ಮಾಲೀಕರಿಗೆ 475 ಇ-ಖಾತಾ ವಿತರಣೆ: ಶೇಷಾದ್ರಿ

| Published : Feb 16 2025, 01:45 AM IST

ಸಾರಾಂಶ

ಸ್ವತ್ತಿನ ಮಾಲೀಕರು ದಲ್ಲಾಳಿಗಳಿಗೆ ಕಡಿವಾಣ ಹಾಕಿ ನೇರವಾಗಿ ನಗರಸಭೆಗೆ ಬಂದು ಅರ್ಜಿ ಸಲ್ಲಿಸಬೇಕು. ನಾಗರಿಕರು ಮಧ್ಯವರ್ತಿಗಳನ್ನು ಪೋಷಣೆ ಮಾಡಬಾರದು. ನಗರಸಭೆ ಜೊತೆ ನೇರ ಸಂಪರ್ಕ ಇಟ್ಟುಕೊಂಡು ನಿಮ್ಮ ಹಕ್ಕನ್ನು ನೇರವಾಗಿ ಪಡೆಯಿರಿ. ನಾವು ನಿಮ್ಮ ಸೇವೆಗೆ ಸದಾ ಸಿದ್ದರಿದ್ದೇವೆ. ಇದು ನಮ್ಮ ಆಡಳಿತದ ಕಾರ್ಯ ವೈಖರಿಯಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ರಾಮನಗರ

ನಗರಸಭೆ ವ್ಯಾಪ್ತಿಯಲ್ಲಿರುವ ನಿವೇಶನಗಳ ಸ್ವತ್ತಿನ ಮಾಲೀಕರಿಗೆ ಇದುವರೆಗೆ 475ಕ್ಕೂ ಹೆಚ್ಚು ಇ-ಖಾತಾಗಳನ್ನು ವಿತರಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ(ಶಶಿ) ತಿಳಿಸಿದರು.

ನಗರಸಭೆಯ ಸಭಾಂಗಣದಲ್ಲಿ ಶನಿವಾರ ಇ-ಖಾತಾ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಕೊಟ್ಟ ವಾಗ್ದಾನದಂತೆ ಅರ್ಜಿ ಸಲ್ಲಿಸಿದ 11 ಸರ್ಕಾರಿ ಕೆಲಸದ ದಿನಗಳಲ್ಲಿ ನಿವೇಶನ ಮಾಲೀಕರಿಗೆ ಸ್ವತ್ತಿನ ಹಕ್ಕುಪತ್ರ ವಿತರಣೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಸ್ವತ್ತಿನ ಮಾಲೀಕರು ದಲ್ಲಾಳಿಗಳಿಗೆ ಕಡಿವಾಣ ಹಾಕಿ ನೇರವಾಗಿ ನಗರಸಭೆಗೆ ಬಂದು ಅರ್ಜಿ ಸಲ್ಲಿಸಬೇಕು. ನಾಗರಿಕರು ಮಧ್ಯವರ್ತಿಗಳನ್ನು ಪೋಷಣೆ ಮಾಡಬಾರದು. ನಗರಸಭೆ ಜೊತೆ ನೇರ ಸಂಪರ್ಕ ಇಟ್ಟುಕೊಂಡು ನಿಮ್ಮ ಹಕ್ಕನ್ನು ನೇರವಾಗಿ ಪಡೆಯಿರಿ. ನಾವು ನಿಮ್ಮ ಸೇವೆಗೆ ಸದಾ ಸಿದ್ದರಿದ್ದೇವೆ. ಇದು ನಮ್ಮ ಆಡಳಿತದ ಕಾರ್ಯ ವೈಖರಿಯಾಗಿದೆ ಎಂದರು.

ಇ-ಖಾತಾ ವಿಚಾರವಾಗಿ ನಾಗರಿಕರು ನಗರಸಭೆಯನ್ನು ದೂಷಿಸುತ್ತಿದ್ದರು. ಆದರೀಗ ಕಾಲ ಮಿತಿಯೊಳಗೆ ಇ-ಖಾತಾ ಸ್ವತ್ತಿನ ಮಾಲೀಕರಿಗೆ ಸಿಗುತ್ತಿರುವ ಕಾರಣ ದೂಷಣೆಗೆ ಒಳಗಾಗಿದ್ದ ನಗರಸಭೆ ಹೊಗಳಿಕೆಗೆ ಕಾರಣವಾಗಿದೆ. ನಗರಸಭೆ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದ ಸಂಕಲ್ಪ ಸಾರ್ಥಕವಾಗಿದೆ ಎಂದು ತಿಳಿಸಿದರು.

