ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಸಂಘಗಳನ್ನು ಬಹುಸೇವಾ ಕೇಂದ್ರಗಳನ್ನಾಗಿ ಪರಿವರ್ತಿಸಲು ಪ್ರಧಾನ ಮಂತ್ರಿಗಳು ಒಟ್ಟು ಒಂದು ಲಕ್ಷ ಕೋಟಿ ಪ್ಯಾಕೇಜನ್ನು ಘೋಷಿಸಿದ್ದು, ಅದರಲ್ಲಿ ನಮ್ಮ ಕರ್ನಾಟಕಕ್ಕೆ ಒಟ್ಟು ₹4525 ಕೋಟಿ ಮೀಸಲಿರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಶಿರಹಟ್ಟಿ

ಕೇಂದ್ರ ಸರ್ಕಾರ ಮಹತ್ತರ ಆತ್ಮನಿರ್ಭರ ಯೋಜನೆಯಡಿಯಲ್ಲಿ ಕೃಷಿ ಮೂಲಭೂತ ಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಸಂಘಗಳನ್ನು ಬಹುಸೇವಾ ಕೇಂದ್ರಗಳನ್ನಾಗಿ ಪರಿವರ್ತಿಸಲು ಪ್ರಧಾನ ಮಂತ್ರಿಗಳು ಒಟ್ಟು ಒಂದು ಲಕ್ಷ ಕೋಟಿ ಪ್ಯಾಕೇಜನ್ನು ಘೋಷಿಸಿದ್ದು, ಅದರಲ್ಲಿ ನಮ್ಮ ಕರ್ನಾಟಕಕ್ಕೆ ಒಟ್ಟು ₹4525 ಕೋಟಿ ಮೀಸಲಿರಿಸಲಾಗಿದೆ ಎಂದು ಕೆಸಿಸಿ ಬ್ಯಾಂಕ್ ನಿರ್ದೇಶಕ ಗೋವಿಂದಗೌಡ ವಿ. ಪಾಟೀಲ ತಿಳಿಸಿದರು.

