ಕರ್ನಾಟಕ ಮಾಹಿತಿ ಆಯೋಗದಲ್ಲಿ 41 ಸಾವಿರ ಅರ್ಜಿ ಬಾಕಿ!

| Published : Sep 09 2025, 01:00 AM IST

ಸಾರಾಂಶ

ರಾಮನಗರ: ಆಡಳಿತದಲ್ಲಿ ಪಾರದರ್ಶಕತೆ, ಅಧಿಕಾರಿಗಳಲ್ಲಿ ಕರ್ತವ್ಯ ನಿಷ್ಠೆ ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಹಕಾರಿಯಾಗಿರುವ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ಸಲ್ಲಿಕೆಯಾಗುತ್ತಿರುವ ಅರ್ಜಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದು, ಕರ್ನಾಟಕ ಮಾಹಿತಿ ಆಯೋಗದ ಬಳಿ 41,856 ಮೇಲ್ಮನವಿ ಅರ್ಜಿಗಳು ವಿಚಾರಣೆಗೆ ಬಾಕಿ ಇವೆ.

ರಾಮನಗರ: ಆಡಳಿತದಲ್ಲಿ ಪಾರದರ್ಶಕತೆ, ಅಧಿಕಾರಿಗಳಲ್ಲಿ ಕರ್ತವ್ಯ ನಿಷ್ಠೆ ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಹಕಾರಿಯಾಗಿರುವ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ಸಲ್ಲಿಕೆಯಾಗುತ್ತಿರುವ ಅರ್ಜಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದು, ಕರ್ನಾಟಕ ಮಾಹಿತಿ ಆಯೋಗದ ಬಳಿ 41,856 ಮೇಲ್ಮನವಿ ಅರ್ಜಿಗಳು ವಿಚಾರಣೆಗೆ ಬಾಕಿ ಇವೆ.

ರಾಜ್ಯದಲ್ಲಿಯೇ ಅತಿ ಹೆಚ್ಚು ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ 9868 ಅರ್ಜಿಗಳು ಸಲ್ಲಿಕೆಯಾಗಿವೆ. 2ನೇ ಸ್ಥಾನದಲ್ಲಿ ಬೆಳಗಾವಿ ಜಿಲ್ಲೆ (3503 ಅರ್ಜಿಗಳು) ಮತ್ತು 3ನೇ ಸ್ಥಾನದಲ್ಲಿ ಕೋಲಾರ ಜಿಲ್ಲೆ (2308 ಅರ್ಜಿಗಳು) ಇದೆ. ಕೊಡಗು ಜಿಲ್ಲೆ (53 ಅರ್ಜಿಗಳು), ಚಿಕ್ಕಮಗಳೂರು ಜಿಲ್ಲೆ (195), ದಕ್ಷಿಣ ಕನ್ನಡ ಜಿಲ್ಲೆ (265 ಅರ್ಜಿಗಳು)ಗಳಿಂದ ಕಡಿಮೆ ಅರ್ಜಿಗಳು ಸಲ್ಲಿಕೆಯಾಗಿ ಕೊನೆ ಸ್ಥಾನದಲ್ಲಿವೆ. ಬೆಂಗಳೂರು ದಕ್ಷಿಣ ಜಿಲ್ಲೆ 695 ಅರ್ಜಿಗಳನ್ನು ಹೊಂದಿ 21ನೇ ಸ್ಥಾನದಲ್ಲಿದೆ.

ಗ್ರಾಪಂ ಇಲಾಖೆಗೆ ಹೆಚ್ಚು ಅರ್ಜಿಗಳು :

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (13,094 ಅರ್ಜಿ) , ಕಂದಾಯ ಇಲಾಖೆ (7110 ಅರ್ಜಿ) ಹಾಗೂ ನಗರಾಭಿವೃದ್ಧಿ ಇಲಾಖೆ (5906 ಅರ್ಜಿ)ಗಳಿಗೆ ಅತಿ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಗ್ರಾಮ ಪಂಚಾಯಿತಿಗಳು ನಡೆಸಿರುವ ಕಾಮಗಾರಿ ಮತ್ತು ಅನುದಾನ ಬಳಕೆಯ ಕುರಿತು ಅತಿ ಹೆಚ್ಚು ಮಾಹಿತಿಗಳನ್ನು ಕೇಳಲಾಗಿದೆ.

ಮಹಾಮಾರಿ ಕರೋನಾ ಆವರಿಸಿದ್ದ 2020 ಮತ್ತು 2021ನೇ ಸಾಲಿನಲ್ಲಿ ಮೇಲ್ಮನವಿ ಅರ್ಜಿಗಳ ವಿಚಾರಣೆ ನಡೆಯಲಿಲ್ಲ. ಅಲ್ಲದೆ, ಈ ಅವಧಿಯಲ್ಲಿ ಮಾಹಿತಿ ಆಯುಕ್ತರ ಹುದ್ದೆಗಳು ಕೆಲಕಾಲ ಖಾಲಿಯಾಗಿದ್ದರಿಂದ ಮೇಲ್ಮನವಿ ಅರ್ಜಿಗಳ ವಿಚಾರಣೆ ನಡೆಯಲಿಲ್ಲ. ಈ ಕಾರಣದಿಂದಾಗಿಯೇ ಹೆಚ್ಚು ಅರ್ಜಿಗಳು ಬಾಕಿ ಉಳಿದಿವೆ.

ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 4 (1)ಎ ಮತ್ತು 4(1)ಬಿ ಯಲ್ಲಿ ಲಭ್ಯವಿರುವ ಮಾಹಿತಿಯನ್ನು ಡಿಜಿಟಲೀಕರಣ ಮಾಡಿ ವೆಬ್‌ ಸೈಟ್‌ನಲ್ಲಿ ಅಪ್ಲೋಡ್ ಮಾಡಬೇಕು ಇದು ಕಡ್ಡಾಯ. ಸಾರ್ವಜನಿಕ ಮಾಹಿತಿ ಎಂದರೆ ಅದಕ್ಕೂ ಮಿತಿ ಇದೆ ನಿರಾಕರಿಸುವ ಅವಕಾಶವೂ ಇದೆ. ಯಾವ ಯಾವ ಹಂತದಲ್ಲಿ ಯಾವ ಮಾಹಿತಿಯನ್ನು ಒದಗಿಸಬೇಕು ಎನ್ನುವುದರ ಬಗ್ಗೆ ಕಾಯ್ದೆಯಲ್ಲಿ ತಿಳಿಸಲಾಗಿದೆ.

ಅರ್ಜಿಗಳು ಹೆಚ್ಚಾಗಲು ಅಧಿಕಾರಿಗಳ ನಿರ್ಲಕ್ಷ್ಯ ಕಾರಣ:

ಕಾಯ್ದೆಯೊಂದಿಗೆ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನ ನೀತಿ ನಿಯಮಗಳನ್ನು ಓದಿಕೊಳ್ಳಬೇಕು. ಅವುಗಳ ಕಾಲ ಕಾಲಕ್ಕೆ ಹೊರಡಿಸುವ ತೀರ್ಪುಗಳನ್ನು ತಿಳಿದುಕೊಂಡರೆ ಅತ್ಯಂತ ಉಪಯುಕ್ತವಾಗುತ್ತದೆ. ಆದರೆ, ಇದ್ಯಾವುದನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗಳು ತಿಳಿದುಕೊಳ್ಳುವ ಪ್ರಯತ್ನವನ್ನೇ ಮಾಡುತ್ತಿಲ್ಲ.

ಇಷ್ಟೇ ಅಲ್ಲದೆ, ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಆರ್ ಟಿಐ ಅರ್ಜಿದಾರರಿಗೆ ಸಮರ್ಪಕವಾಗಿ ಮಾಹಿತಿ ಕೊಡುತ್ತಿಲ್ಲ. ಪ್ರಥಮ ಮೇಲ್ಮನವಿ ಪ್ರಾಧಿಕಾರಗಳೂ ಸ್ಪಂದಿಸದೆ ವಿಳಂಬ ಮಾಡುತ್ತಿದ್ದಾರೆ. ಮಾಹಿತಿ ಲಭ್ಯವಿಲ್ಲದಿದ್ದರೆ ಎಲ್ಲಿ ಸಿಗುತ್ತದೆ ಎಂಬ ಸ್ಪಷ್ಟ ಹಿಂಬರಹ ನೀಡದೆ ಅರ್ಜಿದಾರರನ್ನು ಅಲೆಡಾಡಿಸುತ್ತಾರೆ. ಇದರಿಂದಾಗಿ ಆಯೋಗಕ್ಕೆ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗುತ್ತಿವೆ.

ಆಡಳಿತದಲ್ಲಿ ಪಾರದರ್ಶಕತೆ ತರಬೇಕೆಂಬ ಉದ್ದೇಶದಿಂದ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಲಾಯಿತು. ಆದರೆ, ಕೆಲವು ಆರ್‌ಟಿಐ ಕಾರ್ಯಕರ್ತರು ವೈಯಕ್ತಿಕ ಹಿತಾಸಕ್ತಿ ಮತ್ತು ಹಣ ಗಳಿಕೆಗಾಗಿ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ನಿರಂತರವಾಗಿ ಕೇಳಿ ಬರುತ್ತಲೇ ಇವೆ.

ಬೆಳಗಾವಿ ಜಿಲ್ಲೆಯಲ್ಲಿ ಒಬ್ಬ ಅರ್ಜಿದಾರ 4ರಿಂದ 5 ಸಾವಿರ ಅರ್ಜಿಗಳನ್ನು ಹಾಕಿರುವುದು ಗಮನಕ್ಕೆ ಬಂದಿದೆ. ಹೀಗೆ ಪದೇ ಪದೇ ಅರ್ಜಿ ಸಲ್ಲಿಸುವ ಮತ್ತು ಸಾರ್ವಜನಿಕ ಹಿತಾಸಕ್ತಿಯಿಲ್ಲದೆ ಮಾಹಿತಿ ಕೇಳುವ 26 ಅರ್ಜಿದಾರರನ್ನು ಪತ್ತೆ ಮಾಡಿ, ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ಮಾಹಿತಿ ಆಯುಕ್ತ ಡಾ.ಹರೀಶ್ ಕುಮಾರ್ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.

ಕೋಟ್ ................

ಬೆಂಗಳೂರಿನಲ್ಲಿ 9, ಕಲಬುರ್ಗಿ ಮತ್ತು ಬೆಳಗಾವಿಯಲ್ಲಿ ತಲಾ 1 ಸೇರಿದಂತೆ ಒಟ್ಟು 11 ಪೀಠಗಳನ್ನು ಒಳಗೊಂಡಿರುವ ರಾಜ್ಯ ಮಾಹಿತಿ ಆಯೋಗಕ್ಕೆ ಪ್ರತಿ ತಿಂಗಳು ಸರಾಸರಿ 2,500ರಿಂದ 3,000 ಅರ್ಜಿಗಳು ಸಲ್ಲಿಕೆಯಾಗುತ್ತಿರುವುದರಿಂದ ಸಕಾಲದಲ್ಲಿ ವಿಲೇವಾರಿ ಮಾಡುವುದು ದೊಡ್ಡ ಸವಾಲಾಗಿದೆ. ನಾವು ಆಯುಕ್ತರಾಗಿ ನೇಮಕವಾದ 4 ತಿಂಗಳಲ್ಲಿಯೇ 5 ಸಾವಿರ ಮೇಲ್ಮನವಿ ಅರ್ಜಿ ವಿಲೇವಾರಿ ಮಾಡಿದ್ದೇವೆ. ಬಾಕಿ ಅರ್ಜಿಗಳ ವಿಲೇವಾರಿಗೆ ಕ್ರಮವಹಿಸಲಾಗಿದೆ.

-ಕೆ.ಬದ್ರುದ್ದೀನ್ ರಾಜ್ಯ ಮಾಹಿತಿ ಆಯುಕ್ತರು.

ಬಾಕ್ಸ್ ..................

ಜಿಲ್ಲಾವಾರು ಬಾಕಿ ಅರ್ಜಿಗಳು :

ರಾಯಚೂರು - 2235 ಬಾಗಲಕೋಟೆ - 2126 , ವಿಜಯಪುರ - 1937, ಧಾರವಾಡ - 1592, ಕಲ್ಬುರ್ಗಿ - 1447, ತುಮಕೂರು - 11357, ಬೆಂಗಳೂರು (ಗ್ರಾ) - 1301, ಹಾವೇರಿ - 1137, ಮೈಸೂರು - 1105, ಕೊಪ್ಪಳ - 1053, ಬಳ್ಳಾರಿ - 981, ವಿಜಯಪುರ - 937, ಮಂಡ್ಯ - 905, ಉತ್ತರ ಕನ್ನಡ - 830, ಚಿಕ್ಕಬಳ್ಳಾಪುರ - 817, ಚಾಮರಾಜನಗರ - 787, ಯಾದಗಿರಿ - 725, ಗದಗ - 666, ಚಿತ್ರದುರ್ಗ - 621, ಶಿವಮೊಗ್ಗ - 618, ಉಡುಪಿ - 583, ದಾವಣಗೆರೆ - 463, ಹಾಸನ - 399, ಬೀದರ್ - 346 ಅರ್ಜಿಗಳು.

ಬಾಕ್ಸ್ ..............

ಇಲಾಖಾವಾರು ಬಾಕಿ ಅರ್ಜಿಗಳು :

ಶಿಕ್ಷಣ ಇಲಾಖೆ - 1909, ಸಮಾಜ ಕಲ್ಯಾಣ ಇಲಾಖೆ - 1522, ಜಲ ಸಂಪನ್ಮೂಲ ಇಲಾಖೆ - 1459, ಗೃಹ ಇಲಾಖೆ - 1454, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ - 1292, ಅರಣ್ಯ ಇಲಾಖೆ - 998, ಕೃಷಿ ಇಲಾಖೆ - 741, ಇಂಧನ ಇಲಾಖೆ - 595, ಸಹಕಾರಿ ಇಲಾಖೆ - 444, ಸಾರಿಗೆ ಇಲಾಖೆ - 377, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ - 263 ಅರ್ಜಿಗಳು.

8ಕೆಆರ್ ಎಂಎನ್ 1.ಜೆಪಿಜಿ

ಕೆ.ಬದ್ರುದ್ದೀನ್ ರಾಜ್ಯ ಮಾಹಿತಿ ಆಯುಕ್ತರು.