ಸಾರಾಂಶ
ರಸ್ತೆ ನಿರ್ಮಾಣಕ್ಕೆ ಕೋಟ್ಯಂತರ ರುಪಾಯಿ ಬಿಡುಗಡೆ ಮಾಡಿಸಿದ್ದಾಗಿ ಫ್ಲೆಕ್ಸ್‌ಗಳನ್ನು ಹಾಕಿಸಿಕೊಂಡಿರುವ ಸಚಿವ ರಹೀಮ್ ಖಾನ್ ಅವರಿಗೆ ಜನ ಛೀಮಾರಿ ಹಾಕೋದಂತೂ ಗ್ಯಾರಂಟಿ. ಲೋಕೋಪಯೋಗಿ ಇಲಾಖೆ ಈ ಬಗ್ಗೆ ಇನ್ನಾದರೂ ಗಂಭೀರವಾಗಲಿ.
ಕನ್ನಡಪ್ರಭ ವಾರ್ತೆ, ಬೀದರ್
ವಾಹನ ಸವಾರರಿಗಷ್ಟೇ ಅಲ್ಲ ಪಾದಚಾರಿಗಳಿಗೂ ಜೀವ ಹಿಂಡುತ್ತಿದ್ದ ಶಿವನಗರ ರಸ್ತೆಗೆ ಸರ್ಕಾರ 5 ಕೋಟಿ ರು.ಗಳನ್ನು ಮಂಜೂರು ಮಾಡಿ ಕಾಮಗಾರಿ ಆರಂಭಿಸಿದೆಯಾದರೆ, ಆರಂಭಿಕ ಹಂತದಲ್ಲಿಯೇ ಕಾಮಗಾರಿಯ ಗುಣಮಟ್ಟ ಅನುಮಾನಕ್ಕೀಡು ಮಾಡಿದ್ದು, ಕೋಟ್ಯಂತರ ರುಪಾಯಿ ಅನುದಾನ ಹೊಳೆಯಲ್ಲಿ ಹುಣಸೆ ತೊಳೆದಂತಾಗುವ ಆತಂಕಕ್ಕೀಡು ಮಾಡಿದೆ.ಇಲ್ಲಿನ ಪಾಪನಾಶ ಗೇಟ್‌ನಿಂದ ಬರೀದಶಾಹಿ ಉದ್ಯಾನದವರೆಗೆ ಸುಮಾರು 1.1ಕಿಮೀ ರಸ್ತೆ ಅಭಿವೃದ್ಧಿಗೆ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿ ಗಳ ಅಡಿಯಲ್ಲಿ (ಅಪೆಂಡಿಕ್ಸ್ ಇ) 5 ಕೋಟಿ ರು.ಗಳ ಅನುದಾನ ಬಿಡುಗಡೆ ಮಾಡಿ ಲೋಕೋಪಯೋಗಿ ಇಲಾಖೆಯು ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಕಾಮಗಾರಿ ಆರಂಭವಾಗಿ ವಾರಗಳು ಉರುಳಿದ್ದು, ಒಂದು ಬದಿಯ ರಸ್ತೆಯನ್ನು ಕೆಲವೇ ಇಂಚುಗಳನ್ನು ಮಾತ್ರ ಅಗೆದು, ಅದರ ಮೇಲೆ ಸೇಡಿ ಬಳಸಿರುವುದು ಕಾಮಗಾರಿಯು ಎತ್ತ ಸಾಗಿದೆ ಎಂಬುವದನ್ನು ತೋರಿಸುತ್ತಿದೆಯಲ್ಲದೆ, ಈಗಾಗಲೇ ಕಾಮಗಾರಿ ಆರಂಭಿಸಿರುವ ಗುತ್ತಿಗೆದಾರರ ಕಾರ್ಯವೈಖರಿಯನ್ನು ಸಂಬಂಧಿತ ಇಲಾಖೆ ಮೇಲ್ವಿಚಾರಣೆ ನಡೆಸುತ್ತಿರುವುದರ ಬಗ್ಗೆಯೂ ಅನುಮಾನ ಮೂಡಿದೆ.