ಸಾರಾಂಶ
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ ಗಡಿಭಾಗದ ಮರಾಠ ಜನರ ಬಹುದಿನದ ಬೇಡಿಕೆಯಾದ ಶಿವಾಜಿ ಸ್ಮಾರಕ ಅಭಿವೃದ್ಧಿಗೆ ಕೆಕೆಆರ್‌ಡಿಬಿ ಅನುದಾನದಲ್ಲಿ 1 ಕೋಟಿ 50 ಲಕ್ಷ ಮಂಜೂರು ಅಗಿರುವುದು ಸ್ವಾಗತಾರ್ಹ ಕಾರ್ಯವಾಗಿದೆ ಎಂದು ಮಾಜಿ ಎಂಎಲ್‌ಸಿ ವಿಜಯಸಿಂಗ್ ನುಡಿದರು. ನಗರದ ಶಿವಾರ್ಜಿ ಸ್ಮಾರಕದಲ್ಲಿ ಹಮ್ಮಿಕೊಂಡಿದ್ದ ಟೌನಹಾಲ್ ಮತ್ತು ಶಿವಾಜಿ ಸ್ಮಾರಕ ನಿರ್ಮಾಣ ಅಡಿಗಲ್ಲು ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಬಡವರ, ಕಾರ್ಮಿಕರ, ರೈತರ, ಮಹಿಳೆಯರ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಅದರ ಜತೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನೂ ಮಾಡಲಾಗುತ್ತಿದೆ ಎಂದು ತಿಳಿಸಿದರು. ಕಳೆದ ವರ್ಷ ಶಿವಾಜಿ ಜಯಂತಿಯಲ್ಲಿ ಈ ಸ್ಮಾರಕಕ್ಕೆ ಕೆಕೆಆರ್‌ಡಿಬಿಯಿಂದ ₹1.50 ಕೋಟಿ ಅನುದಾನ ಮಂಜೂರು ಮಾಡಲು ಡಾ. ಅಜಯಸಿಂಗ್ ಒಪ್ಪಿದ್ದರು. ನುಡಿದಂತೆ ನಡೆದುಕೊಂಡು ಅನುದಾನ ಮಂಜೂರು ಮಾಡಿದ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.ಸಂಸದ ಸಾಗರ ಖಂಡ್ರೆ ಮಾತನಾಡಿ, ಶಿವಾಜಿ ಮಹಾರಾಜರು ಕೇವಲ ಒಂದು ಸಮಾಜಕ್ಕೆ ಸೀಮಿತವಲ್ಲ. ಅವರು ನಮ್ಮೆಲ್ಲರಿಗೂ ಆದರ್ಶವಾಗಿದ್ದಾರೆ. ಮರಾಠಾ ಸಮಾಜದ ಕೆಲಸವಾಗಲಿ, ಶಿವಾಜಿ ಸ್ಮಾರಕದ ಕೆಲಸಗಳಿಗಾಗಲಿ ನನ್ನ ಸಂಪೂರ್ಣ ಬೆಂಬಲ ಇರುತ್ತದೆ ಎಂದರು.
ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಹಿಂದುಳಿದ ಬೀದರ ಜಿಲ್ಲೆ ಅಭಿವೃದ್ಧಿಯಾಗಬೇಕಾದರೆ, ಇಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳು ಬರಬೇಕು. ನೀರಾವರಿ ಯೋಜನೆಗಳು ಮತ್ತು ತೋಟಗಾರಿಕೆ, ಹೈನುಗಾರಿಕೆಗೆ ಇಲ್ಲಿ ಉತ್ತಮ ಅವಕಾಶಗಳಿವೆ. ಇವುಗಳನ್ನು ಜಾರಿಗೊಳಿಸಲು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ತಿಳಿಸಿದರು.ಕೆಕೆಆರ್‌ಡಿಬಿ ಅಧ್ಯಕ್ಷರು ಹಾಗೂ ಶಾಸಕ ಡಾ. ಅಜಯಸಿಂಗ್ ಮಾತನಾಡಿ, ಸ್ಮಾರಕ ಒಳ್ಳೆಯ ರೀತಿಯಿಂದ ನಿರ್ಮಾಣವಾಗಲಿ. ಇನ್ನು ಹೆಚ್ಚಿನ ಅನುದಾನ ಬೇಕಾದರೆ ಒದಗಿಸಿಕೊಡಲಾಗುತ್ತದೆ. ನಮ್ಮ ಸಹೋದರ ವಿಜಯಸಿಂಗ್ ನನ್ನ ಮೇಲೆ ಒತ್ತಡ ಹೇರಿ, ಹಣ ಮಂಜೂರು ಮಾಡಿಸಿಕೊಂಡಿದ್ದಾರೆ. ಮಹಾನ್ ಕ್ರಾಂತಿ ಪುರುಷ ಶಿವಾಜಿ ಸ್ಮಾರಕಕ್ಕೆ ಅನುದಾನ ನೀಡುವ ಭಾಗ್ಯ ನನಗೆ ಲಭಿಸಿದೆ ಎಂದು ನುಡಿದರು.ವಿಧಾನ ಪರಿಷತ್ ಸದಸ್ಯ ಎಂಜಿ. ಮೂಳೆ, ಮಾಲಾ ನಾರಾಯಣರಾವ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಧನರಾಜ ತಾಳಂಪಳ್ಳಿ, ಸಮಾಜದ ಮುಖಂಡರಾದ ಪದ್ಮಾಕರ ಪಾಟೀಲ, ಅಂಗದರಾವ ಜಗತಾಪ, ಸದಾನಂದ ಬಿರಾದಾರ, ಬಾಲಾಜಿ ಚಂಡಕಾಪೂರ, ಜ್ಞಾನೋಬಾ ನಿಟ್ಟೂರೆ, ಗೋವಿಂದ ಮೂಳೆ, ತಾತೇರಾವ ಪಾಟೀಲ, ಜ್ಞಾನೇಶ್ವರ ಮೂಳೆ, ವಿಕ್ರಮ ಪಾಟೀಲ, ರಾಜು ಪಾಟೀಲ ಹಳ್ಳಿ, ಓಂ ಪಾಟೀಲ, ರಾಜು ಭೋಸ್ಲೆ, ಶಿವಾಜಿ ಮಹಾರಾಜ ಸೇವಾ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.