ಸಾರಾಂಶ
ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ (ಡಿಡಿಯುಟಿಟಿಎಲ್) ₹47.10 ಕೋಟಿ ಹಗರಣ ಸಂಬಂಧ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಎಸ್.ಶಂಕರಪ್ಪರವರನ್ನು ಸಿಐಡಿ ಬಂಧಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ (ಡಿಡಿಯುಟಿಟಿಎಲ್) ₹47.10 ಕೋಟಿ ಹಗರಣ ಸಂಬಂಧ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಎಸ್.ಶಂಕರಪ್ಪರವರನ್ನು ಸಿಐಡಿ ಬಂಧಿಸಿದೆ.2021ರಿಂದ 2023ರ ಅವಧಿಯಲ್ಲಿ ಡಿಡಿಯುಟಿಟಿಎಲ್ ನಿಗಮದಲ್ಲಿ ಗುತ್ತಿಗೆ ನೀಡಿಕೆಯಲ್ಲಿ ಅಕ್ರಮ ನಡೆದಿದೆ ಎಂದು ವಿಲ್ಸನ್ ಗಾರ್ಡನ್ ಠಾಣೆಗೆ ನಿಗಮದ ಹಾಲಿ ಎಂಡಿ ಸಿ.ಎನ್.ಶಿವಪ್ರಕಾಶ್ ದೂರು ನೀಡಿದ್ದರು. ಈ ಪ್ರಕರಣವನ್ನು ಸಿಐಡಿ ತನಿಖೆ ಸರ್ಕಾರ ವಹಿಸಿತ್ತು. ಅಂತೆಯೇ ತನಿಖೆಗಿಳಿದ ಸಿಐಡಿ ಅಧಿಕಾರಿಗಳು, ಮಾಜಿ ಎಂಡಿ ಶಂಕರಪ್ಪ ಅವರನ್ನು ಬಂಧಿಸಿದ್ದಾರೆ.
ಪ್ರಸುತ್ತ ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾಣಿಜ್ಯ ಪ್ರಚಾರ ಶಾಖೆಯ ಉಪ ನಿರ್ದೇಶಕರಾಗಿದ್ದ ಶಂಕರಪ್ಪ ಅವರು, ಈ ಹಿಂದೆ ಡಿಡಿಯುಟಿಟಿಎಲ್‌ನಲ್ಲಿ ಎಂ.ಡಿ ಆಗಿದ್ದರು. ಆಗ ನಿಗಮದ ತುಂಡು ಗುತ್ತಿಗೆ ಕಾಮಗಾರಿಯಲ್ಲಿ ಭಾರಿ ಪ್ರಮಾಣದ ಅಕ್ರಮ ನಡೆಸಿರುವ ಬಗ್ಗೆ ತನಿಖೆಯಲ್ಲಿ ಪುರಾವೆಗಳು ಸಿಕ್ಕಿವೆ ಎಂದು ಸಿಐಡಿ ಮೂಲಗಳು ಹೇಳಿವೆ.ಏನೀದು ಅಕ್ರಮ?
2021ರ ಅಕ್ಟೋಬರ್ 25ರಂದು ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್‌ನಲ್ಲಿ 194ನೇ ನಿರ್ದೇಶಕ ಮಂಡಳಿ ಸಭೆಯಲ್ಲಿ ಟ್ರಕ್ ಟರ್ಮಿನಲ್‌ಗಳ ದುರಸ್ತಿ ಹಾಗೂ ನಿರ್ವಹಣೆಗೆ ₹10 ಕೋಟಿ ವರೆಗೆ ತುಂಡು ಗುತ್ತಿಗೆ ನೀಡಲು ಅನುಮೋದನಾ ನಿರ್ಣಯ ಮಾಡಲಾಗಿತ್ತು. ಆದರೆ ಆನಂತರ ಕಾಮಗಾರಿ ನಡೆಸದೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣ ಪಡೆದಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಬಗ್ಗೆ ವಿಚಾರಣೆ ನಡೆಸಿದ ನಿಗಮದ ಹಾಲಿ ಎಂಡಿ, ಬಳಿಕ ವಿಲ್ಸನ್ ಗಾರ್ಡನ್ ಠಾಣೆಗೆ ತುಂಡು ಗುತ್ತಿಗೆ ಕಾಮಗಾರಿಯಲ್ಲಿ ₹47.10 ಕೋಟಿ ಅಕ್ರಮ ನಡೆದಿದೆ ಎಂದು ಆರೋಪಿಸಿ ದೂರು ನೀಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಸಿಐಡಿಗೆ ಸರ್ಕಾರ ಆದೇಶಿಸಿತು.