ನಗರದಲ್ಲಿ ಸ್ವಚ್ಛತೆ ವಿಚಾರದಲ್ಲಿ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ 1500 ನಿವೇಶನಗಳ ಪೈಕಿ 800 ನಿವೇಶನಗಳ ಸ್ವಚ್ಛ ಮಾಡಿ ನಾಗರಿಕರ ಜೊತೆ ಜನಸ್ನೇಹಿ ವಾತಾವರಣ ನಿರ್ಮಾಣಕ್ಕೆ ಶ್ರಮಿಸಲಾಗುತ್ತಿದೆ. ಕುಡಿಯುವ ನೀರಿನ ಪೂರೈಕೆ ಹಾಗೂ ರಸ್ತೆ ದುಸ್ಥಿತಿ ಬಗ್ಗೆ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಜಲಮಂಡಳಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಮಿತಿಯೊಂದನ್ನು ರಚಿಸಿ ಸಾಧಕ - ಭಾದಕಗಳ ಬಗ್ಗೆ ವರದಿ ನೀಡಲು ಅಧಿಕಾರಿಗಳು ಮತ್ತು ಸದಸ್ಯರ ಸಮಿತಿ ರಚಿಸಿದ್ದೇವೆ. ವರದಿ ಬಂದ ನಂತರ ಮುಂದಿನ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಐದಾರು ತಿಂಗಳಲ್ಲಿ ನಗರವನ್ನು ಧೂಳು ಮುಕ್ತ, ಪರಿಸರ ಸ್ನೇಹಿಯನ್ನಾಗಿ ರೂಪಿಸಲಾಗುವುದು ಎಂದು ತಿಳಿಸಿದರು.

ಆಯುಕ್ತ ಡಾ.ಜಯಣ್ಣ ಮಾತನಾಡಿ, ಈ ಮೊದಲು ಇ- ಖಾತೆ ವಿಳಬಕ್ಕೆ ಸಿಬ್ಬಂದಿ ಕೊರತೆ, ಸ್ಟ್ರೀಮ್ ಲೈನ್ ಇರಲಿಲ್ಲ. ಎಲ್ಲರಿಗೂ ಕೆಲಸದ ಒತ್ತಡವಿತ್ತು. ಈಗ ಆಡಳಿತದ ವ್ಯವಸ್ಥೆಯನ್ನು ಆಂತರೀಕವಾಗಿ ಸುಧಾರಣೆ ಮಾಡಿ ಅಧಿಕಾರಿಗಳನ್ನು ಕಮಿಟ್ಮೆಂಟ್ ಮಾಡಿದ್ದರಿಂದ ಇ-ಖಾತಾ ಅರ್ಜಿಗಳು ಸಕಾಲದಲ್ಲಿ ವಿಲೇವಾರಿ ಆಗುವ ಮೂಲಕ ಕೆಲಸ ಸುಗಮವಾಗಿ ನಡೆಯುತ್ತಿದೆ ಎಂದು ತಿಳಿಸಿದರು.

ಈ ವೇಳೆ ನಗರಸಭೆ ಉಪಾಧ್ಯಕ್ಷೆ ಆಯಿಷಬಾನು, ಸದಸ್ಯರಾದ ವಿಜಯ ಕುಮಾರಿ, ಮುತ್ತುರಾಜು, ಫೈರೋಜ್, ಅಜ್ಮತ್ , ಸಮದ್, ವ್ಯವಸ್ಥಾಪಕರಾದ ರೇಖಾ, ಲೆಕ್ಕಾಧಿಕಾರಿ ಶಿವಣ್ಣ, ಅಧಿಕಾರಿಗಳಾದ ಕಿರಣ್, ನಟರಾಜುಗೌಡ, ವೇದಾವತಿ, ಪುಟ್ಟಸ್ವಾಮಿ ಮತ್ತಿತರು ಉಪಸ್ಥಿತರಿದ್ದರು.