ಸಾರಾಂಶ
ಬಸವರಾಜ ಹಿರೇಮಠ
ಧಾರವಾಡ: ಬೆಳಗಾವಿ ವಿಭಾಗದ ಏಳು ಜಿಲ್ಲೆಗಳಲ್ಲಿ ಕಳೆದ ಆರು ತಿಂಗಳಲ್ಲಿ ಬರೋಬ್ಬರಿ 49,435 ಜನರಿಗೆ ನಾಯಿ ಕಡಿತದ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಮೂವರು ಅಸುನೀಗಿದ್ದಾರೆ.ಹೌದು. ಆರೋಗ್ಯ ಇಲಾಖೆಯೇ ಈ ಮಾಹಿತಿ ನೀಡಿದ್ದು, ಒಟ್ಟು ಪ್ರಕರಣಗಳಲ್ಲಿ ಹೆಚ್ಚಾಗಿ ಮಕ್ಕಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರೇ ಹೆಚ್ಚಿನ ಸಂಖ್ಯೆಯಲ್ಲಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ ಎಂಬುದು ಗಮನಾರ್ಹ.
ಬಾಗಲಕೋಟೆಯಲ್ಲಿ ಹೆಚ್ಚು:ಏಳು ಜಿಲ್ಲೆಗಳ ಪೈಕಿ ಅತೀ ಹೆಚ್ಚು (12,392) ಪ್ರಕರಣಗಳು ಬಾಗಲಕೋಟೆ ಜಿಲ್ಲೆಯಲ್ಲಿ ಆಗಿವೆ. ಬೆಳಗಾವಿಯಲ್ಲಿ 5562 ಪ್ರಕರಣಗಳಾಗಿದ್ದು, ಚಿಕಿತ್ಸೆಯ ನಂತರವೂ ಇಬ್ಬರು ರೇಬಿಸ್ ರೋಗಕ್ಕೆ ಮೃತಪಟ್ಟಿದ್ದಾರೆ. ಹಾವೇರಿಯಲ್ಲಿ 3237 ಮಂದಿಗೆ ನಾಯಿಗಳು ಕಚ್ಚಿದ್ದು, ಓರ್ವ ಮೃತಪಟ್ಟಿದ್ದಾನೆ. ಉಳಿದಂತೆ ಧಾರವಾಡ ಜಿಲ್ಲೆಯಲ್ಲಿ 6585, ಗದಗ 5152, ಉತ್ತರ ಕನ್ನಡ 8648 ಹಾಗೂ ವಿಜಯಪುರದಲ್ಲಿ 7859 ಮಂದಿಗೆ ನಾಯಿಗಳು ಕಚ್ಚಿರುವ ವರದಿಯಾಗಿದೆ.
ಕರು ಎಳೆದಾಡಿದ ನಾಯಿಗಳು: ಧಾರವಾಡದ ಪಾಲಿಕೆ ಕಚೇರಿ ಬಳಿಯ ಬಿಆರ್‌ಟಿಎಸ್ ಗೇಟ್‌ನಲ್ಲಿ ಎರಡು ದಿನಗಳ ಹಿಂದಷ್ಟೇ ಬೀದಿ ನಾಯಿಗಳ ಗುಂಪೊಂದು ಕರುವಿನ ಮೇಲೆ ದಾಳಿ ಮಾಡಿ ಅದನ್ನು ರಸ್ತೆಗೆ ಎಳೆದೊಯ್ದ ಘಟನೆ ನಡೆದಿದೆ. ನಾಯಿಗಳು ಶವವನ್ನು ಎಳೆದುಕೊಂಡು ಹೋಗಿ ಭಾಗಶಃ ತಿಂದು ಹಾಕಿದ ವಿಡಿಯೋ ವೈರಲ್ ಆಗಿತ್ತು. ಅದೆಷ್ಟೋ ಬಾರಿ ಮಕ್ಕಳನ್ನು ನಾಯಿಗಳ ಗುಂಪು ಅಟ್ಟಾಡಿಸಿ ಕಚ್ಚಿರುವ ಘಟನೆಗಳು ನಮ್ಮ ಕಣ್ಣೆದುರಿಗೆ ಇವೆ.ಧಾರವಾಡ ರೇಲ್ವೆ ನಿಲ್ದಾಣ ಸೇರಿದಂತೆ ಅನೇಕ ನಿಲ್ದಾಣಗಳಲ್ಲಿ ಪ್ರಯಾಣಿಕರು ಊಟ ತಂದು ಅಲ್ಲಿಯ ನಾಯಿಗಳಿಗೆ ಹಾಕುವುದರಿಂದ ರೈಲ್ವೆ ನಿಲ್ದಾಣದೊಳಗೆ ನಾಯಿಗಳ ಹಿಂಡೇ ಇರುತ್ತದೆ. ಕೆಲವರು ಮಾಂಸದ ಊಟ ಹಾಕುವುದರಿಂದ ಅವುಗಳು ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಮೇಲೆ ದಾಳಿ ಮಾಡಿದ ಘಟನೆಗಳು ಧಾರವಾಡದಲ್ಲಾಗಿವೆ.
