₹41.40 ಕೋಟಿ ಬರ ಪರಿಹಾರ ಬಿಡುಗಡೆ: ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ

| Published : May 19 2024, 01:50 AM IST

₹41.40 ಕೋಟಿ ಬರ ಪರಿಹಾರ ಬಿಡುಗಡೆ: ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ
Share this Article
  • FB
  • TW
  • Linkdin
  • Email

ಸಾರಾಂಶ

2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಎಲ್ಲ 5 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು.

ಬಳ್ಳಾರಿ: ಬರಗಾಲದಿಂದ ತತ್ತರಿಸಿದ ಜಿಲ್ಲೆಯ ರೈತರಿಗೆ ಪರಿಹಾರದ ಹಣ ರೈತರ ಖಾತೆಗೆ ಜಮೆಯಾಗಿದೆ. ಜಿಲ್ಲೆಯನ್ನು ಬರಗಾಲ ಬರಪೀಡಿತ ಎಂದು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲೆಯ 36,944 ರೈತರ ಖಾತೆಗೆ ಎರಡು ಹಂತಗಳಲ್ಲಿ ಡಿಬಿಟಿ ಮೂಲಕ ₹41.40 ಕೋಟಿ ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ತಿಳಿಸಿದ್ದಾರೆ.

2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಎಲ್ಲ 5 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ಮುಂಗಾರು ಹಂಗಾಮಿನಲ್ಲಿ ಹಾನಿಯಾಗಿರುವ ಬೆಳೆಗಳಿಗೆ ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿಯ ಆಧಾರದ ಮೇರೆಗೆ ಫ್ರೂಟ್ಸ್ ಐಡಿ ಹೊಂದಿರುವ, ಪಹಣಿ ಜೋಡಣೆಯಾಗಿರುವ ರೈತರಿಗೆ ಡಿಬಿಟಿ ಮೂಲಕ ಎಸ್‍ಡಿಆರ್‌ಎಫ್‌ ಮಾರ್ಗಸೂಚಿಯಂತೆ ಈಗಾಗಲೇ 9 ಕಂತುಗಳ ಪೈಕಿ ಮೊದಲನೆ ಕಂತಾಗಿ ಗರಿಷ್ಠ ₹2000 ರವರೆಗೆ ಒಟ್ಟು 36,944 ರೈತರಿಗೆ ₹7.26 ಕೊಟಿ ಪರಿಹಾರ ಬೆಳೆ ಹಾನಿ ಪರಿಹಾರ ವಿತರಿಸಲಾಗಿದೆ. ಎರಡನೇ ಹಂತದಲ್ಲಿ ಜಿಲ್ಲೆಯ ಅರ್ಹ 31351 ರೈತರಿಗೆ ಎನ್‍ಡಿಆರ್‌ಎಫ್‌ ಮಾರ್ಗಸೂಚಿನ್ವಯ ₹34.03 ಕೋಟಿ ಪರಿಹಾರವನ್ನು (ಇನ್ ಪುಟ್ ಸಬ್ಸಿಡಿ) ವಿತರಣೆ ಮಾಡಲು ಅನುಮೋದನೆ ನೀಡಿ, ಡಿಬಿಟಿ ಮೂಲಕ ರೈತರ ಖಾತೆಗೆ ಜಮೆ ಮಾಡಲಾಗಿದೆ. ಇಲ್ಲಿಯವರೆಗೆ ಜಿಲ್ಲೆಯ 2 ಹಂತದಲ್ಲಿ ಒಟ್ಟು 36,944 ರೈತರಿಗೆ ₹41.30 ಕೋಟಿಗಳನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ.

ಬೆಳೆ ಹಾನಿ ಪರಿಹಾರ ಹಣ ಖಾತೆಗೆ ಜಮಾ ಆಗದೇ ಇರುವ ಬಗ್ಗೆ ದೂರುಗಳನ್ನು ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಜಿಲ್ಲಾ ಮತ್ತು ತಾಲೂಕುವಾರು ಸಹಾಯವಾಣಿ ತೆರೆಯಲಾಗಿದೆ. ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಮಿಶ್ರಾ ಹೇಳಿದ್ದಾರೆ.

ಜಿಲ್ಲಾ, ತಾಲೂಕುವಾರು ಸಹಾಯವಾಣಿ ಸಂಖ್ಯೆ:

ಜಿಲ್ಲಾಧಿಕಾರಿ ಕಾರ್ಯಾಲಯದ ದೂರವಾಣಿ ಸಂಖ್ಯೆ 1077 ಅಥವಾ 08392-277100, ಬಳ್ಳಾರಿ ತಾಲೂಕು ತಹಶೀಲ್ದಾರರ ಕಚೇರಿಯ ದೂ.08392-297472, ಸಂಡೂರು ತಹಶೀಲ್ದಾರರ ಕಚೇರಿಯ ದೂ.08395-260241, ಸಿರುಗುಪ್ಪ ತಹಶೀಲ್ದಾರರ ಕಚೇರಿಯ ದೂ.08396-220238, ಕುರುಗೋಡು ತಹಶೀಲ್ದಾರರ ಕಚೇರಿಯ ದೂ.08393-200014, ಕಂಪ್ಲಿ ಕುರುಗೋಡು ತಹಶೀಲ್ದಾರರ ಕಚೇರಿಯ ದೂ.08394-295554 ಗೆ ಸಂಪರ್ಕಿಸಬಹುದು.

ಬೆಳೆ ಹಾನಿ ಪರಿಹಾರ ಪಡೆದುಕೊಳ್ಳಲು ಫ್ರೂಟ್ಸ್ ಐಡಿಗೆ ಪಹಣಿ ಜೋಡಣೆ ಕಡ್ಡಾಯವಾಗಿರುವುದರಿಂದ ಇದುವರೆಗೂ ಫ್ರೂಟ್ಸ್ ಐಡಿ ನೋಂದಣಿ ಮಾಡಿಕೊಳ್ಳಲ್ಲದ ರೈತರು ತಮ್ಮ ಆಧಾರ್, ಪಹಣಿ ಹಾಗೂ ಬ್ಯಾಂಕ್ ಪಾಸ್‍ಬುಕ್ ದಾಖಲೆಗಳನ್ನು ತೆಗೆದುಕೊಂಡು ಹತ್ತಿರದ ಕಂದಾಯ, ಕೃಷಿ ಅಥವಾ ತೋಟಗಾರಿಕೆ ಇಲಾಖೆಗಳ ಕಚೇರಿಗಳಿಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಅಂತಹ ರೈತರು ಬೆಳೆ ಪರಿಹಾರ ಹಣ ಪಡೆದುಕೊಳ್ಳಲು ಅರ್ಹರಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.