ಬಿಆರ್‌ಟಿಎಸ್‌ ಅವ್ಯವಸ್ಥೆ ಸರಿಪಡಿಸಲು 5 ದಿನ ಗಡುವು

| Published : Aug 17 2024, 12:51 AM IST

ಬಿಆರ್‌ಟಿಎಸ್‌ ಅವ್ಯವಸ್ಥೆ ಸರಿಪಡಿಸಲು 5 ದಿನ ಗಡುವು
Share this Article
  • FB
  • TW
  • Linkdin
  • Email

ಸಾರಾಂಶ

ಜೂ. 10ರಂದು ಜಿಲ್ಲಾ ಉಸ್ತುವಾರಿ ಸಚಿವರು, ಯೋಜನಾ ವ್ಯಾಪ್ತಿಯ ಶಾಸಕರಿಗೆ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸೂಕ್ತ ಸ್ಪಂದನೆ ಲಭಿಸದ ಪರಿಣಾಮ ಜೂ. 15ರಂದು‌ ನವಲೂರ ಬ್ರಿಜ್‌ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ನಡೆಸಿ ಗಮನ ಸಹ ಸೆಳೆಯಲಾಯಿತು.

ಧಾರವಾಡ:

ಹುಬ್ಬಳ್ಳಿ-ಧಾರವಾಡ ಅವಳಿ ನಗರ ಮಧ್ಯದ ಬಿಆರ್‌ಟಿಎಸ್ ಅವ್ಯವಸ್ಥೆ ಸರಿಪಡಿಸಲು ಕಾಲಾವಕಾಶ ನೀಡಿ ಧಾರವಾಡ ಧ್ವನಿ ವತಿಯಿಂದ ಜಿಲ್ಲಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಯೋಜನೆ ಅನುಷ್ಠಾನ ಆದ ನಂತರ ಅವಳಿ ನಗರದ ನಡುವೆ ಸಂಚರಿಸುತ್ತಿರುವ ವಾಹನ ಸವಾರರಿಗೆ ಮತ್ತು ಇತರರಿಗೆ ಆಗುತ್ತಿರುವ ತೊಂದರೆ ನಿವಾರಿಸುವಂತೆ ಜೂ. 10ರಂದು ಜಿಲ್ಲಾ ಉಸ್ತುವಾರಿ ಸಚಿವರು, ಯೋಜನಾ ವ್ಯಾಪ್ತಿಯ ಶಾಸಕರಿಗೆ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸೂಕ್ತ ಸ್ಪಂದನೆ ಲಭಿಸದ ಪರಿಣಾಮ ಜೂ. 15ರಂದು‌ ನವಲೂರ ಬ್ರಿಜ್‌ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ನಡೆಸಿ ಗಮನ ಸಹ ಸೆಳೆಯಲಾಯಿತು. ಆದರೂ ಸಕಾಲಕ್ಕೆ ಸಮರ್ಪಕ ಉತ್ತರ ಸಿಗದಿರುವುದು ಬೇಸರ ತರಿಸಿದೆ. ಆದ್ದರಿಂದ ಐದು ದಿನ ಒಳಗೆ ಜಿಲ್ಲಾಡಳಿತದಿಂದ ಸೂಕ್ತ ಉತ್ತರ ಸಿಗದಿದ್ದರೆ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಯಿತು.

ಮನವಿ ‌ಸ್ವೀಕರಿಸಿದ ಜಿಲ್ಲಾಧಿಕಾರಿ ದಿವ್ಯಪ್ರಭು, ಈ ಯೋಜನೆಯ ಅಡಚಣಿಗಳ ನಿವಾರಣೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಸೂಚನೆ ಕೂಡ ನೀಡಿರುವರು. ಈ ಸಂಬಂಧ ಔಪಚಾರಿಕ ಸಭೆ ಸಹ ನಡೆದಿದೆ. ಆದ್ದರಿಂದ ಸಂಬಂಧಿಸಿದವರ ಜೊತೆ ಶೀಘ್ರ ಸಭೆ ನಡೆಸಿ, ಸ್ಪಷ್ಟ ಮಾಹಿತಿ ನೀಡಲಾಗುವುದು ಎಂದು ಭರವಸೆ ನೀಡಿದರು. ಧಾರವಾಡ ಧ್ವನಿ ಅಧ್ಯಕ್ಷ ಈಶ್ವರ ಶಿವಳ್ಳಿ, ಸಂತೋಷ ಪಟ್ಟಣಶೆಟ್ಟಿ, ಶರಣಗೌಡ ಗಿರಡ್ಡಿ, ಇಮ್ರಾನ ತಾಳಿಕೋಟಿ, ಮಂಜುನಾಥ ನೀರಲಕಟ್ಟಿ,ವೆಂಕಟೇಶ ರಾಯ್ಕರ್, ಬಸವರಾಜ ಪೊಮೋಜಿ, ಭೀಮಪ್ಪ ಕಾಸಾಯಿ, ಪರಮೇಶ್ವರ ಕಾಳೆ, ರಾಜೇಶ ಮನಗುಂಡಿ, ಅಶೋಕ ದೇಶಪಾಂಡೆ, ಶಂಕರ ತಾವರೇನವರ, ಸುರೇಖಾ ಪೂಜಾರ, ಗುರುರಾಜ ಹವಾಲ್ದಾರ ಇತರರು ‌ಮನವಿ ಸಲ್ಲಿಸಿದರು.