃದ್ಧಿಯಾಗಲಿದೆ ಎಂದರು.