ಸಾರಾಂಶ
ಹೊನ್ನಾಳಿ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ಹಾಗೂ ಹೆಚ್ಚುವರಿ ನ್ಯಾಯಾಲಯದಲ್ಲಿ ಶನಿವಾರ ರಾಷ್ಟ್ರೀಯ ಲೋಕ್ ಆದಾಲತ್ ನಡೆಯಿತು. ಪ್ರಧಾನ ಸಿವಿಲ್ ನ್ಯಾಯಾಧೀಶ ದೇವದಾಸ್ ಹಾಗೂ ಹೆಚ್ಚುವರಿ ನ್ಯಾಯಾಲಯ ನ್ಯಾಯಾಧೀಶ ಪುಣ್ಯಕೋಟಿ ಸಮ್ಮುಖ ಸುಮಾರು 447 ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥಪಡಿಸಲಾಯಿತು.
ಕನ್ನಡ ಪ್ರಭ ವಾರ್ತೆ ಹೊನ್ನಾಳಿ
ಹೊನ್ನಾಳಿ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ಹಾಗೂ ಹೆಚ್ಚುವರಿ ನ್ಯಾಯಾಲಯದಲ್ಲಿ ಶನಿವಾರ ರಾಷ್ಟ್ರೀಯ ಲೋಕ್ ಆದಾಲತ್ ನಡೆಯಿತು. ಪ್ರಧಾನ ಸಿವಿಲ್ ನ್ಯಾಯಾಧೀಶ ದೇವದಾಸ್ ಹಾಗೂ ಹೆಚ್ಚುವರಿ ನ್ಯಾಯಾಲಯ ನ್ಯಾಯಾಧೀಶ ಪುಣ್ಯಕೋಟಿ ಸಮ್ಮುಖ ಸುಮಾರು 447 ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥಪಡಿಸಲಾಯಿತು.10 ವಷಗಳಿಂದ ಬೇರೆ ಬೇರೆಯಾಗಿದ್ದ ದಂಪತಿ ಶನಿವಾರ ನಡೆದ ಲೋಕ್ ಅದಾಲತ್‌ನಲ್ಲಿ ಉಭಯ ನ್ಯಾಯಾಧೀಶರ ಸಮ್ಮುಖ ಪರಸ್ಪರ ಪುಷ್ಪಹಾರ ಬದಲಿಸಿಕೊಂಡು, ದಾಂಪತ್ಯ ಜೀವನ ಮುಂದುವರಿಸಲು ಒಪ್ಪಿದ್ದು ವಿಶೇಷವಾಗಿತ್ತು.
ತಾಲೂಕಿನ ದೊಡ್ಡೇರಳ್ಳಿಯಲ್ಲಿ 2014ರಲ್ಲಿ ಬಸವರಾಜ ಮತ್ತು ಆಶಾ ಯಾನೆ ನಂದಿನಿ ಮದುವೆಯಾಗಿದ್ದರು. ವಿವಾಹವಾದ ಕೆಲವೇ ತಿಂಗಳಲ್ಲೇ ಇಬ್ಬರ ನಡುವೆ ಭಿನ್ನಾಭಿಪ್ರಾಯ ತಲೆದೋರಿತ್ತು. ಬೇರೆ ಬೇರೆಯಾಗಿ ವಾಸಿಸಲು ಆರಂಭಿಸಿದರು. ಅನಂತರ ಪತ್ನಿ ಆಶಾ ಯಾನೆ ನಂದಿನಿ, ತನ್ನ ಜೀವನಾಂಶಕ್ಕಾಗಿ ಹಾಗೂ ಗಂಡ ಬಸವರಾಜ ತನ್ನ ಹೆಂಡತಿಯಿಂದ ಡೈವೋರ್ಸ್‌ಗಾಗಿ 2019ರಲ್ಲಿ ವಕೀಲರ ಮೂಲಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಬಸವರಾಜರ ಪತ್ನಿ ಪರವಾಗಿ ಎಂ.ಗುಡ್ಡಪ್ಪ ಹಾಗೂ ಗಂಡ ಬಸವರಾಜ ಪರವಾಗಿ ಎಚ್.ಸಂಜೀವಪ್ಪ ವಕಾಲತ್ತು ನಡೆಸಿದ್ದರು.ಶನಿವಾರ ನಡೆದ ಲೋಕ್ ಅದಾಲತ್‌ನಲ್ಲಿ ಮನೆಯವರು, ವಕೀಲರ ಬುದ್ಧಿಮಾತಿನಿಂದ ಮನಸು ಪರಿವರ್ತಿಸಿಕೊಂಡರು. ಶನಿವಾರ ಉಭಯ ನ್ಯಾಯಾಲಯಗಳ ನ್ಯಾಯಾಧೀಶರ ಸಮ್ಮುಖ ಪರಸ್ಪರ ಹೂವಿನಹಾರ ಹಾಕಿ, ರಾಜಿಯಾದರು. ಮುಂದಿನ ದಿನಗಳಲ್ಲಿ ಪ್ರೀತಿ, ವಿಶ್ವಾಸಗಳಿಂದ ದಾಂಪತ್ಯ ಜೀವನ ನಡೆಸುವುದಾಗಿ ನ್ಯಾಯಾಧೀಶರ ಮುಂದೆ ಪ್ರಮಾಣ ಮಾಡಿದರು.
ಈ ಸಂದರ್ಭ ಉಭಯ ನ್ಯಾಯಾಲಯಗಳ ಸರ್ಕಾರಿ ಸಹಾಯಕ ಅಭಿಯೋಜಕರಾದ ಭರತ್ ಭೀಮಯ್ಯ, ವಾಣಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಜಯಪ್ಪ, ಸಂಧಾನಕಾರ ವಕೀಲರಾದ ಬಿ.ಎಂ. ಪುರುಷೋತ್ತಮ್, ಎಂ.ಗುಡ್ಡಪ್ಪ, ಸಂಜೀವಪ್ಪ, ಹಿರಿಯ ವಕೀಲರಾದ ಉಮಾಕಾಂತ್ ಜೋಯ್ಸ್, ಉಮೇಶ್, ಮಡಿವಾಳ ಚಂದ್ರಪ್ಪ, ಅನೇಕ ವಕೀಲರು ಉಪಸ್ಥಿತರಿದ್ದರು.- - - -14ಎಚ್.ಎಲ್.ಐ2:
ಹೊನ್ನಾಳಿಯಲ್ಲಿ ಶನಿವಾರ ನಡೆದ ಲೋಕ್ ಆದಾಲತ್‌ನಲ್ಲಿ ವಿಚ್ಛೇದನ ಬಯಸಿದ್ದ ದಂಪತಿ ರಾಜಿ ಸಂಧಾನ ಪರಿಣಾಮ ಜಡ್ಜ್‌ಗಳ ಎದುರು ದಾಂಪತ್ಯ ಮುಂದುವರಿಸಲು ಒಪ್ಪಿಕೊಂಡು ಮಾಲೆ ಬದಲಿಸಿಕೊಂಡರು.