ಕನ್ನಡಪ್ರಭ ವಾರ್ತೆ ಮಂಡ್ಯ

ಸಾರ್ವಜನಿಕ ಜೀವನದಲ್ಲಿ ಮೌಲ್ಯಗಳು ಕುಸಿದುಹೋಗಿವೆ. ಲೋಕಸಭೆಯಲ್ಲಿರುವ ಸದಸ್ಯರ ಪೈಕಿ ಶೇ.೪೭ರಷ್ಟು ಸದಸ್ಯರು ಒಂದಲ್ಲ ಒಂದು ಕ್ರಿಮಿನಲ್ ಕೇಸ್ ಎದುರಿಸುತ್ತಿದ್ದಾರೆ. ಇಂತಹ ಆತಂಕಕಾರಿ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ.ಕೃಷ್ಣ ತಿಳಿಸಿದರು.

ನಗರದ ಗಾಂಧಿ ಭವನದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ರಾಷ್ಟ್ರೀಯ ಸೇವಾ ಯೋಜನೆ, ಕೃಷಿ ಮಹಾವಿದ್ಯಾಲಯ, ವಿ.ಸಿ.ಫಾರಂ, ಜಿಲ್ಲಾ ಯುವ ಪರಿಷತ್ ವತಿಯಿಂದ ನಡೆದ ಯುವ ಮನಸ್ಸುಗಳಿಗೆ ಗಾಂಧಿ ರಾಜ್ಯ ಮಟ್ಟದ ವಿಚಾರ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂಸೆ, ಅರಾಜಕತೆ, ಭ್ರಷ್ಟಾಚಾರ ತಾಂಡವಾಡುತ್ತಿರುವ ಇಂದಿನ ದಿನಗಳಲ್ಲಿ ಜಗತ್ತಿಗೆ ಅಹಿಂಸೆ, ವಿಶ್ವ ಭ್ರಾತೃತ್ವ, ಗ್ರಾಮ ಸ್ವರಾಜ್ಯ, ಸಮಾನತೆ, ಸರಳತೆಯ ಪಾಠ ಹೇಳಿಕೊಟ್ಟ ಮಹಾತ್ಮ ಗಾಂಧೀಜಿ ಇಂದಿಗೂ ಪ್ರಸ್ತುತ ಎಂದರು.

ಸಮಾಜ, ಸಾಮಾಜಿಕ, ನೈತಿಕ ಸ್ವಾತಂತ್ರ್ಯ ಹಾಗೂ ಗಾಂಧಿ ಅವರ ಜೀವನ ಸಂದೇಶವನ್ನು ವಿವೇಚನಾತ್ಮಕವಾಗಿ ಚಿಂತಿಸಿದಲ್ಲಿ ಮೂಲಭೂತವಾದಿ, ಕೋಮುವಾದಿಗಳ ವಿರುದ್ಧ ಹೋರಾಟ ನಡೆಸಬಹುದು. ಬಹುತ್ವದ ಚಿಂತನೆ ನಮ್ಮ ಶಕ್ತಿಯಾಗಿದೆ. ಗಾಂಧೀ ಪ್ರಪಂಚಕ್ಕೆ ಬೆಳಕಾದವರು ಎಂದು ಬಣ್ಣಿಸಿದರು.


