ಕನ್ನಡಪ್ರಭ ವಾರ್ತೆ ಬೆಳಗಾವಿ:
ಆರ್‌ಬಿಐ ನಿಯಮ ಉಲ್ಲಂಘಿಸಿ ಸುಮಾರು 4,500ಕ್ಕೂ ಹೆಚ್ಚು ಠೇವಣಿದಾರರಿಂದ ಅಂದಾಜು ₹4,500 ಕೋಟಿ ಠೇವಣಿ ಸಂಗ್ರಹಿಸಿದ ಆರೋಪದ ಹಿನ್ನೆಲೆಯಲ್ಲಿ ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವರನನ್ನು ಪೊಲೀಸರು ಶುಕ್ರವಾರ ತಡರಾತ್ರಿ ಬಂಧಿಸಿದ್ದಾರೆ. ಈತನ ಹಿನ್ನೆಲೆಯು ಬಲು ರೋಚಕವಾಗಿದೆ. ಐಸ್‌ಕ್ರೀಂ ಮಾರುತ್ತಿದ್ದವ ₹4500 ಕೋಟಿ ವಂಚನೆ ಮಾಡುವಷ್ಟು ಬೆಳೆದಿದ್ದಾನೆ. ಅಲ್ಲದೆ ಆತ ಸ್ವತಃ ಸ್ಟಾಕ್ ಮಾರ್ಕೆಟ್‌ನಲ್ಲಿ ನಷ್ಟ ಅನುಭವಿಸಿದರೂ ಕೂಡ ಸ್ವತಃ ಆ್ಯಪ್ ಆಂಭಿಸಿ ಜನರಿಂದ ಹೂಡಿಕೆ ಮಾಡಿಕೊಂಡು ಮೋಸ ಎಸಗಿದ್ದಾನೆ.ಯಾರು ಈ ಶಿವಾನಂದ?:
ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ್ ನೀಲಣ್ಣವರ್ ಜನಿಸಿದ್ದು ಹುಬ್ಬಳ್ಳಿ ತಾಲೂಕಿನ ಉಣಕಲ್ ಗ್ರಾಮದಲ್ಲಿ. ತಂದೆ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಸೇನಾ ನಿವೃತ್ತಿ ಬಳಿಕ ತಂದೆ ಸಿದ್ದಪ್ಪ, ಕೆಇಬಿನಲ್ಲಿ ಕೆಲಸ ಮಾಡುತ್ತಿದ್ದರು. ಶಿವಾನಂದ ನೀಲಣ್ಣವರ್ ಅವರ ತಂದೆ, ಕೆಇಬಿಯಲ್ಲಿ ಕೆಲಸದಲ್ಲಿರುವಾಗಲೇ ಸಾವನ್ನಪ್ಪಿದ್ದರು. ಬಳಿಕ, ತಂದೆಯ ನೌಕರಿ ಶಿವಾನಂದ ನೀಲಣ್ಣವರ್ ಸಹೋದರನಿಗೆ ಸಿಕ್ಕಿತ್ತು. ಸಹೋದರ ಬೆಳಗಾವಿಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಇಡೀ ಕುಟುಂಬವೇ ಬೆಳಗಾವಿಗೆ ಶಿಫ್ಟ್ ಆಗಿತ್ತು.ಪಿಯುಸಿ ಓದಿದ್ದ ಶಿವಾನಂದ ನೀಲಣ್ಣವರ್, ರೂರಲ್ ಮೆಡಿಕಲ್ ಕಾಲೇಜಿನಲ್ಲಿ ಸಿಪಾಯಿ ಆಗಿ ಕೆಲಸ ಪ್ರಾರಂಭಿಸಿದ್ದ. 2004-2006ರ ಅವಧಿಯಲ್ಲಿ ಆಟೋ ರಿಕ್ಷಾದಲ್ಲಿ ಫ್ರೀಡ್ಜ್ ಇಟ್ಟುಕೊಂಡು ಐಸ್‌ಕ್ರೀಮ್ ಮಾರುತ್ತಿದ್ದ. ಬಳಿಕ, ಐಸ್‌ಕ್ರೀಂ ಫ್ಯಾಕ್ಟರಿ ಮಾಡಿದ್ದ. ಬಳಿಕ, 2012ರಿಂದ ಸ್ಟಾಕ್ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಲು ಆರಂಭಿಸಿದ. ಸ್ಟಾಕ್ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿ ಸುಮಾರು ₹15 ಲಕ್ಷ ಕಳೆದುಕೊಂಡಿದ್ದಾನೆ ಎನ್ನಲಾಗಿದೆ. ಈ ಮಧ್ಯೆ, ಸ್ಟಾಕ್ ಮಾರ್ಕೆಟ್ ಹೂಡಿಕೆ ನೋಡಿ ತಾನೇ ಸ್ವತಃ ‘ಅಕ್ಯೂಮೆನ್’ ಎಂಬ ಆ್ಯಪ್ ಅಭಿವೃದ್ಧಿಪಡಿಸಿದ್ದ.
