ಸಾರಾಂಶ
ರಾಮಮೂರ್ತಿ ನವಲಿ
ಗಂಗಾವತಿ: ವಿಜಯನಗರ ರಾಜಧಾನಿಯಾಗಿದ್ದ ಆನೆಗೊಂದಿಯಲ್ಲಿ ಕಳೆದ ವರ್ಷ ಜರುಗಿದ ಉತ್ಸವದ ವೆಚ್ಚ ₹5 ಕೋಟಿಯನ್ನು ಸರ್ಕಾರ ಇನ್ನೂ ಪಾವತಿಸಿಲ್ಲ. ಹೀಗಾಗಿ ಉತ್ಸವದ ಗುತ್ತಿಗೆ ಪಡೆದವರು ಪರದಾಡುವ ಪ್ರಸಂಗ ಬಂದಿದೆ.ಐತಿಹಾಸಿಕವಾಗಿರುವ ಆನೆಗೊಂದಿ ಉತ್ಸವಕ್ಕೆ ಪ್ರತಿ ವರ್ಷ ಅನುದಾನ ಮೀಸಲಿರಿಸುವ ಸರ್ಕಾರದ ಭರವಸೆ ಮರೀಚಿಕೆಯಾಗಿ ಉಳಿದಿದೆ. ಕಳೆದ ವರ್ಷ ಆನೆಗೊಂದಿ ಉತ್ಸವದ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರು ಪ್ರತಿ ವರ್ಷ ಉತ್ಸವಕ್ಕೆ ₹2.50 ಕೋಟಿ ನೀಡುವ ಭರವಸೆ ನೀಡಿದ್ದರು. ಜತೆಗೆ ವಿವಿಧ ಇಲಾಖೆಗಳಿಂದ ಸಂಪನ್ಮೂಲ ಸಂಗ್ರಹಿಸಿ ಅದ್ಧೂರಿಯಾಗಿ ಉತ್ಸವ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ 2024 ಮಾ. 11, 12ರಂದು ಜರುಗಿದ ಉತ್ಸವದ ಬಾಕಿ ಇನ್ನು ₹5 ಕೋಟಿ ಇದೆ. ಇದು ಕಾರ್ಯಕ್ರಮದ ಗುತ್ತಿಗೆದಾರನನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
₹5 ಕೋಟಿ ಬಾಕಿ: ಆನೆಗೊಂದಿ ಉತ್ಸವಕ್ಕಾಗಿ ಆನೆಗೊಂದಿಯ ತಳವಾರ ಘಟ್ಟದ ಮೈದಾನದಲ್ಲಿ ಬೆಂಗಳೂರಿನ ಗುತ್ತಿಗೆದಾರರೊಬ್ಬರು ಬೃಹತ್ ವೇದಿಕೆ ನಿರ್ಮಿಸಿದ್ದರು. ಧ್ವನಿವರ್ಧಕ, ಆಸನಗಳ ವ್ಯವಸ್ಥೆ ಮಾಡಿದ್ದರು. ಇಲ್ಲಿ ನಡೆದ ಕಾರ್ಯಕ್ರಮಕ್ಕೆ ಪ್ರಸಿದ್ಧ ಕಲಾವಿದರನ್ನು ಆಹ್ವಾನಿಸಲಾಗಿತ್ತು. ಈ ಜವಾಬ್ದಾರಿ ಹೊತ್ತ ಗುತ್ತಿಗೆದಾರರಿಗೆ ಇನ್ನೂ ಹಣ ಪಾವತಿಯಾಗದ ಕಾರಣ ನಿತ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿ ಸುತ್ತಾಡುತ್ತಿದ್ದಾರೆ. ಕೇವಲ ಸ್ಥಳೀಯ ಕಲಾವಿದರು, ಪ್ರಚಾರಕ್ಕಾಗಿ ಹಣ ನೀಡಿ ಇಲಾಖೆ ಕೈ ತೊಳೆದುಕೊಂಡಿದೆ.ಬೆಂಗಳೂರು ಮತ್ತು ವಿವಿಧ ರಾಜ್ಯಗಳಿಂದ ಬಂದ ಕಲಾವಿದರಿಗೆ ಇನ್ನೂ ಹಣ ತಲುಪದ ಕಾರಣ ಗುತ್ತಿಗೆ ಪಡೆದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಆನೆಗೊಂದಿ ಉತ್ಸವದ ಹಳೆಯ ಬಾಕಿಯನ್ನು ಕೂಡಲೇ ನೀಡಬೇಕು ಎಂಬುದು ಕಲಾವಿದರು, ಗುತ್ತಿಗೆದಾರರ ಆಗ್ರಹವಾಗಿದೆ.ಮಲತಾಯಿ ಧೋರಣೆ ಸರಿಯಲ್ಲ: ಕಳೆದ ವರ್ಷ ಜರುಗಿದ ಐತಿಹಾಸಿಕ ಆನೆಗೊಂದಿ ಉತ್ಸವದ ಬಾಕಿ ಇನ್ನೂ ₹5 ಕೋಟಿ ಬರಬೇಕಾಗಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವರು ಅನುದಾನ ನೀಡುವಲ್ಲಿ ವಿಫಲರಾಗಿದ್ದಾರೆ. ಈಗ ಹಂಪಿ ಉತ್ಸವಕ್ಕೆ ಗಮನಹರಿಸುತ್ತಿದ್ದಾರೆ. ಆನೆಗೊಂದಿ ಉತ್ಸವದ ಕಡೆಗೆ ಗಮನ ಹರಿಸುತ್ತಿಲ್ಲ. ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಗುತ್ತಿಗೆ ಪಡೆದವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಹಲವು ಬಾರಿ ಕೋರಿಕೆ: ಆನೆಗೊಂದಿ ಉತ್ಸವಕ್ಕೆ ₹5 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾಗಿದೆ. ಆದರೆ ಸರ್ಕಾರ ಇತ್ತ ಗಮನಹರಿಸುತ್ತಿಲ್ಲ. ಹಲವಾರು ಬಾರಿ ಸಚಿವರಿಗೆ ಕೋರಿದರೂ ಗಮನಹರಿಸುತ್ತಿಲ್ಲ ಎಂದು ಆನೆಗೊಂದಿ ಉತ್ವವ ವೇದಿಕೆ ಸಿದ್ಧಪಡಿಸಿದ ಗುತ್ತಿಗೆದಾರರು ಹೇಳುತ್ತಾರೆ.