ವಿರೂಪಾಕ್ಷ ದೇವರ ಪುರ ಎಂದು ಉಲ್ಲೇಖವುಳ್ಳ ವಿಜಯನಗರ ಕಾಲದ ಅಪ್ರಕಟಿತ ಶಾಸನ ಪತ್ತೆ

| Published : Mar 11 2024, 01:18 AM IST

ವಿರೂಪಾಕ್ಷ ದೇವರ ಪುರ ಎಂದು ಉಲ್ಲೇಖವುಳ್ಳ ವಿಜಯನಗರ ಕಾಲದ ಅಪ್ರಕಟಿತ ಶಾಸನ ಪತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯನಗರ ತಿರುಗಾಟ ತಂಡವು ಶೋಧನ ಕಾರ್ಯಕ್ಕೆ ಹೋದಾಗ ''ವಿರೂಪಾಕ್ಷ ದೇವರ ಪುರ'' ಎಂಬ ಹೆಸರಲ್ಲಿ ''ಪುರ''ವೊಂದು ಎಂಬುದಕ್ಕೆ ಸಾಕ್ಷೀಕರಿಸುವ ಶಾಸನವೊಂದನ್ನು ಪತ್ತೆ ಮಾಡಿದ್ದಾರೆ.

ಹೊಸಪೇಟೆ: ವಿಜಯನಗರ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಶಾಸನವೊಂದನ್ನುವಿಜಯನಗರ ತಿರುಗಾಟ ತಂಡವು ಪತ್ತೆ ಹಚ್ಚಿದ್ದು, ''''ವಿರೂಪಾಕ್ಷ ದೇವರ ಪುರ'''' ಎಂಬ ಹೆಸರಲ್ಲಿ ''''ಪುರ''''ವೊಂದು ಇತ್ತು ಎಂಬುದನ್ನು ಈ ಶಾಸನ ಪುಷ್ಟಿ ನೀಡುತ್ತದೆ.

ಈ ಭಾಗದ ಹಿಂದಿನ ನಾಗಲಾಪುರವು ಇಂದಿನ (ನಾಗೇನಹಳ್ಳಿ)ಯು ಅಗ್ರಹಾರವಾಗಿತ್ತು. ಹಾಗೇನೇ ಪಾಪಿನಾಯಕನಹಳ್ಳಿಯು ನಿಡುಗುಲಕ್ಕೆ ಪ್ರತಿಯಾಗಿ ಆಪಿನಾಯಕನ ಪುರ ಎಂಬ ಹೆಸರಿನ ಅಗ್ರಹಾರವಾಗಿತ್ತೆಂದು ಶಾಸನಗಳಲ್ಲಿ ಉಲ್ಲೇಖವಾಗಿದೆ. ವಿಜಯನಗರ ಸಾಮ್ರಾಜ್ಯದಲ್ಲಿ ಅಚ್ಯುತಾಪುರ, ವಿರೂಪಾಪುರ, ಕೃಷ್ಣಾಪುರ, ವಲ್ಲಭಾಪುರ, ಚಿನ್ನಾಪುರ (ಚಿತ್ತವಾಡಿಗಿ), ಕಮಲಾಪುರ, ಆಪಿನಾಯಕನ ಪುರ (ಪಾಪಿನಾಯಕನ ಹಳ್ಳಿ) ಇವು ಪುರಗಳಾದರೆ, ಪಾಪಿನಾಯಕನಹಳ್ಳಿ ನಾಗೇನಹಳ್ಳಿ, ಮರಿಯಮ್ಮನಹಳ್ಳಿ, ಹಳ್ಳಿಗಳೆನಿಸಿಕೊಂಡರೆ ವಿನಾಯಕ ನಗರ (ಸಂಕ್ಲಾಪುರ) ವಿಜಯನಗರ (ಹಂಪಿ), ರಾಮನಗರ ನಗರಗಳೆಂದು ಕರೆಯಲಾಗಿದೆ.

ಜತೆಗೆ ವರದರಾಜಮ್ಮನ ಪಟ್ಟಣ (ಹೊಸಪೇಟೆ) ಮುಂತಾಗಿ ಹೆಸರಿಸಲಾಗಿದೆ. ಈಗ ವಿಜಯನಗರ ತಿರುಗಾಟ ತಂಡವು ಶೋಧನ ಕಾರ್ಯಕ್ಕೆ ಹೋದಾಗ ''''ವಿರೂಪಾಕ್ಷ ದೇವರ ಪುರ'''' ಎಂಬ ಹೆಸರಲ್ಲಿ ''''ಪುರ''''ವೊಂದು ಎಂಬುದಕ್ಕೆ ಸಾಕ್ಷೀಕರಿಸುವ ಶಾಸನವೊಂದನ್ನು ಪತ್ತೆ ಮಾಡಿದ್ದಾರೆ.