ರಾಜಕಾರಣ, ಸಾರ್ವಜನಿಕ ಜೀವನದಲ್ಲಿ ಅಧಿಕಾರ ಹಿಡಿಯುವುದು ದೊಡ್ಡ ಕೆಲಸವಾಗಿದೆ. ಸಮಾಜ ಓಟಿನ ಮೇಲೆ ನಿಂತಿದೆ. ಓಟು ಪಡೆಯಲು ವಾಮಮಾರ್ಗ ಅನುಸರಿಸುತ್ತಿರುವುದನ್ನು ಕಾಣುತ್ತಿದ್ದೇವೆ ಇದರ ಬಗ್ಗೆ ಚಿಂತಿಸಬೇಕಿದೆ. ಯಾವ ನಾಯಕರಿಗೂ ರಾಷ್ಟ್ರದ ಹಿತ ಬೇಕಿಲ್ಲ. ಪಕ್ಷದಲ್ಲಿ ದೊಡ್ಡ ನಾಯಕರು ಇರಬಹುದು. ಗೆಲ್ಲುವ ಜ್ಞಾನ ಇರಬಹುದು. ಅವರು ಅಧಿಕಾರ ಹೇಗೆ ಹಿಡಿಯಬೇಕು ಎನ್ನುವ ದೃಷ್ಟಿಯಲ್ಲಿ ಸಮಾಜದಲ್ಲಿ ಕೆಲಸ ಮಾಡುತ್ತಾರೆ. ಆದರೆ ಸಮಾಜಗಳನ್ನು ಜೋಡಿಸುವ ಕೆಲಸ ಯಾರೂ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅನ್ಯಾಯದ ವಿರುದ್ಧ ಎದ್ದು ನಿಲ್ಲುವುದೇ ನಿಜವಾದ ಗಾಂಧಿ ತತ್ವ. ಗಾಂಧೀಜಿಯವರ ಜೀವನ ಚರಿತ್ರೆ ಪ್ರಕಟಗೊಂಡು ನೂರು ವರ್ಷ ತುಂಬಿದೆ. ಆ ಪುಸ್ತಕ ಲಕ್ಷಾಂತರ ಜನರಿಗೆ ಯುವಕರಿಗೆ, ಭಾರತೀಯರಿಗೆ ಸ್ಪೂರ್ತಿಯಾಗಿದೆ. ಪ್ರಪಂಚದಾದ್ಯಂತ ಜನರು ಗಾಂಧೀಜಿಯವರ ಆತ್ಮಕಥೆ ಓದಿ ಅದರಿಂದ ಪ್ರಭಾವಿತರಾಗಿದ್ದಾರೆ. ವಿದ್ಯಾರ್ಥಿಗಳಾದ ನೀವೂ ಆ ಪುಸ್ತಕವನ್ನು ಓದಬೇಕು ಎಂದು ಸಲಹೆ ನೀಡಿದರು.

ಪರಿಸರ ರೂರಲ್ ಡೆವಲಪ್ ಮೆಂಟ್ ಸೊಸೈಟಿ ಅಧ್ಯಕ್ಷ ಎಂ.ಯೋಗೀಶ್ ಮಾತನಾಡಿ, ಮೊದಲು ಯುವಕ ಸಂಘಗಳು, ಹಾಗೂ ಯುವತಿ ಮಂಡಳಿಗಳು ಭಾವೈಕ್ಯತೆ ಮೂಡಿಸುವ ಕೆಲಸ ಮಾಡುತ್ತಿದ್ದವು ಇತ್ತೀಚಿನ ದಿನಗಳಲ್ಲಿ ಜಾತಿ, ಅಭಿಮಾನಿಗಳು ಹಾಗೂ ಬೇರೆ ಹೆಸರುಗಳಲ್ಲಿ ಯುವಕ ಸಂಘಗಳು ಸ್ಥಾಪನೆಯಾಗಿ ಯುವಕರು ಪಲ್ಲಟಗೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಯುವ ಮನಸ್ಸುಗಳಿಗೆ ಗಾಂಧಿ ವಿಚಾರಗಳು ಅಗತ್ಯ ಮತ್ತು ಅನಿವಾರ್ಯವಾಗಿವೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ.ವಿ.ಧರಣೇಂದ್ರಯ್ಯ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದರು. ಕವಿ ಕೆ.ಪಿ.ಮೃತ್ಯುಂಜಯ ಯಾಕಾಗಿ ಗಾಂಧಿ?, ಯುವಜನತೆ ಮತ್ತು ಗಾಂಧಿ ಕುರಿತು ಅಕ್ಕ ಮಹಾದೇವಿ ವಿವಿ ವಿಶೇಷ ಅಧಿಕಾರಿ ಡಾ.ವಿಷ್ಣು ಎಂ.ಶಿಂಧೆ ಉಪನ್ಯಾಸ ನೀಡಿದರು.