ಧಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನಗಳ ಮೆರುಗು ಹೆಚ್ಚಿಸುತ್ತವೆ

| Published : Mar 11 2024, 01:18 AM IST

ಸಾರಾಂಶ

ಧಾರ್ಮಿಕ, ಸಂಗೀತ, ನೃತ್ಯ ಕಾರ್ಯಕ್ರಮಗಳಿಂದ ದೇವಸ್ಥಾನಗಳಿಗೆ ಹೆಚ್ಚಿನ ಬೆಲೆ ಬರುತ್ತದೆ ಎಂದು ಹೂವಿನಶಿಗ್ಲಿ ವಿರಕ್ತಮಠದ ಚೆನ್ನವೀರ ಸ್ವಾಮೀಜಿ ಹೇಳಿದರು.

ಲಕ್ಷ್ಮೇಶ್ವರ: ಧಾರ್ಮಿಕ, ಸಂಗೀತ, ನೃತ್ಯ ಕಾರ್ಯಕ್ರಮಗಳಿಂದ ದೇವಸ್ಥಾನಗಳಿಗೆ ಹೆಚ್ಚಿನ ಬೆಲೆ ಬರುತ್ತದೆ ಎಂದು ಹೂವಿನಶಿಗ್ಲಿ ವಿರಕ್ತಮಠದ ಚೆನ್ನವೀರ ಸ್ವಾಮೀಜಿ ಹೇಳಿದರು.

ಮಹಾಶಿವರಾತ್ರಿ ನಿಮಿತ್ತ ಇಲ್ಲಿನ ಸೋಮೇಶ್ವರ ಅರ್ಚಕರ ಸಂಘದ ವತಿಯಿಂದ ಶನಿವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಸಾನ್ನಿಧ್ಯದಿಂದ ಅವರು ಮಾತನಾಡಿದರು. ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನ ಒಂದು ಜಾಗೃತ ಸ್ಥಳವಾಗಿದೆ. ಇಲ್ಲಿನ ಯಾವುದೇ ಕೆಲಸ ಆರಂಭಿಸಿದರೂ ಅದು ಯಶಸ್ವಿಯಾಗಿ ನಡೆಯುತ್ತದೆ. ಮೇಲಿಂದ ಮೇಲೆ ಧರ್ಮ, ಜನರನ್ನು ಜಾಗೃತಿ ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.

ತಹಸೀಲ್ದಾರ್‌ ವಾಸುದೇವಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಲಕ್ಷ್ಮೇಶ್ವರ ಪಟ್ಟಣಕ್ಕೆ ನಾಡಿನ ಇತಿಹಾಸದಲ್ಲಿ ಹೆಚ್ಚು ಪ್ರಾಮುಖ್ಯತೆ ಇದೆ. ಇಲ್ಲಿ ಹತ್ತಾರು ರಾಜ ಮಹಾರಾಜರು ರಾಜ್ಯಭಾರ ಮಾಡಿದ್ದಾರೆ. ಅದರಂತೆ ಮಹಾಕವಿ ಪಂಪ ಸೇರಿದಂತೆ ಇನ್ನೂ ಹಲವಾರು ಸಾಹಿತಿಗಳು ತಮ್ಮ ಸಾಹಿತ್ಯ ಕೃತಿಗಳನ್ನು ಇದೇ ಊರಲ್ಲಿ ರಚಿಸಿದ್ದಾರೆ. ಈ ಕಾರಣಕ್ಕಾಗಿ ಕರ್ನಾಟಕ ಇತಿಹಾಸದಲ್ಲಿ ಲಕ್ಷ್ಮೇಶ್ವರಕ್ಕೆ ದೊಡ್ಡ ಹೆಸರು ಇದೆ ಎಂದರು.

ಸೋಮೇಶ್ವರ ದೇವಸ್ಥಾನದ ಅರ್ಚಕರ ಸಂಘದ ಅಧ್ಯಕ್ಷ ವಕೀಲ ವಿ.ಎಲ್. ಪೂಜಾರ ಮಾತನಾಡಿ ಭಕ್ತರ ಸಹಕಾರದಿಂದ ಮಹಾಶಿವರಾತ್ರಿಯಂದು ಸಂಗೀತ, ನೃತ್ಯದಂಥ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಇಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದರು.

ಸೋಮೇಶ್ವರ ಭಕ್ತರ ಸೇವಾ ಸಮಿತಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ, ಪಿಎಸ್‌ಐ ಈರಪ್ಪ ರಿತ್ತಿ, ಚೆನ್ನಪ್ಪ ಜಗಲಿ ಮಾತನಾಡಿದರು. ಸೋಮೇಶ್ವರ ಸಮಿತಿ ಅಧ್ಯಕ್ಷ ಕುಬೇರಪ್ಪ ಮಹಾಂತಶೆಟ್ಟರ, ಸೋಮಣ್ಣ ಪೂಜಾರ, ಚಿಕ್ಕರಸ ಪೂಜಾರ, ರಾಘವೇಂದ್ರ ಪೂಜಾರ ಸೇರಿದಂತೆ ಮತ್ತಿತರರು ಇದ್ದರು.

ಡಿ.ಎಂ. ಪೂಜಾರ ಸ್ವಾಗತಿಸಿದರು. ಜಿ.ಎಸ್. ಗುಡಗೇರಿ ನಿರೂಪಿಸಿದರು. ನಂತರ ಸ್ಥಳೀಯ ಮತ್ತು ಬೇರೆ ಬೇರೆ ಊರುಗಳಿಂದ ಬಂದಿದ್ದ ಕಲಾವಿದೆಯರಿಂದ ಭರತ ನಾಟ್ಯ ಪ್ರದರ್ಶನ ಮತ್ತು ಸಂಗೀತ ಕಾರ್ಯಕ್ರಮಗಳು ನಡೆದವು.