ಎಲ್ಲಿದೆ ಈ ಶಾಸನ?: ನಾಗೇನಹಳ್ಳಿಯ ಧರ್ಮರಗುಡ್ಡದ ಬಳಿಯ ಉತ್ತರಕ್ಕೆ ಇರುವ ಹೊಲಹೊಂದರಲ್ಲಿರುವ ಕರಿಯಮ್ಮ ದೇವಾಲಯವಿದೆ. ಆ ದೇವಾಲಯದ ಕಂಬಕ್ಕೆ ಶಾಸನವಿದೆ. ಈ ಶಾನ ಮೂರು ಸಾಲಿನದಾಗಿದ್ದು, ಇದು ಕನ್ನಡ ಶಾಸನವಾಗಿದೆ. ಇದರ ಲಿಪಿಯೂ ವಿಜಯನಗರ ಕಾಲದ ಲಿಪಿಯನ್ನು ಹೋಲುತ್ತದೆ. ಇದು ಅಪೂರ್ಣ ಶಾಸನವಾಗಿದೆ. ಆದರೂ ಶಾಸನವು ದೇಗುಲದ ಕಂಬಕ್ಕೆ ಬರೆಯಲಾಗಿದೆ. ಶಾಸನದ ಮೇಲ್ಭಾಗದಲ್ಲಿ ಸೂರ್ಯ, ಚಂದ್ರರನ್ನು ಕೆತ್ತಲಾಗಿದೆ. ಈ ಶಾಸನದಿಂದ ಆ ಭಾಗವು ಅಂದರೆ ವಿಜಯನಗರ ಕಾಲಾವಧಿಯಲ್ಲಿ ''''ಶ್ರೀ ವಿರೂಪಾಕ್ಷ ದೇವರ ಪುರ'''' ಎಂದು ಕರೆಯಲಾಗುತಿತ್ತು ಎಂದು ತಿಳಿದುಬರುತ್ತದೆ.

ಅಂತೆಯೇ ಸಂಗಮ, ಸಾಳುವ ವಂಶದ ಕಾಲಾವಧಿಯಲ್ಲಿ ಅದರಲ್ಲೂ ವಿರೂಪಾಕ್ಷ ದೇವಾಲದಲ್ಲಿ ''''ಶ್ರೀ ವಿರೂಪಾಕ್ಷ'''' ಎಂಬ ಅಕ್ಷರ ನಮೂದಿತವಾಗಿದೆ. ಅಲ್ಲದೇ ಹರಿಹರ ಕವಿಯು ''''ಹಂಪಿಯನ್ನು ಆಳಿದವ ವಿರೂಪಾಕ್ಷ'''' ಎಂದು ಕೃತಿಗಳಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಈ ದೇವಾಲಯವು ಸಂಗಮ ಇಲ್ಲವೇ ಸಾಳುವ ವಂಶದ ಆಡಳಿತಾವಧಿಯಲ್ಲಿ ನಿರ್ಮಾಣಗೊಂಡಿರಬೇಕೆನಿಸುತ್ತದೆ. ಈಗಿರುವ ಕರಿಯಮ್ಮ ಎಂಬ ಹೆಸರು ಆಮೇಲೆ ಬಳಸಲ್ಪಟ್ಟಿರಬೇಕು ಎಂದು ಹೇಳಲಾಗುತ್ತಿದೆ. ಈ ಕುರಿತು ಹೆಚ್ಚಿನ ಸಂಶೋಧನೆಯಿಂದ ಬೆಳಕಿಗೆ ಬರಬೇಕಾಗಿದೆ ಎಂದು ತಂಡದ ಸದಸ್ಯರಾದ ಡಾ. ಗೋವಿಂದ ತಿಳಿಸಿದ್ದಾರೆ.

ಬಸವನದುರ್ಗ ಗ್ರಾಮದ ಬಳಿ ಹೊಲವೊಂದರಲ್ಲಿ ವೀರಗಲ್ಲುಗಳು ಕಂಡುಬಂದಿವೆ. ಆದರೆ ಈ ಊರನ್ನು ಈ ಹಿಂದೆ ''''ಗುಡಿ ಒಬಳಾಪುರ'''' ಎಂತಲೂ ಕರೆಯಲಾಗುತ್ತಿತ್ತೆಂದು ಸ್ಥಳ ಐತಿಹ್ಯವೊಂದು ತಿಳಿಸುತ್ತದೆ. ಈ ವೀರಗಲ್ಲಿಗೆ ಬಹುಶಃ ವಿಜಯನಗರ ಕಾಲಾವಧಿಯ ಲಿಪಿ ಇರಬೇಕೆನಿಸುತ್ತದೆ. ಈ ವೀರಗಲ್ಲಿನ ಒಂದು ಕಲ್ಲಿನ ಮೇಲಭಾಗಕ್ಕೆ ಮೂರು ಸಾಲಿನ ಶಾಸನ ಲಿಪಿಯ ಅಕ್ಷರಗಳಿವೆ, ಆದರೆ ಅವು ಸವೆದು ಹೋಗಿವೆ.

ಅಪ್ರಕಟಿತ ಶಾಸನ ಹಾಗೂ ವೀರಗಲ್ಲುಗಳನ್ನು ವಿಜಯನಗರ ತಿರುಗಾಟ ಸಂಶೋಧನಾ ತಂಡದ ಸದಸ್ಯರಾದ ಡಾ. ಗೋವರ್ಧನ, ಡಾ. ಕೃಷ್ಣೇಗೌಡ, ಡಾ. ರಾಮಾಂಜಿನೇಯ, ಸಂಶೋಧಕ ರವಿಕುಮಾರ ಅವರು ಸ್ಥಳೀಯರಾದ ಡಾ. ಚನ್ನಪ್ಪ, ಅಧ್ಯಾಪಕ ಪ್ರಭು ಹಾಗೂ ವಕೀಲ ಷಣ್ಮುಖ ಅವರ ಸಹಕಾರದಿಂದ ಪತ್ತೆ ಹಚ್ಚಿದ್ದಾರೆ.