ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಬದಲಾದರೂ ನಿಯೋಜನೆಗೊಂಡಿರುವ ಗ್ರಾಮ ಲೆಕ್ಕಿಗ(ವಿಎ)ರು ಮಾತ್ರ ಬದಲಾಗುವುದಿಲ್ಲ. ಕೆಲವರು ದಶಕಗಳಿಂದ ನಿಯೋಜನೆ ಮೇಲೆಯೇ ಕೆಲಸ ಮಾಡುತ್ತಿರುವುದು ಕಂಡುಬಂದಿದೆ, ಮೂಲ ಹುದ್ದೆಗೆ ವಾಪಸ್ಸಾಗುವಂತೆ ಹಲವು ಬಾರಿ ತಹಸೀಲ್ದಾರ್ ಆದೇಶಿಸಿದರೂ ಮೌನಕ್ಕೆ ಒಳಗಾಗಿದ್ದಾರೆ.
ಕೆಲಸ ಸಿಕ್ಕಿರುವ ಸ್ಥಾನದಲ್ಲಿ ಜವಾಬ್ದಾರಿ ನಿರ್ವಹಿಸಲಾಗದೆ, ಕೆಲ ಗ್ರಾಮ ಲೆಕ್ಕಿಗರು (ವಿಎ) ತಮ್ಮ ಸ್ವಗ್ರಾಮ ಅಥವಾ ತಮಗೆ ಬೇಕಾಗಿರುವ ಕಡೆ ಉದ್ದೇಶ ಪೂರ್ವಕವಾಗಿಯೇ ನಿಯೋಜನೆ ಪಡೆದುಕೊಳ್ಳುತ್ತಿರುವ ಕಾರಣ ಕಂದಾಯ ಇಲಾಖೆಯ ಪ್ರಗತಿ ಸಾಧನೆಗೆ ಹಿನ್ನಡೆಯಾಗುತ್ತಿದೆ.ಗ್ರಾಮ ಮಟ್ಟದಿಂದಲೇ ಜನತೆಗೆ ಕಂದಾಯ ಸೇವೆಗಳನ್ನು ಕಲ್ಪಿಸಲು ೫ ಕಂದಾಯ ವೃತ್ತಗಳಿಗೆ ಒಬ್ಬರಂತೆ ಗ್ರಾಮ ಲೆಕ್ಕಿಗರನ್ನು ಸರ್ಕಾರ ನೇಮಕ ಮಾಡಿ ಕಾರ್ಯಭಾರವನ್ನು ವಹಿಸಿದೆ. ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ಕಂದಾಯ ವಸೂಲಿ ಮಾಡುವುದು, ಬೆಳೆ ಸಮೀಪ, ಜನನ, ಮರಣ, ಆದಾಯ, ಜಾತಿ, ವಂಶ ವೃಕ್ಷ ಸೇರಿ ಹಲವು ಪ್ರಮಾಣ ಪತ್ರಗಳಿಗೆ ವರದಿ ನೀಡುವ ಜವಾಬ್ದಾರಿ ನೀಡಲಾಗಿದೆ.
ಅನ್ಯ ಕಚೇರಿಗೆ ನಿಯೋಜನೆಕೆಲವರು ಕೊಟ್ಟಿರುವ ಕೆಲಸ ಬಿಟ್ಟು, ಜಿಲ್ಲಾಡಳಿತ ಭವನ, ಉಪ ವಿಭಾಗಾಧಿಕಾರಿ ಕಚೇರಿ, ತಾಲೂಕು ಕಚೇರಿಗಳಿಗೆ ನಿಯೋಜನೆ ಪಡೆದುಕೊಂಡು ಸುಮಾರು ವರ್ಷಗಳಿಂದ ಬೀಡು ಬಿಟ್ಟಿದ್ದಾರೆ. ಕೆಲಸ ಒಂದು ಜಾಗದಲ್ಲಾರೆ, ಸಂಬಳ ಪಡೆದುಕೊಳ್ಳುವುದು ಮತ್ತೊಂದು ಕಡೆ ಎಂಬಂತಾಗಿದೆ. ಜಿಲ್ಲೆಯಲ್ಲಿ ಒಟ್ಟು ೨೬೦ ಗ್ರಾಮ ಲೆಕ್ಕಿಗರ ಪೈಕಿ ೨೪೦ ವಿಎಗಳು ಕಾರ್ಯನಿರ್ವಹಿಸುತ್ತಿದ್ದು, ೨೪ ಹುದ್ದೆಗಳು ಖಾಲಿ ಇವೆ. ಕೆಲ ವಿಎಗಳು ನಿಯೋಜನೆ ಮೇರೆಗೆ ಮೂಲ ಸ್ಥಾನ ಬಿಟ್ಟು ನಿಯೋಜನೆಗೊಂಡಿದ್ದಾರೆ.
