ಸಾರಾಂಶ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಂದೂರು ಶಾಲೆ, ಬೆಳ್ಳೂರು ಪ್ರೌಢ ಶಾಲೆ ಹಾಗೂ ಬೆಳ್ಳೂರು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಹೈಟೆಕ್ ಶೌಚಾಲಯ ನಿರ್ಮಿಸಲು ತಲಾ 5 ಲಕ್ಷ ರುಪಾಯಿಯಂತೆ ಒಟ್ಟು 15 ಲಕ್ಷ ರುಪಾಯಿ ಮಂಜೂರಾಗಿದೆ ಎಂದು ಸೀತೂರು ಗ್ರಾಪಂ ಸದಸ್ಯ ಎಚ್.ಇ.ದಿವಾಕರ ತಿಳಿಸಿದರು.ಅವರು ಮಂಗಳವಾರ ಸೀತೂರು ಶಾಲಾ ಆವರಣದ ರಂಗಮಂದಿರದಲ್ಲಿ ಗ್ರಾಪಂ ಆಶ್ರಯದಲ್ಲಿ ನಡೆದ ಮಕ್ಕಳ, ಮಹಿಳೆಯರ ಹಾಗೂ ವಿಕಲಚೇತನರ ಗ್ರಾಮ ಸಭೆಯಲ್ಲಿ ಮಾತನಾಡಿದರು. ಈ ಮೂರು ಶಾಲೆಗಳಿಗೆ ತಾಪಂ ಎನ್‌ಆರ್‌ಇಜಿಯಿಂದ ₹2 ಲಕ್ಷ 80 ಸಾವಿರ ಹಾಗೂ ಶಿಕ್ಷಣ ಇಲಾಖೆಯಿಂದ ₹2 ಲಕ್ಷ 20 ಸಾವಿರ ಬರಲಿದೆ. ಅಲ್ಲದೆ ಮಲ್ಲಂದೂರು ಶಾಲೆಗೆ ಎನ್‌ಆರ್‌ಇಜಿಯಿಂದ ಕಾಂಪೌಂಡ್ ನಿರ್ಮಿಸಲು ₹3 ಲಕ್ಷ ಬೆಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ನಿರ್ಮಿಸಲು ₹3 ಲಕ್ಷ ಮಂಜೂರಾಗಿದೆ ಎಂದರು.
ಗ್ರಾಪಂ ಸದಸ್ಯ ಎಸ್.ಉಪೇಂದ್ರ ಮಾತನಾಡಿ, ಪ್ರಸ್ತುತ ಎಲ್ಲಾ ಸರ್ಕಾರಿ ಶಾಲೆಗಳಿಗೂ ಸರ್ಕಾರ ಮೂಲಭೂತ ಸೌಕರ್ಯ ಒದಗಿಸಿಕೊಟ್ಟಿದೆ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳಿಸಬೇಕು. ಈಗಾಗಲೇ ಹಲವು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಲ್ಲದೆ ಶಾಲೆ ಮುಚ್ಟುವಂತಹ ಪರಿಸ್ಥಿತಿ ಬಂದಿದೆ ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಸೀತೂರು ಗ್ರಾಪಂ ಅಧ್ಯಕ್ಷೆ ರೇಖಾ ಮಾತನಾಡಿ, ಮಕ್ಕಳ ಗ್ರಾಮ ಸಭೆಯಲ್ಲಿ ಹಲವು ಶಾಲೆ ಮಕ್ಕಳು ತಮ್ಮ ಶಾಲೆಗಳಿಗೆ ಬೇಕಾದ ಸೌಕರ್ಯ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಈ ಬಗ್ಗೆ ಗ್ರಾಪಂಯಿಂದ ಹಂತ, ಹಂತವಾಗಿ ಮೂಲಭೂತ ಸೌಕರ್ಯ ಹಾಗೂ ಮಕ್ಕಳ ಇತರ ಬೇಡಿಕೆ ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು.
ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಪ್ರೇಮ, ಸದಸ್ಯರು ಕವಿತ, ಸುಜಾತ, ದಾಮಿನಿ, ವಿಜಯ,ಸಿದ್ದಪ್ಪಗೌಡ, ಪಿಡಿಓ ಶ್ರೀನಿವಾಸ್, ಸೀತೂರು ಶಾಲಾ ಮುಖ್ಯೋಪಾಧ್ಯಾಯ ಸುರೇಶ್, ಗ್ರಾಪಂ ಕಾರ್ಯದರ್ಶಿ ನವೀನ್ ಕುಮಾರ್ ಉಪಸ್ಥಿತರಿದ್ದರು.ಸಭೆಯಲ್ಲಿ ಸೀತೂರು ಗ್ರಾಪಂ ವ್ಯಾಪ್ತಿಯ 9 ಶಾಲೆಗಳ ಮಕ್ಕಳು ಭಾಗವಹಿಸಿದ್ದರು. ಸೀತೂರು ಶಾಲೆ ಮಕ್ಕಳು ಮಾತನಾಡಿ, ನಮ್ಮ ಶಾಲೆಗೆ ಶಾಲಾ ಕಾಂಪೌಂಡ್, ಶೌಚಾಲಯ, ಕೈತೋಟದ ಪರಿಕರ ಒದಗಿಸಬೇಕು ಎಂದು ಮನವಿ ಮಾಡಿದರು. ಕಮಲಾಪುರ ಶಾಲೆ ಮಕ್ಕಳು ಮಾತನಾಡಿ, ಗೋಡೆ ಹಾಗೂ ನೆಲ ಹಾಳಾಗಿದ್ದು ಇದರ ದುರಸ್ತಿ ಮಾಡಿಸಿಕೊಡಬೇಕು ಎಂದರು. ಮಲ್ಲಂದೂರು ಶಾಲೆ ಮಕ್ಕಳು ಮಾತನಾಡಿ, ರಾಷ್ಟ್ರೀಯ ಹಬ್ಬಗಳಿಗೆ ಗ್ರಾಪಂಯಿಂದ ಧನ ಸಹಾಯ ಮಾಡಬೇಕು ಎಂದರು. ಬೆಳ್ಳೂರು ಪ್ರೌಢ ಶಾಲೆ ಮಕ್ಕಳು ಮಾತನಾಡಿ, ಶಾಲೆ ಮೇಲ್ಚಾವಣಿ ಹಾಳಾಗಿದೆ. ನೆಲಕ್ಕೆ ಹಾಕಿದ್ದ ಸಿಮೆಂಟ್ ಸಹ ಹಾಳಾಗಿದ್ದು ದುರಸ್ತಿ ಮಾಡಿಸಿಕೊಡಬೇಕು ಎಂದರು.