45 ಕೋಟಿ ಭಾರತೀಯರು ಬ್ಯಾಂಕಿಂಗ್‌ಗೆ: ಡಿ.ವಿ.ಸದಾನಂದಗೌಡ

| Published : Mar 11 2024, 01:18 AM IST

ಸಾರಾಂಶ

ನಗರದ ಅರಮನೆ ಮೈದಾನದಲ್ಲಿ ಭಾನುವಾರ ‘ದಿ ಮಲ್ಲೇಶ್ವರಂ ಕೋ ಅಪರೇಟಿವ್ ಬ್ಯಾಂಕ್’ನ ಶತಮಾನೋತ್ಸವ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಜನಧನ ಖಾತೆಗಳು ಮತ್ತು ಡಿಜಿಟಲೀಕರಣದ ಮೂಲಕ ಮೋದಿ ಸರ್ಕಾರ 45 ಕೋಟಿ ಭಾರತೀಯರನ್ನು ಬ್ಯಾಂಕಿಂಗ್ ವ್ಯವಸ್ಥೆಯೊ‍ಳಗೆ ಸೇರ್ಪಡೆಗೊಳಿಸಿದೆ ಎಂದು ಸಂಸದ ಡಿ.ವಿ.ಸದಾನಂದಗೌಡ ಹೇಳಿದರು.

ನಗರದ ಅರಮನೆ ಮೈದಾನದಲ್ಲಿ ಭಾನುವಾರ ‘ದಿ ಮಲ್ಲೇಶ್ವರಂ ಕೋ ಅಪರೇಟಿವ್ ಬ್ಯಾಂಕ್’ನ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, 2008ರ ಆರ್ಥಿಕ ಹಿಂಜರಿತ, ಕೋವಿಡ್ ಸೇರಿದಂತೆ ಅನೇಕ ಆರ್ಥಿಕ ಸವಾಲುಗಳನ್ನು ಜಗತ್ತು ಎದುರಿಸಿದೆ. ಅನೇಕ ದೇಶಗಳ ಬ್ಯಾಂಕುಗಳು ನೆಲಕಚ್ಚಿ ಬಾಗಿಲು ಹಾಕಿವೆ. ಆದರೆ, ಸಹಕಾರ ವ್ಯವಸ್ಥೆಯ ಮೇಲೆ ಅವಲಂಬಿತವಾಗಿರುವ ನಮ್ಮ ದೇಶದ ಅರ್ಥ ವ್ಯವಸ್ಥೆ ಪುಟಿದು ಎದ್ದಿದೆ. ವೇಗವಾಗಿ ಬೆಳೆಯುವ ಮೂಲಕ ಜಗತ್ತಿನ 5ನೇ ಸ್ಥಾನಕ್ಕೇರಿದೆ. ಅನೇಕ ದಶಕಗಳಿಂದ ಬ್ಯಾಂಕ್ ವ್ಯವಸ್ಥೆಯನ್ನೇ ತಿಳಿಯದ ಜನರ ಮನೆ ಬಾಗಿಲಿಗೆ ಬ್ಯಾಂಕ್ ತೆಗೆದುಕೊಂಡು ಹೋಗಲಾಗಿದೆ. ಡಿಜಿಟಲೀಕರಣದಿಂದ ಅಂಗೈಯಲ್ಲೇ ಬ್ಯಾಂಕಿಂಗ್ ಸಾಧ್ಯವಾಗಿದೆ ಎಂದರು.

ನಮ್ಮ ದೇಶದಲ್ಲಿ ಸಹಕಾರ ವ್ಯವಸ್ಥೆಯು ತಲತಲಾಂತರಗಳಿಂದ ಬೆಳೆದ ಸಂಸ್ಕೃತಿಯಾಗಿದೆ. ಭಾರತದ ಕುಟುಂಬ ವ್ಯವಸ್ಥೆ ಮತ್ತು ಮನೆಯನ್ನು ನಿರ್ವಹಿಸುವ ತಾಯಂದಿರ ಉಳಿತಾಯ ಮನೋಭಾವ ಕೂಡ ಸಹಕಾರಿ ವ್ಯವಸ್ಥೆಯಾಗಿದೆ. ಕೃಷಿಕರು ಮುಖ್ಯವಾಗಿ ಸಹಕಾರಿ ಬ್ಯಾಂಕ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ಸಹಕಾರ ವ್ಯವಸ್ಥೆಯಿಂದ ಮೇಲೆ ಬಂದಿರುವ ಅನೇಕರು ಜನಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದಾರೆ. ನಾನು ಕೂಡ ಸಹಕಾರ ವ್ಯವಸ್ಥೆಯಿಂದ ಬಂದವನು ಎಂದು ಸದಾನಂದಗೌಡ ಹೇಳಿದರು.

