ಸಾರಾಂಶ
ಹಳಕಟ್ಟಿ ಅವರು ಹತ್ತಾರು ವರ್ಷಗಳಿಂದ ಮಾರುಕಟ್ಟೆಯಲ್ಲಿ ರೈತರಿಂದ ಖರೀದಿ ಮಾಡುತ್ತಿದ್ದಾರೆ. ಸರಿಯಾಗಿಯೇ ಹಣ ನೀಡುತ್ತಿದ್ದ ಅವರು ಇತ್ತೀಚೆಗೆ ಹಲವು ರೈತರಿಂದ ಖರೀದಿಸಿದ ಕಾಳಿನ ಬಿಲ್ ಪಾವತಿ ಮಾಡಿಲ್ಲ.
ಧಾರವಾಡ:
ಮುಂಗಾರು ಪೂರ್ವ ಮಳೆ ರೈತರಿಗೆ ಖುಷಿ ನೀಡಿದ್ದು ಇನ್ನೇನು ಮುಂಗಾರು ಬಿತ್ತನೆಗೆ ಬೀಜ, ಗೊಬ್ಬರ ಸಿದ್ಧಪಡಿಸುವ ಸಮಯದಲ್ಲಿ ಧಾರವಾಡ ಹಾಗೂ ನವಲಗುಂದ ತಾಲೂಕಿನ ಅನೇಕ ರೈತರಿಗೆ ಇಲ್ಲಿಯ ಎಪಿಎಂಸಿಯಲ್ಲಿನ ದಲ್ಲಾಳಿಯೊಬ್ಬ ಮೋಸ ಮಾಡಿದ ಘಟನೆ ನಡೆದಿದೆ.ಇಲ್ಲಿಯ ಹೊಸ ಎಪಿಎಂಸಿಯಲ್ಲಿರುವ ಆರ್.ಸಿ. ಹಳಕಟ್ಟಿ ಹೆಸರಿನ ಕಮಿಶನ್ ಎಜೆಂಟ್ ರೈತರಿಂದ ಕಾಳು ಖರೀದಿಸಿ ಹಣ ಕೊಡದೇ ಮೋಸ ಮಾಡಿದ್ದು ಶನಿವಾರ ಅಂಗಡಿಗೆ ಬಂದ ರೈತರು ಕೀಲಿ ಜಡಿದು ಪ್ರತಿಭಟಿಸಿದರು. ಧಾರವಾಡದ ಕುರುಬಗಟ್ಟಿ, ಲೋಕೂರು, ಶಿಬಾರಗಟ್ಟಿ, ನವಲಗುಂದದ ಶಿರೂರು ಸೇರಿದಂತೆ ಅನೇಕ ಗ್ರಾಮಗಳ ರೈತರು ಬೆಳೆದ ಬೆಳೆಯನ್ನು ಎಪಿಎಂಸಿಯಲ್ಲಿರುವ ಆರ್.ಸಿ ಹಳಕಟ್ಟಿ ಎಂಬುವರಿಗೆ ಮಾರಾಟ ಮಾಡಿದ್ದರು. ರೈತರಿಂದ ಧಾನ್ಯ ಖರೀದಿಸಿದ್ದ ಹಳಕಟ್ಟಿ ಅವರು ಕಳೆದ ದೀಪಾವಳಿ ಹಬ್ಬದಿಂದ ರೈತರಿಗೆ ಹಣ ಪಾವತಿಸಿಲ್ಲ. ಪ್ರತಿ ರೈತರಿಗೆ ₹ 5ರಿಂದ ₹ 10 ಲಕ್ಷವನ್ನು ಹಳಕಟ್ಟಿ ನೀಡಬೇಕಿದೆ. ಆದರೆ, ರೈತರಿಗೆ ಭೇಟಿ ಆಗದೇ, ಅಂಗಡಿಯ ಬಾಗಿಲು ಸಹ ತೆರೆಯದೇ ಪರಾರಿಯಾಗಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಹಳಕಟ್ಟಿ ಅವರು ಹತ್ತಾರು ವರ್ಷಗಳಿಂದ ಮಾರುಕಟ್ಟೆಯಲ್ಲಿ ರೈತರಿಂದ ಖರೀದಿ ಮಾಡುತ್ತಿದ್ದಾರೆ. ಸರಿಯಾಗಿಯೇ ಹಣ ನೀಡುತ್ತಿದ್ದ ಅವರು ಇತ್ತೀಚೆಗೆ ಹಲವು ರೈತರಿಂದ ಖರೀದಿಸಿದ ಕಾಳಿನ ಬಿಲ್ ಪಾವತಿ ಮಾಡಿಲ್ಲ. ರೈತರಿಗೆ ಬಿಲ್ ಪಾವತಿ ಮಾಡದೇ ತಮ್ಮ ಅಂಗಡಿ ಹಾಗೂ ಮನೆಗೆ ಬೀಗ ಜಡಿದು ಜಾಗ ಖಾಲಿ ಮಾಡಿದ್ದಾರೆ. ಸರಿ ಸುಮಾರು ಎರಡ್ಮೂರು ಕೋಟಿಯಷ್ಟು ರೈತರ ಬಿಲ್‌ನ್ನು ಈ ಹಳಕಟ್ಟಿ ಬಾಕಿ ಇರಿಸಿಕೊಂಡಿದ್ದಾರೆ ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಾಳನಗೌಡರ ಆಕ್ರೋಶ ವ್ಯಕ್ತಪಡಿಸಿದರು.ಈ ಬಗ್ಗೆ ಧಾರವಾಡದ ಉಪನಗರ ಠಾಣೆಯಲ್ಲಿ ರೈತರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.