ಈ ಆ್ಯಪ್ ಮೂಲಕ ಜನರಿಂದ ಹಣ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದ. ಈ ಆ್ಯಪ್ ಮೂಲಕವೇ ಸುಮಾರು 4,500ಕ್ಕೂ ಅಧಿಕ ಜನರಿಂದ ₹4,500 ಕೋಟಿಗೂ ಹೆಚ್ಚು ಹಣ ಸಂಗ್ರಹಿಸಿದ್ದ. ಅಲ್ಲದೆ, ಪುಣೆ, ಬೆಳಗಾವಿಯಲ್ಲಿ ಬೃಹತ್ ಮನರಂಜನೆ ಕಾರ್ಯಕ್ರಮ ಆಯೋಜಿಸಿದ್ದ. ತನ್ನ ಅಬ್ಬರದ ಭಾಷಣದ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದ.
2016ರಲ್ಲಿ ಶಿವಂ ಅಸೋಸಿಯೇಟ್ಸ್ ಹೆಸರಿನಲ್ಲಿ ಸಂಸ್ಥೆ ಆರಂಭಿಸಿ, ಯಾವುದೇ ಪರವಾನಗಿ ಪಡೆಯದೆ ಹಾಗೂ ಕಾನೂನುಬದ್ಧ ನಿಯಮಗಳನ್ನು ಪಾಲಿಸದೆ ಸಾರ್ವಜನಿಕರಿಂದ ಅಂದಾಜು ₹4,500 ಕೋಟಿಗೂ ಅಧಿಕ ಠೇವಣಿ ಸಂಗ್ರಹಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಹೆಚ್ಚಿನ ಬಡ್ಡಿ, ಲಾಭದ ಆಮಿಷವೊಡ್ಡಿ ಸಾವಿರಾರು ಕೋಟಿ ರುಪಾಯಿ ಹಣ ಸಂಗ್ರಹಿಸಿ, ಅದರ ಒಂದು ಭಾಗವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗಿದ್ದು, ಉಳಿದ ಹಣವನ್ನು ವೈಯಕ್ತಿಕವಾಗಿ ಬಳಸಿಕೊಂಡು ಸಾರ್ವಜನಿಕರಿಗೆ ವಂಚನೆ ಮಾಡಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.₹4500 ಕೋಟಿ ಕೇಸ್‌ನಲ್ಲಿ ರಾಜಕೀಯವಿಲ್ಲ:ಶಿವಂ ಅಸೋಸಿಯೇಟ್ಸ್ ಮೇಲೆ ದಾಳಿ ಮತ್ತು ಬಂಧನದಲ್ಲಿ ಯಾವುದೇ ರಾಜಕೀಯ ಉದ್ದೇಶ, ಪ್ರಭಾವವಿಲ್ಲ. ಅಧಿಕಾರಿಗಳು ಅವರ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ₹4500 ಕೋಟಿ ವಂಚನೆ ಆರೋಪ ಎದುರಿಸುತ್ತಿರುವ ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವರ ಪ್ರಕರಣವನ್ನು ಸರ್ಕಾರ ಅಧಿಕೃತವಾಗಿ ಸಿಐಡಿ ತನಿಖೆಗೆ ವಹಿಸಿದೆ. ಸಿಐಡಿ ಅಧಿಕಾರಿಗಳು ತನಿಖೆ ಪೂರ್ಣಗೊಳಿಸಿ ವರದಿ ನೀಡಿದ ನಂತರವೇ ಈ ಹಗರಣದ ಸಂಪೂರ್ಣ ಸತ್ಯಾಸತ್ಯತೆ ಮತ್ತು ನಿಖರ ಮಾಹಿತಿ ಹೊರಬರಲಿದೆ. ಈ ಪ್ರಕರಣಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ಇದು ಸಂಪೂರ್ಣವಾಗಿ ಸಾರ್ವಜನಿಕರ ಹಣಕಾಸು ವಂಚನೆಗೆ ಸಂಬಂಧಿಸಿದ ವಿಷಯವಾಗಿದೆ. ಕಾನೂನು ಬಾಹಿರವಾಗಿ ಹಣ ಸಂಗ್ರಹಿಸಿ ಸಾರ್ವಜನಿಕರಿಗೆ ಮೋಸ ಮಾಡಿರುವ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಅಥವಾ ಪ್ರೇರೆಪಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.