ಕರ್ನಾಟಕ ಸೇರಿದಂತೆ ದೇಶದಲ್ಲಿ 5 ಕೋಟಿ ಬಾಂಗ್ಲಾ ಮುಸ್ಲಿಂ ರೋಹಿಂಗ್ಯಾಗಳು ಅಕ್ರಮವಾಗಿ ವಾಸ ಮಾಡಿದ್ದಾರೆ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ಹರಪನಹಳ್ಳಿ: ಕರ್ನಾಟಕ ಸೇರಿದಂತೆ ದೇಶದಲ್ಲಿ 5 ಕೋಟಿ ರೋಹಿಂಗ್ಯಾ ಮುಸ್ಲಿಮರು ಅಕ್ರಮವಾಗಿ ವಾಸ ಮಾಡಿದ್ದಾರೆ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.
ತಾಲೂಕಿನ ಕೊಮಾರನಹಳ್ಳಿ ಬಳಿಯಿರುವ ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಂಗ್ಲಾದೇಶದಿಂದ ಇಲ್ಲಿಗೆ ವಲಸೆ ಬಂದು ಬೇರೆ ಬೇರೆ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ. ಕರ್ನಾಟಕದಲ್ಲಿ 5 ಲಕ್ಷ ಬಾಂಗ್ಲಾ ಮುಸ್ಲಿಮರು ಅಕ್ರಮವಾಗಿ ನೆಲೆಸಿದ್ದಾರೆ. ಸಚಿವ ಜಮೀರ್ ಅಹಮದ್ ಖಾನ್ ಕ್ಷೇತ್ರದಲ್ಲಿಯೇ ಅತಿ ಹೆಚ್ಚು ರೋಹಿಂಗ್ಯಾಗಳು ವಾಸವಾಗಿದ್ದಾರೆ. ಅವರು ದೇಶಕ್ಕೆ ವೈರಸ್ ಇದ್ದಂತೆ, ಅವರನ್ನು ಮೊದಲು ದೇಶದಿಂದ ಹೊರ ಹಾಕಬೇಕು ಎಂದು ಆಗ್ರಹಿಸಿದರು.ಬಾಂಗ್ಲಾದಲ್ಲಿ ಶೇ. 12 ಇದ್ದ ಹಿಂದೂಗಳ ಸಂಖ್ಯೆ ಶೇ1-1.5ಕ್ಕೆ ಇಳಿದಿದೆ. ಉಳಿದ ಹಿಂದೂಗಳು ಎಲ್ಲಿಗೆ ಹೋದರೂ, ಏನಾದರೂ ಮುಸ್ಲಿಮರು ಅವರನ್ನು ಹತ್ಯೆ ಮಾಡಿದ್ದಾರೆ, ಹಿಂಸೆ ಕೊಟ್ಟಿದ್ದಾರೆ. ಅದರ ವಿರುದ್ಧ ನಾವು ನಿರಂತರ ಹೋರಾಟ ಮಾಡಿದ್ದೇವೆ. ಆದರೆ ನಮ್ಮ ಪ್ರಧಾನಿ ಮಾತ್ರ ಈ ಬಗ್ಗೆ ಮೌನ ವಹಿಸಿರುವುದು ಯಾಕೆ ಎಂದು ಪ್ರಶ್ನಿಸಿದ ಅವರು, ಹಿಂದೂಗಳ ರಕ್ಷಣೆಗಾಗಿ ನಿಮ್ಮನ್ನು ಮೂರು ಬಾರಿ ಪ್ರಧಾನಿ ಮಾಡಿದ್ದೇವೆ, ಕೂಡಲೇ ಅಕ್ರಮವಾಗಿ ವಾಸಿಸುತ್ತಿರುವ ಬಾಂಗ್ಲಾ ಮುಸ್ಲೀಮರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಬಾಂಗ್ಲಾದೇಶಕ್ಕೆ ರಫ್ತಾಗುವ ವಸ್ತುಗಳನ್ನು ತಕ್ಷಣವೇ ನಿಲ್ಲಿಸಬೇಕು. ಅವರ ಜತೆ ಕ್ರಿಕೆಟ್ ಆಡುವುದನ್ನು ನಿಲ್ಲಿಸಬೇಕು. ನಿಲ್ಲಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.ಲವ್ ಜಿಹಾದ್ ವಿರುದ್ಧ ನಾವು ಹೋರಾಟ ಮಾಡಿ ಸುಮಾರು 4670 ಯುವತಿಯರನ್ನು ಉಳಿಸಿದ್ದೇವೆ. ಕಾಂಗ್ರೆಸ್ ಸರ್ಕಾರ ಇಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ವೋಟ್‌ಗಾಗಿ ಮುಸ್ಲಿಂ ತುಷ್ಟೀಕರಣ ಮಾಡಬಾರದು ಎಂದರು.
ಇತ್ತೀಚೆಗೆ ಮರ್ಯಾದೆಗೇಡು ಹತ್ಯೆಗಳು ಹೆಚ್ಚಾಗುತ್ತಿದ್ದು, ಇದು ಅತ್ಯಂತ ಅಮಾನುಷ ಮತ್ತು ಕ್ರೂರ ಕೆಲಸ. ಇದು ಮಾನವ ಕುಲಕ್ಕೆ ಅವಮಾನ. ಇಂತಹ ಕೆಲಸ ಮಾಡುವವರನ್ನು ಜೈಲಿಗೆ ಕಳಿಸುವ ಬದಲು ಕೊಚ್ಚಿ ಕೊಚ್ಚಿ ಕೊಲ್ಲಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ಬೆಂಗಳೂರಿನ ಜೆ.ಜೆ. ನಗರದ ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಲೋಪತಿ ಎನ್ನುವುದು ದೊಡ್ಡ ಮಾಫಿಯಾ: ಅಲೋಪತಿ ಎನ್ನುವುದು ದೊಡ್ಡ ಮಾಫಿಯಾ, ಇದು ಈಗಾಗಲೇ ಜಗತ್ತನ್ನು ಆವರಿಸಿದೆ. ಭಯೋತ್ಪಾದನೆ ರೀತಿಯಲ್ಲಿ ದೇಶವನ್ನೇ ಬದಲಾಯಿಸುತ್ತದೆ. ಇಡೀ ವ್ಯವಸ್ಥೆಯನ್ನು ಹಾಳು ಮಾಡುತ್ತದೆ. ಇದರ ವಿರುದ್ಧ ನಾವು ಜಾಗ್ರತರಾಗಬೇಕು. ಆಯುರ್ವೇದ ಕಡೆ ಹೆಚ್ಚು ಗಮನ ಹರಿಸಬೇಕು. ಸರ್ಕಾರಗಳು ಪಠ್ಯಪುಸ್ತಕಗಳಲ್ಲಿ ಆಯುರ್ವೇದ ಮಹತ್ವ ಅಳವಡಿಸಿ ಮಕ್ಕಳಿಗೆ ತಿಳಿ ಹೇಳಬೇಕು ಎಂದು ಹೇಳಿದರು.ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ ನಿರ್ದೇಶಕ ಡಾ. ರಾಜೇಶ ಪಾದೇಕಲ್, ಮಾಧ್ಯಮ ಮತ್ತು ಸಂಪರ್ಕ ಮುಖ್ಯಸ್ಥ ಉದಯಶಂಕರ್ ಭಟ್, ಶ್ರೀರಾಮ ಸೇನೆಯ ಕಾರ್ಯಾಧ್ಯಕ್ಷ ಸುಂದರೇಶ ನರಗಲ್ ಇದ್ದರು.