ಸ್ಥಳೀಯ ನಾಟಕ ಕಲಾ ಬ್ರಹ್ಮ ಎಚ್.ವೆಂಕುಬರಾವ ಕಲಾಭವನದಲ್ಲಿ ಬುಧವಾರ ಸಹಕಾರ ಇಲಾಖೆ, ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಕೆಸಿಸಿ ಬ್ಯಾಂಕ್ ಧಾರವಾಡ ಸಂಯುಕ್ತಾಶ್ರಯದಲ್ಲಿ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ನಡೆದ ವಿಶೇಷ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಮುಖ್ಯವಾಗಿ ಭಾರತದ ಜನಸಂಖ್ಯೆಗೆ ಒಟ್ಟು ಶೇ.58ರಷ್ಟು ಆದಾಯ ಕೃಷಿ ಮತ್ತು ಕೃಷಿ ಅವಲಂಬಿತ ಕಾರ್ಯಗಳಿಂದ ಬರುತ್ತದೆ. ಭಾರತದಲ್ಲಿ ಶೇ.85ರಷ್ಟು ರೈತರು ಚಿಕ್ಕ-ಅತಿ ಚಿಕ್ಕ ಹಿಡುವಳಿಯನ್ನು ಅಂದರೆ ಎರಡು ಹೆಕ್ಟೇರ್ ಗಳಿಗಿಂತ ಕಡಿಮೆ ಕೃಷಿ ಭೂಮಿಯನ್ನು ಹೊಂದಿದ್ದು, ರೈತರು ವಾರ್ಷಿಕ ಆದಾಯ ತುಂಬಾ ಕಡಿಮೆ ಇರುತ್ತದೆ. ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಸೂಕ್ತವಾದ ಮಾರುಕಟ್ಟೆಗೆ ವ್ಯವಸ್ಥೆ ಇರುವುದಿಲ್ಲ. ಪರಿಣಾಮವಾಗಿ ಶೇ.15-20ರಷ್ಟು ಕೃಷಿ ವಲಯಕ್ಕೆ ವಿನಿಯೋಗಿಸಲು ಭಾರತದಲ್ಲಿ ಆಸಕ್ತಿ ತೋರುತ್ತಿಲ್ಲ. ಇತ್ತೀಚಿಗೆ ಪ್ರಾಥಮಿಕ ಸಹಕಾರ ಸಂಘಗಳಲ್ಲಿ ಹಣ ದುರುಪಯೋಗ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕಾಗಿದೆ. ಕಾರಣ ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಲಿ ನಿರ್ದೇಶಕರ ಕರ್ತವ್ಯ ಪ್ರಮುಖವಾಗಿರುತ್ತದೆ. ಈ ಕುರಿತು ಇಂದು ಸಂಘಗಳ ಪ್ರಗತಿಗೆ ಶ್ರಮಿಸಿದ ಸಹಕಾರಿಗಳು ಮತ್ತು ಇಲಾಖಾ ಅಧಿಕಾರಿಗಳಿಂದ ಉಪನ್ಯಾಸಗಳನ್ನು ಏರ್ಪಡಿಸಲಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಕೆಸಿಸಿ ಬ್ಯಾಂಕ್ ನಿರ್ದೇಶಕ ಮಾಳಪ್ಪ ನಿಂಗಜ್ಜನವರ ಮಾತನಾಡಿದರು. ತರಬೇತಿ ಕಾರ್ಯಾಗಾರದಲ್ಲಿ ಆಡಳಿತ ಮಂಡಳಿ ನಿರ್ದೇಶಕರ ಹಾಗೂ ಮುಖ್ಯ ಕಾರ್ಯನಿರ್ವಾಹಕರ ಜವಾಬ್ದಾರಿ ಮತ್ತು ಕರ್ತವ್ಯಗಳು ಹಾಗೂ ಸಹಕಾರಿ ಕಾಯ್ದೆ ಇತ್ತೀಚಿನ ತಿದ್ದುಪಡಿಗಳ ಹಾಗೂ ಮಾದರಿ ಸಹಕಾರ ಸಂಘಗಳ ಮಾಹಿತಿ ಕುರಿತು ಶಂಕರ ಎಸ್.ಕರಬಸಣ್ಣವರ, ಬಹು ಸೇವಾ ಕೇಂದ್ರಗಳಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಕುರಿತು ವಿಶ್ವನಾಥ ಎಚ್.ಲಮಾಣಿ, ಪ್ಯಾಕ್ಸ್‌ಗಳ ಪ್ರಗತಿ, ಪರಿವರ್ತನೆ ಹಾಗೂ ಅಭಿವೃದ್ಧಿಯ ಅನುಭವಗಳ ಕುರಿತು ಜಗದೀಶಗೌಡ ಎಂ.ಪಾಟೀಲ ಉಪನ್ಯಾಸ ನೀಡಿದರು.

ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಸಹಾಯಕ ನಿರ್ದೇಶಕಿ ಎಚ್.ಎ. ಬಂಡೆಣ್ಣವರ, ಕೆ.ಸಿ. ಕೂಸನೂರಮಠ, ವಿಶ್ವನಾಥ ಎಚ್.ಲಮಾಣಿ ಸೇರಿದಂತೆ ಇತರರಿದ್ದರು. ವಿದ್ಯಾರ್ಥಿನಿ ಸುಕನ್ಯಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಚಂದ್ರಶೇಖರ ಎಸ್.ಕರಿಯಪ್ಪನವರ ಸ್ವಾಗತಿಸಿ, ನಿರೂಪಿಸಿದರು. ರಶೀದಾಬಾನು ಸಿ.ಯಲಿಗಾರ ವಂದಿಸಿದರು.