ಸಹಕಾರ ವ್ಯವಸ್ಥೆ ಬಲಪಡಿಸಲು, ಸಹಕಾರ ಬ್ಯಾಂಕ್‌ಗಳ ಸದಸ್ಯರ ಹಿತ ಕಾಪಾಡಲು ಕೇಂದ್ರ ಸರ್ಕಾರ ಪ್ರತ್ಯೇಕವಾಗಿ ಸಹಕಾರ ಸಚಿವಾಲಯ ಆರಂಭಿಸಿದೆ. ಸಹಕಾರ ಬ್ಯಾಂಕ್‌ಗಳು ಸಮಸ್ಯೆಗೆ ಸಿಲುಕಿದರೆ ಸದಸ್ಯರಿಗೆ ₹5 ಲಕ್ಷ ಠೇವಣಿ ನೀಡುವ ಖಾತರಿ ನೀಡಿದೆ. ಸಹಕಾರ ಬ್ಯಾಂಕ್‌ಗಳು ಮತ್ತಷ್ಟು ಉತ್ತಮವಾಗಿ ಬೆಳೆಯಲು ಅನೇಕ ಸುಧಾರಣೆಗಳನ್ನು ಕೇಂದ್ರ ಸರ್ಕಾರ ತರುತ್ತಿದೆ ಎಂದು ತಿಳಿಸಿದರು.

ಶತಮಾನೋತ್ಸವ ಆಚರಿಸಿರುವ ದಿ ಮಲ್ಲೇಶ್ವರಂ ಕೋ ಆಪರೇಟಿವ್ ಬ್ಯಾಂಕ್‌ ಇರುವ ಮಲ್ಲೇಶ್ವರದ 7ನೇ ಕ್ರಾಸ್ ರಸ್ತೆಗೆ ಬ್ಯಾಂಕಿನ ಹೆಸರನ್ನು ನಾಮಕರಣ ಮಾಡಬೇಕು ಎಂಬ ಆಡಳಿತ ಮಂಡಳಿಯ ಮನವಿಯಂತೆ ನಾಮಕರಣ ಮಾಡಲು ಕ್ರಮ ಕೈಗೊಳ್ಳುತ್ತೇನೆ ಎಂದು ಮಾಜಿ ಸಚಿವ ಡಾ। ಸಿ.ಎನ್‌.ಅಶ್ವತ್ಥನಾರಾಯಣ ಘೋಷಿಸಿದರು.

ಕಳೆದೊಂದು ಶತಮಾನದಲ್ಲಿ ಅನೇಕ ಬ್ಯಾಂಕುಗಳು, ಸಹಕಾರಿಗಳು ಮುಚ್ಚಿ ಹೋಗಿವೆ. ಡಿಜಿಟಲೀಕರಣದಿಂದ ಜನರು ಬ್ಯಾಂಕಿಗೆ ಹೋಗುವುದು ಬಹಳಷ್ಟು ಕಡಿಮೆಯಾಗಿದೆ. ಆದರೂ, ಸದಸ್ಯರ ವಿಶ್ವಾಸ, ನಂಬಿಕೆ ಮತ್ತು ಸಮರ್ಥ ಆಡಳಿತದಿಂದ ನಮ್ಮ ಬ್ಯಾಂಕ್‌ ಶತಮಾನೋತ್ಸವ ಆಚರಿಸಿ ಲಾಭದಲ್ಲಿ ಮುನ್ನಡೆಯುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷ ಬಿ.ರಮೇಶ್ ಹೇಳಿದರು.

ಕಾರ್ಯಕ್ರಮದಲ್ಲಿ ಬ್ಯಾಂಕಿನ ಮಾಜಿ, ಹಾಲಿ ಸದಸ್ಯರು, ನಿರ್ದೇಶಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಾಜಿ ಸಚಿವ ರಾಮಚಂದ್ರೇಗೌಡ ಉಪಸ್ಥಿತರಿದ್ದರು.