ಬೇರೆ ಕಡೆ ಕೆಲಸ ಮಾಡುತ್ತಿರುವ ವಿಎಗಳು ಮೂಲ ಹುದ್ದೆಗೆ ವಾಪಸ್ ಹೋಗಿ ಕೆಲಸ ಮಾಡಬೇಕು ಎಂದು ಕಂದಾಯ ಸಚಿವ ಕೃಷ್ಣಬೇಗೌಡ ಅವರು ನಿರ್ದೇಶನ ನೀಡಿದ್ದರೂ ಸಹ ಕೆಲವರು ಸಚಿವರ ಆದೇಶಕ್ಕೂ ಮಣಿಯದೆ ರಾಜಕೀಯ ಪ್ರಭಾವದಿಂದ ನಿಯೋಜಿತ ಸ್ಥಳದಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ನಿಯೋಜನೆಯ ಮೇರೆಗೆ ತೆರಳಿದ್ದರೂ ಸಹ ಅವರ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಅವರ ಕೆಲಸವನ್ನು ಬೇರೊಬ್ಬರಿಗೆ ವಹಿಸಲಾಗುತ್ತಿದೆ.ವಿಎ ಇಲ್ಲದೆ ಕಾರ್ಯ ಒತ್ತಡ ಜಾಸ್ತಿ
ಇದರಿಂದಾಗಿ ವಿಎ ಜಾಗದಲ್ಲಿ ನೇಮಕಗೊಂಡವರಿಗೂ ಕಾರ್ಯ ಒತ್ತಡ ಜಾಸ್ತಿಯಾಗಿದೆ. ಕೊಟ್ಟಿರುವ ಕೆಲಸವನ್ನು ಸಕಾಲಕ್ಕೆ ಮುಗಿಸಲು ವಿಎಗಳು ಪರಿತಪಿಸುವಂತಾಗಿದೆ. ನಿಯೋಜನೆ ಮೇರೆಗೆ ಇರುವ ವಿಎಗಳು, ಆಯಕಟ್ಟಿನ ಜಾಗಗಳಲ್ಲಿರುವ ಅಧಿಕಾರಿಗಳು ತಳಮಟ್ಟದಲ್ಲಿ ಕೆಲಸ ಮಾಡಲು ಮುಂದಾಗುತ್ತಿಲ್ಲ.ಹತ್ತಾರು ವರ್ಷಗಳಿಂದ ನಿಯೋಜನೆ ಹೋಗಿ ಬೇರೆಡೆ ಕೆಲಸ ಮಾಡುತ್ತಿರುವ ಗ್ರಾಮಲೆಕ್ಕಾಧಿಕಾರಿಗಳು, ಪ್ರಥಮ ಹಾಗೂ ದ್ವೀತಿಯ ದರ್ಜೆ ಸಹಾಯಕರು, ಡಿ ದರ್ಜೆ ನೌಕರರ ನಿಯೋಜನೆ ರದ್ದುಗೊಳಿಸಿ ಮೂಲಸ್ಥಾನಕ್ಕೆ ಕಳುಹಿಸುವಂತೆ ಜಿಲ್ಲಾಧಿಕಾರಿಗಳಿಗೆ ತಹಸೀಲ್ದಾರ್‌ರಿಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಖುದ್ದು ಆಯಾ ತಾಲೂಕುಗಳ ತಹಸೀಲ್ದಾರ್‌ಗಳು ನಿಯೋಜನೆ ರದ್ದುಪಡಿಸಿಕೊಂಡು ವಾಪಸ್ ಬರುವಂತೆ ಸೂಚಿಸಿದರೂ ಯಾರೊಬ್ಬರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅವರ ನಿಯೋಜನೆ ರದ್ದುಪಡಿಸಿದರೆ ರಾಜಕೀಯ ಪ್ರಭಾವ ಬೀರುತ್ತಾರೆ ಎನ್ನಲಾಗಿದೆ.ಠೀಕಾಣಿ ಹೂಡಿದವರ ವರ್ಗಾಯಿಸಿ
ಕೆಲ ಗ್ರಾಮ ಲೆಕ್ಕಾಧಿಕಾರಿಗಳು ಸಂಬಂಧವಿಲ್ಲದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಾವುದೇ ರೀತಿ ಕಡತ ವಿಲೇವಾರಿ ಮಾಡಬೇಕಾದರೆ ಹಣ ಮಾಡುವ ದಂಧೆಗೆ ಇಳಿದಿದ್ದಾರೆ. ಅವರು ನೇಮಕಗೊಂಡಿರುವ ಹುದ್ದೆಗೂ ಕಾರ್ಯನಿರ್ವಹಿಸುತ್ತಿರುವ ಹುದ್ದೆಗೂ ಸಂಬಂಧವೇ ಇಲ್ಲ. ಆದರೂ ಸಹ ಮೇಲಧಿಕಾರಿಗಳಿಗಿಂತ ಹೆಚ್ಚು ಸುಪ್ರೀಂ ರೀತಿ ಆಡುತ್ತಾರೆ. ಸಾರ್ವಜನಿಕರನ್ನು ವಿನಾಕಾರಣ ಕಚೇರಿಗಳಿಗೆ ಅಲೆದಾಡಿಸುತ್ತಾರೆ. ತಾಲೂಕು ಕಚೇರಿಗಳಲ್ಲಿ ಸುಮಾರು ವರ್ಷಗಳಿಂದ ಠೀಕಾಣಿ ಹೂಡಿರುವ ಸಿಬ್ಬಂದಿಯನ್ನು ಬೇರೆ ಕಡೆಗೆ ವರ್ಗಾವಣೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ನಿಯೋಜನೆ ರದ್ದುಪಡಿಸಬೇಕುಸಾಕಷ್ಟು ಮಂದಿ ವಿಎಗಳು ನಿಯೋಜನೆ ಮೇರೆಗೆ ಹೋಗಿರುವುದರಿಂದ ಮೂಲ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವವರು ಹೆಚ್ಚುವರಿ ಕೆಲಸ ಮಾಡಬೇಕಾಗುತ್ತಿದೆ. ಇದರಿಂದಾಗಿ ಕಾರ್ಯ ಒತ್ತಡ ಹೆಚ್ಚಾಗಿದೆ. ಒಂದು ಕಂದಾಯ ವೃತ್ತದ ಜತೆಗೆ ಇನ್ನು ಎರಡ್ಮೂರು ವೃತ್ತಗಳನ್ನು ನೋಡಿಕೊಳ್ಳಬೇಕಾಗುತ್ತಿದೆ ಎಂದು ಹೆಸರು ಹೇಳಲಿಚ್ಛೀಸದ ವಿಎ ಒಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.