ಸಾಕು ನಾಯಿಗಳು ಸಹ ದಾಳಿ ಮಾಡಿವೆ. ಕೆಲವು ಮಾಲೀಕರು ಬೆಳಗ್ಗೆ ಅಥವಾ ಸಂಜೆ ವಾಯುವಿಹಾರಕ್ಕೆ ಅವುಗಳೊಂದಿಗೆ ಬಂದಾಗ, ಮುಕ್ತವಾಗಿ ಸುತ್ತಾಡಲು ಬಿಡುವುದರಿಂದ ನಾಯಿಗಳು ಸಾರ್ವಜನಿಕರಿಗೆ ಕಚ್ಚಿರುವ ಘಟನೆಗಳಿವೆ.ಕಡಿವಾಣ ಹೇಗೆ?: ನಾಯಿಗಳ ಸಂಖ್ಯೆ ವೃದ್ಧಿಯಾಗದಂತೆ ಸಂತಾನ ಹರಣ ಮಾಡಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಸೇರಿದಂತೆ ಆಡಳಿತ ವ್ಯವಸ್ಥೆ ಹೇಳುತ್ತದೆಯಾದರೂ ಎಲ್ಲೆಂದರಲ್ಲಿ ನಾಯಿಗಳ ಗುಂಪು ಕಾಣಸಿಗುತ್ತಿವೆ. ಒಂದು ಮಾಹಿತಿ ಪ್ರಕಾರ ಹು-ಧಾ ಅವಳಿ ನಗರವೊಂದರಲ್ಲಿ 35 ಸಾವಿರಕ್ಕೂಹೆಚ್ಚು ಬೀದಿ ನಾಯಿಗಳಿವೆ. ಇನ್ನು ಬೆಳಗಾವಿ ವಿಭಾಗದಲ್ಲಿ ಈ ಸಂಖ್ಯೆ ಲಕ್ಷ ದಾಟಿದರೂ ಅಚ್ಚರಿ ಏನಿಲ್ಲ. ಆಹಾರ ತ್ಯಾಜ್ಯ ಅದರಲ್ಲೂ ಮಾಂಸವನ್ನು ತೆರೆದ ಸ್ಥಳದಲ್ಲಿ ಎಸೆಯುವುದು ಬೀದಿ ನಾಯಿಗಳ ಗುಂಪು ಸೃಷ್ಟಿಯಾಗಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಶಾಲಾ ಮಕ್ಕಳು, ಮಹಿಳೆಯರು, ವೃದ್ಧರು ಹಾಗೂ ಬೆಳಗ್ಗೆ, ಸಂಜೆ ವಾಯುವಿಹಾರಕ್ಕೆ ಹೊರಟವರ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ನಾಯಿ ದಾಳಿಗಳಾಗುತ್ತಿವೆ. ಹೆಚ್ಚುತ್ತಿರುವ ನಾಯಿ ದಾಳಿಗಳನ್ನು ಆಡಳಿತ ಯಂತ್ರ ನಿರ್ವಹಣೆ ಮಾಡಲೇಬೇಕು ಎಂದು ಧಾರವಾಡ ನಿವಾಸಿ ಶಿವು ಹಲಗಿ ಆಗ್ರಹಿಸುತ್ತಾರೆ.ನಿಯಂತ್ರಣಕ್ಕೆ ಕ್ರಮ:
ಬೆಳಗಾವಿ ವಿಭಾಗ ಮಟ್ಟದ ಆರೋಗ್ಯಾಧಿಕಾರಿಗಳ ಸಭೆಯಲ್ಲಿ ನಾಯಿ ಕಡಿತದ ಪ್ರಕರಣ ಸಂಖ್ಯೆ ಗಮನಿಸಿ ಆರೋಗ್ಯ, ಪಶುಸಂಗೋಪನೆ ಹಾಗೂ ಸ್ಥಳೀಯ ಸಂಸ್ಥೆಗಳು ಒಟ್ಟಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸೂಚನೆ ನೀಡಿದ್ದೇನೆ. ಜತೆಗೆ ಆರೋಗ್ಯ ಇಲಾಖೆಯು ನಾಯಿ ಕಡಿತದ ಪ್ರಕರಣದಲ್ಲಿ ಹೆಚ್ಚಿನ ಸಾವು ಉಂಟಾಗದಂತೆ ಆಂಟಿ ರೇಬಿಸ್ ವ್ಯಾಕ್ಸಿನ್ ಹಾಗೂ ಹಾವು ಕಡಿತಕ್ಕೆ ಆಂಟಿ ಸ್ನೇಕ್ ವ್ಯಾಕ್ಸಿನ್ ದಾಸ್ತಾನು ಮಾಡಿಕೊಳ್ಳಲಾಗಿದೆ. ನಾಯಿ ಹಾಗೂ ಹಾವು ಕಡಿತದ ಎಲ್ಲರಿಗೂ ಸೂಕ್ತ ಚಿಕಿತ್ಸೆ ಸಹ ಒದಗಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ತಿಳಿಸಿದ್ದಾರೆ.----
ಜಿಲ್ಲೆಯ ಹೆಸರುನಾಯಿ ಕಡಿತ ಸಾವು ಹಾವು ಕಡಿತ ಸಾವುಬೆಳಗಾವಿ 5562 2 49 2
ಬಾಗಲಕೋಟ12392 0 260 1ಧಾರವಾಡ 6585 0 254 2
ಗದಗ 5152 0 108 1ಹಾವೇರಿ 3237 1 288 4
ಉತ್ತರ ಕನ್ನಡ 8648 0 629 6ವಿಜಯಪುರ 7859 0 125 2
ಒಟ್ಟು 49435 3 1713 18