ಸಾರಾಂಶ
ವಿ.ಪ ಸದಸ್ಯ ಮರಿತಿಬ್ಬೇಗೌಡ ಭರವಸೆ । ಸಿಬಿಎಸ್‌ಇ ಶಾಲಾ ವಾರ್ಷಿಕೋತ್ಸವ ಸಮಾರಂಭ
ಕನ್ನಡಪ್ರಭ ವಾರ್ತೆ ಚಾಮರಾಜನಗರ ತಮ್ಮ ಶಾಸಕರ ಕ್ಷೇತ್ರ ಅಭಿವೃದ್ದಿ ಅನುದಾನದಲ್ಲಿ 5 ಲಕ್ಷ ರು. ಅನುದಾನವನ್ನು ಮರಿಯಾಲ ಶ್ರೀಮುರುಘರಾಜೇಂದ್ರಸ್ವಾಮಿ ವಿದ್ಯಾಸಂಸ್ಥೆಯ ಮೂಲಭೂತ ಸೌಕರ್ಯಕ್ಕಾಗಿ ನೀಡುವುದಾಗಿ ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಭರವಸೆ ನೀಡಿದರು.ತಾಲೂಕಿನ ಮರಿಯಾಲದ ಶ್ರೀಮುರುಘರಾಜೇಂದ್ರಸ್ವಾಮಿ ಸಿಬಿಎಸ್ಇ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ಶ್ರೀ ಮುರುಘರಾಜೇಂದ್ರ ಮಹಾಸಂಸ್ಥಾನ ಶ್ರೀಮಠದ ಭಕ್ತರಲ್ಲಿ ನಾನೂ ಒಬ್ಬ. ಶ್ರೀ ಮಠವು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯವಾದದ್ದು, ಇಲ್ಲಿಯ ಅಭಿವೃದ್ಧಿಗೆ ಹಿರಿಯ ರಾಜಕಾರಣಿ, ಮಾಜಿ ಸಚಿವ ರಾಜಶೇಖರಮೂರ್ತಿ ಅವರು ಶ್ರೀಮಠದ ಭಕ್ತರಾಗಿದ್ದು, ಶ್ರೀಮಠದಲ್ಲಿ ಶಿಕ್ಷಣ ಸಂಸ್ಥೆಗಳು ಬೆಳೆಯುವುದಕ್ಕೆ ಬಹಳಷ್ಠು ಸಹಕಾರ ನೀಡಿದ್ದಾರೆ. ಈ ಶಾಲೆಯಲ್ಲಿ ೪೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದು ತುಂಬಾ ಸಂತೋಷದ ವಿಷಯ. ಶಿಕ್ಷಕರು ಪ್ರತಿ ಮಕ್ಕಳನ್ನು ಆಧರಿಸಿ ವಿದ್ಯಾರ್ಥಿಗಳ ಭವಿಷ್ಯವನ್ನು ಆಧಾರವಾಗಿಟ್ಟುಕೊಂಡು ಪ್ರೀತಿಯಿಂದ ಗುಣಾತ್ಮಕ ಶಿಕ್ಷಣವನ್ನು ಮಕ್ಕಳಿಗೆ ನೀಡುತ್ತಿದ್ದಾರೆ. ಸ್ವಾಮಿ ವಿವೇಕಾನಂದರು ಹೇಳಿದಂತೆ ವಿದ್ಯಾರ್ಥಿಗಳು ಪಠ್ಯಕ್ರಮದಿಂದ ಕಲಿಯುವುದಕ್ಕಿಂತ ಹೆಚ್ಚಾಗಿ ತಾವು ಶಿಕ್ಷಕರು, ಪೋಷಕರನ್ನು ನೋಡಿ ಕಲಿಯುವುದು ಬಹಳ ಇದೆ. ಜಗಜ್ಯೋತಿ ಬಸವೇಶ್ವರರ ಚಿಂತನೆಗಳು ಕೂಡ ಸಾಮಾಜಿಕ ಚಿಂತನೆ, ಧಾರ್ಮಿಕ ಚಿಂತನೆಯಾಗಿತ್ತು. ಅವರು ಕೂಡ ಸಮಾನತೆ, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರು. ಕೃಷಿ ಜಂಟಿ ನಿರ್ದೇಶಕ ಡಾ.ಎಂ.ತಿರುಮಲ್ಲೇಶ್, ಹಿರಿಯ ವಕೀಲ ಅರುಣ್ ಕುಮಾರ್ ಮಾತನಾಡಿದರು.ಶ್ರೀ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ, ಶ್ರೀ ಸಿದ್ದಮಲ್ಲೇಶ್ವರ ವಿರಕ್ತ ಮಠದ ಶ್ರೀ ಚನ್ನಬಸವಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಡಯಟ್‌ನ ಹಿರಿಯ ಉಪನ್ಯಾಸಕ ಯು.ಆರ್.ಲಿಂಗರಾಜೇ ಅರಸ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಎಂ.ಬಸವಣ್ಣ, ಉಪಾಧ್ಯಕ್ಷ ಜಿ.ಕುಮಾರಸ್ವಾಮಿ, ಆರ್.ಡಿ.ನಾಗರಾಜು, ಪ್ರಾಂಶುಪಾಲ ಗಿರೀಶ್, ಕರ್ನಾಟಕ ರಾಜ್ಯ ಪ್ರೌಢಶಾಲಾ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವೀರಭದ್ರಸ್ವಾಮಿ, ಪ್ರಧಾನ ಕಾರ್ಯದರ್ಶಿ ಕಿರಣ್ ರಾಜು, ಕೆ.ಎಸ್.ಷಡಕ್ಷರಿ ಹಾಗೂ ಸಂಸ್ಥೆಯ ಆಡಳಿತ ನಿರ್ದೇಶಕರು, ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು.