ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ನರಗುಂದ-ನವಲಗುಂದ ಐತಿಹಾಸಿಕ ರೈತ ಬಂಡಾಯ ನಡೆದು ಜು.೨೧ಕ್ಕೆ ೪೫ ವರ್ಷ ತುಂಬಲಿದೆ. ಅಂದು ಮಡಿದ ರೈತರ ನೆನಪಿಗಾಗಿ ಪ್ರತಿವರ್ಷ ಹುತಾತ್ಮ ದಿನವನ್ನು ಆಚರಿಸಲಾಗುತ್ತಿದ್ದು, ಈ ಬಾರಿ ಜು.೨೧ರಂದು ಬೆಳಗಾವಿ ಜಿಲ್ಲೆಯ ಯರಗಟ್ಟಿಯಲ್ಲಿ ಬೃಹತ್ ರೈತರ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಎ.ಎಂ. ಮಹೇಶ್‌ಪ್ರಭು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ನಡೆಯುವ ಬೃಹತ್ ಸಮಾವೇಶದಲ್ಲಿ ರೈತ ವಿರೋಧಿ ಸರ್ಕಾರಗಳ ವಿರುದ್ಧ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದರು. ಈ ಸಮಾವೇಶದಲ್ಲಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು, ಜಿಲ್ಲಾ ಮುಖಂಡರು, ರೈತ ನಾಯಕರು, ಭಾಗವಹಿಸಲಿದ್ದಾರೆ. ಈ ಸಮಾವೇಶಕ್ಕೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಅಂದು ಹಲವು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು ಎಂದರು.೧೮ಕ್ಕೆ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ: ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜು.೧೮ ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುವುದು. ಚಾಮರಾಜನಗರ ಜಿಲ್ಲೆಯಲ್ಲಿ ಜು.೧೦ರಂದೇ ಮಾಡಿರುವುದರಿಂದ ಇಲ್ಲಿ ಪ್ರತಿಭಟನೆ ನಡೆಯುವುದಿಲ್ಲ ಎಂದರು.ಜಿಲ್ಲೆಯ ಸುಮಾರು ೨೦೦೦ ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಬಾಳೆ ಫಸಲು ನಾಶವಾಗಿದೆ. ಆದರೆ, ಇಲ್ಲಿಯ ತನಕ ಸರ್ಕಾರ ಸೂಕ್ತ ಪರಿಹಾರ ನೀಡಿಲ್ಲ. ಬಾಳೆ ಬೆಳೆಯನ್ನು ವಿಮಾ ವ್ಯಾಪ್ತಿಗೆ ಸೇರಿಸಿಲ್ಲ ಎಂದು ಆರೋಪಿಸಿದರು. ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆಗೆ ೨೭ ಬೆಳೆಗಳನ್ನು ಸೇರಿಸಲಾಗಿದೆ. ಆದರೆ ಅದು ಕಾಗದದ ರೂಪದಲ್ಲೆ ಇದ್ದು ತಕ್ಷಣ ಖರೀದಿ ಕೇಂದ್ರಗಳನ್ನು ತೆರೆದು ಎಂಎಸ್‌ಪಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರ ಬದಲಾಯಿತು, ಆದರೆ ರೈತ ವಿರೋಧಿಗಳು ಮಾತ್ರ ಬದಲಾಗಲಿಲ್ಲ. ಇದು ಇದೇ ರೀತಿ ಮುಂದುವರಿದರೆ ರೈತ ಸಂಘದಿಂದ ನಿರಂತರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಬರ ಪರಿಹಾರ ಕೆಲ ರೈತರಿಗೆ ಮಾತ್ರ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮರಾಜನಗರಕ್ಕೆ ಭೇಟಿ ನೀಡಿದ್ದ ವೇಳೆ ರೈತರು ಮತ್ತು ಸಾರ್ವಜನಿಕರು ತಮ್ಮ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದ್ದು ಈ ಮನವಿ ಪತ್ರಗಳನ್ನು ಇಲ್ಲಿಯೇ ಬಿಸಾಡಿ ಹೋಗಿರುವುದು ಖಂಡನೀಯ. ಇದರಿಂದ ಸರ್ಕಾರಕ್ಕೆ ರೈತರ ಬಗೆಗಿನ ಕಾಳಜಿ ಏನೆಂದು ಗೊತ್ತಾಗಿದೆ, ಈ ಬಗ್ಗೆ ಕ್ರಮವಹಿಸಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ರೈತರ ಬಗ್ಗೆ ಬೇಜವಾಬ್ದಾರಿ ಮುಂದುವರಿಯಬಾರದು ಎಂದರು.ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ, ಜು.೨೧ ರಂದು ಬೆಳಗಾವಿ ಜಿಲ್ಲೆಯ ಯರಗಟ್ಟಿಯಲ್ಲಿ ನಡೆಯುವ ಸಮಾವೇಶಕ್ಕೆ ಜಿಲ್ಲೆಯಿಂದ ೫೦೦ ರಿಂದ ೬೦೦ ರೈತರು ಹೊರಡಲಿದ್ದಾರೆ. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಬೇಕು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಜಿಲ್ಲಾ ಕಾರ್ಯಾಧ್ಯಕ್ಷ ಹೊಂಗನಹಳ್ಳಿ ಲೋಕೇಶ್, ಯುವ ಘಟಕದ ರಾಜ್ಯ ಸಂಚಾಲಕ ಯಶವಂತ್, ಗುಂಡ್ಲುಪೇಟೆ ತಾಲೂಕು ಉಪಾಧ್ಯಕ್ಷ ನಾಗರಾಜು, ರಘು ಇದ್ದರು.