ರಸ್ತೆಯ ಮೇಲೆ ಹಾಕಲಾಗಿರುವ ಕಂಕರ್‌ಗಳು ಎಲ್ಲೆಂದರಲ್ಲಿ ಬೀಸಾಡಿದಂತಿರುವುದು ರಸ್ತೆಯ ಇನ್ನೊಂದು ಬದಿ ಬಂದು ಬಿದ್ದಿರುವುದು, ಎರಡೂ ಬದಿ ರಸ್ತೆಯ ರಿಪೇರಿಯ ಹೊಣೆ ಹೊತ್ತಿರುವ ಗುತ್ತಿಗೆದಾರ ವಾಹನಗಳ ಸುಗಮ ಸಂಚಾರದತ್ತ ನಿರ್ಲಕ್ಷ್ಯ ವಹಿಸಿರುವುದು ಸ್ಪಷ್ಟವಾಗುತ್ತಿದೆ. ಒಂದು ಬದಿಯ ರಸ್ತೆಯ ರಿಪೇರಿ ನಡೆಯುತ್ತಿರುವಾಗ ಇನ್ನೊಂದು ಬದಿಯ ರಸ್ತೆಯನ್ನು ವಾಹನ ಸಂಚಾರದಲ್ಲಿ ದಟ್ಟಣೆ ಹೆಚ್ಚುವಯದು ಸಾಮಾನ್ಯ, ಹೀಗಿದ್ದಾಗ ಅದರತ್ತ ಕಿಂಚಿತ್ತೂ ಚಿತ್ತ ಹರಿಸದಿರುವುದು, ವಾಹನ ಸವಾರರಿಗೆ ಪ್ರಾಣ ಸಂಕಟ ವಾಗಿದೆ. ಇನ್ನು ಈಗಾಗಲೇ ರಿಪೇರಿಯಾಗುತ್ತಿರುವ ರಸ್ತೆಯ ಮೇಲೆಯೇ ವಾಹನಗಳು ಓಡಾಡುತ್ತಿರುವುದು ಕಾಮಗಾರಿಯ ಮೇಲಿನ ಹಿಡಿತ ತಪ್ಪಿದಂತಾಗಿದೆ. ವರ್ಷಗಳಿಂದ ರಸ್ತೆ ದುರಾವಸ್ಥೆಯಿಂದ ನಲುಗುತ್ತಿದ್ದ ವಾಹನ ಸವಾರರಿಗೆ ಸಿಹಿ ಸುದ್ದಿಯೇನೋ ಸಿಕ್ಕಿತಾದರೆ ಈ ರಸ್ತೆ ರಿಪೇರಿ, ನಿರ್ಮಾಣ ಕಾಮಗಾರಿ ಅಧೋಗತಿ ಹಿಡಿದಿದ್ದೆ ಯಾದಲ್ಲಿ ರಸ್ತೆ ನಿರ್ಮಾಣಕ್ಕೆ ಕೋಟ್ಯಂತರ ರುಪಾಯಿ ಬಿಡುಗಡೆ ಮಾಡಿಸಿದ್ದಾಗಿ ಫ್ಲೆಕ್ಸ್‌ಗಳನ್ನು ಹಾಕಿಸಿಕೊಂಡಿರುವ ಸಚಿವ ರಹೀಮ್ ಖಾನ್ ಅವರಿಗೆ ಜನ ಛೀಮಾರಿ ಹಾಕೋದಂತೂ ಗ್ಯಾರಂಟಿ. ಲೋಕೋಪಯೋಗಿ ಇಲಾಖೆ ಈ ಬಗ್ಗೆ ಗಂಭೀರವಾಗಲಿ. ಕಾಮಗಾರಿಯ ಉತ್ತಮ ಹಾಗೂ ನಿಗದಿತ ಕಾರ್ಯಾನುಷ್ಠಾನ ವಾಹನಗಳ ಸುಗಮ ಸಂಚಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಿ.