ಸಾರಾಂಶ
ಬೆಂಗಳೂರು : ನಮ್ಮ ಮೆಟ್ರೋ ಭವಿಷ್ಯದ ಮಾರ್ಗಗಳಲ್ಲಿ ರೈಲುಗಳ ನಿರ್ವಹಣೆ ಮತ್ತು ಕಾರ್ಯಾಚರಣೆಗೆ ನಗರದಲ್ಲಿ ಹೊಸ 5 ಡಿಪೋಗಳು ನಿರ್ಮಾಣ ಆಗುತ್ತಿವೆ. ಇವು ಮುಂದಿನ ನಾಲ್ಕು ವರ್ಷದಲ್ಲಿ ಮೆಟ್ರೋಗೆ ಸೇರ್ಪಡೆ ಆಗಲಿರುವ 159 ರೈಲುಗಳನ್ನು ನಿರ್ವಹಣೆ ಮಾಡಲಿವೆ.
ಪ್ರಸ್ತುತ ಕಾಡುಗೋಡಿ ಡಿಪೋ (ನೇರಳೆ ಮಾರ್ಗ) ಹಾಗೂ ಪೀಣ್ಯ ಡಿಪೋಗಳು (ಹಸಿರು ಮಾರ್ಗ) ಸೇರಿ 57 ರೈಲುಗಳನ್ನು ನಿರ್ವಹಿಸುತ್ತಿದೆ. ಮುಂದೆ ತೀತಾಘರ್‌ನಿಂದ ಹಳದಿ ಮಾರ್ಗಕ್ಕೆ 15, ನೇರಳೆ, ಹಸಿರು ಮಾರ್ಗಕ್ಕಾಗಿ 21 ಸೇರಿ ಒಟ್ಟೂ 36 ರೈಲು ಬರುತ್ತಿದೆ. ಬಿಇಎಂಎಲ್ ಕಂಪನಿ ಗುಲಾಬಿ ಮಾರ್ಗಕ್ಕಾಗಿ 16, ನೀಲಿ ಮಾರ್ಗದ ಎರಡು ಹಂತ ಸೇರಿ 37 ರೈಲುಗಳನ್ನು ಒದಗಿಸುತ್ತಿದೆ.ಇವೆಲ್ಲ ಸೇರಿ 2026-28ರ ವೇಳೆಗೆ ಮೆಟ್ರೋ ರೈಲುಗಳ ಸಂಖ್ಯೆ ಹಂತ ಹಂತವಾಗಿ 159ಕ್ಕೆ ಏರಿಕೆಯಾಗಲಿದೆ. ಈ ರೈಲುಗಳ ಕಾರ್ಯಾಚರಣೆ, ನಿರ್ವಹಣೆಗಾಗಿ ಬಿಎಂಆರ್‌ಸಿಎಲ್ ಹೊಸ ಡಿಪೋ ನಿರ್ಮಿಸುತ್ತಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲ ಭೂಗತ ಡಿಪೋ:ಬೈಯಪ್ಪನಹಳ್ಳಿ ಡಿಪೋ ನವೀಕರಣ ಕಾಮಗಾರಿ ನಡೆಯುತ್ತಿದೆ. ಬೈಯ್ಯಪ್ಪನಹಳ್ಳಿ ಡಿಪೋ ₹ 249.19ಕೋಟಿ ವೆಚ್ಚದಲ್ಲಿ ನವೀಕರಣ ಆಗುತ್ತಿದ್ದು, ಇದು ನಮ್ಮ ಮೆಟ್ರೋದ ಮೊದಲ ಭೂಗತ ಡಿಪೋ ಎನ್ನಿಸಿಕೊಳ್ಳಲಿದೆ. ಈ ಡಿಪೋ ಅಂಡರ್‌ಗ್ರೌಂಡ್‌ನಲ್ಲಿ 21 ಹಾಗೂ ನೆಲಮಟ್ಟದಲ್ಲಿ 20 ನಿರ್ವಹಣಾ ಮಾರ್ಗ (ಸ್ಟ್ಯಾಬ್ಲಿಂಗ್ ಲೈನ್ಸ್) ಒಳಗೊಂಡಿದೆ.ನೀಲಿ ಮಾರ್ಗ ಹಂತ 2ಎ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರದವರೆಗೆ ಹಾಗೂ ಹಂತ 2ಬಿ ಕೃಷ್ಣರಾಜಪುರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಸಂಚರಿಸುವ ಮೆಟ್ರೋ ರೈಲುಗಳು ಇಲ್ಲಿಂದ ಕಾರ್ಯಾಚರಣೆ ಆಗಲಿದೆ.
ಇನ್ನು ಬೈಯ್ಯಪ್ಪನಹಳ್ಳಿ ಹೊರತುಪಡಿಸಿ ಐದು ಡಿಪೋಗಳು ತಲೆ ಎತ್ತುತ್ತಿವೆ. ವಿಮಾನ ನಿಲ್ದಾಣ ಬಳಿಯ ಶೆಟ್ಟಿಗೇರಿ ಮೆಟ್ರೋ ಡಿಪೋವನ್ನು ₹ 182.33 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿದ್ದು, ಶೇ.50 ರಷ್ಟು ಕಾಮಗಾರಿ ಮುಗಿದಿದೆ. ಇದು ನೆಲಮಟ್ಟದಲ್ಲಿ 10 ಸ್ಟ್ಯಾಬ್ಲಿಂಗ್ ಲೈನ್ಸ್ ಹೊಂದಿರಲಿದ್ದು, ಭವಿಷ್ಯದಲ್ಲಿ ಎತ್ತರಿಸಿದ ಮಾರ್ಗದಲ್ಲಿ 12 ನಿರ್ವಹಣಾ ಮಾರ್ಗ ನಿರ್ಮಿಸುವ ಯೋಜನೆ ಇದೆ.
ಇದು ನೀಲಿಮಾರ್ಗ 2ಬಿ ಹಂತದ 21 ರೈಲುಗಳ ಕಾರ್ಯಾಚರಣೆಗೆ ಅವಕಾಶ ಕಲ್ಪಿಸಲಿದೆ.ನಾಗವಾರದಿಂದ ಕಾಳೇನ ಅಗ್ರಹಾರದವರೆಗೆ ಸಂಪರ್ಕಿಸುವ ಅತೀ ಉದ್ದದ ಭೂಗತ ಮೆಟ್ರೋ ಮಾರ್ಗದಲ್ಲಿ ಸಂಚರಿಸುವ ರೈಲುಗಳನ್ನು ನಿರ್ವಹಿಸಲು ಕೊತ್ತನೂರು ಬಳಿ ಡಿಪೋ ನಿರ್ಮಾಣಗೊಳ್ಳುತ್ತಿದೆ. 20 ಸ್ಟ್ಯಾಬ್ಲಿಂಗ್ ಲೈನ್ಸ್ ಹೊಂದಿರುವ ಈ ಡಿಪೋ ಸದ್ಯ ಶೇ. 66ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಇನ್ನು, ಅಂಜನಾಪುರದ ಬಳಿ ಹಸಿರು ಮಾರ್ಗದ ರೈಲುಗಳನ್ನು ನಿರ್ವಹಿಸಲು ಅಂಜನಾಪುರದ ಬಳಿ ಡಿಪೋ ನಿರ್ಮಾಣ ಆಗುತ್ತಿದ್ದು, ಶೇ. 50ರಷ್ಟು ಕಾಮಗಾರಿ ಮುಗಿದಿದೆ.
ಈ ಡಿಪೋಗಳನ್ನು ಮುಂದಿನ 20 ವರ್ಷಗಳ ಅಂದರೆ 2041ರವರೆಗೆ ಮೆಟ್ರೋ ರೈಲುಗಳ ನಿರ್ವಹಣೆ ದೃಷ್ಟಿಯಿಂದ ನಿರ್ಮಿಸಲಾಗುತ್ತಿದೆ. ಗುತ್ತಿಗೆ ಕಂಪನಿಗಳು ಇವನ್ನು ಅಗತ್ಯಕ್ಕೆ ತಕ್ಕಂತೆ ಉನ್ನತೀಕರಿಸಲಿವೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಚಲ್ಲಘಟ್ಟದಲ್ಲಿ ಅತೀದೊಡ್ಡ ಡಿಪೋ:
ಬಿಎಂಆರ್‌ಸಿಎಲ್ ₹ 499.41 ಕೋಟಿ ವೆಚ್ಚದಲ್ಲಿ ಚಲ್ಲಘಟ್ಟದಲ್ಲಿ ನಮ್ಮ ಮೆಟ್ರೋದ ಅತೀದೊಡ್ಡ ಡಿಪೋವನ್ನು ನಿರ್ಮಿಸುತ್ತಿದೆ. 40ಎಕರೆ ಪ್ರದೇಶದಲ್ಲಿರುವ ಈ ಡಿಪೋ ಬರೋಬ್ಬರಿ 38 ರೈಲುಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರಲಿದೆ. ಭೂಸ್ವಾದೀನ ಸೇರಿ ಹಲವು ಸಮಸ್ಯೆಯಿಂದಾಗಿ ವಿಳಂಬವಾಗಿದ್ದ ಈ ಯೋಜನೆ ಸದ್ಯ ಶೇ. 53ರಷ್ಟು ಮುಗಿದಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಆರ್.ವಿ.ರಸ್ತೆ - ಬೊಮ್ಮಸಂದ್ರ ಸಂಪರ್ಕಿಸುವ ಹಳದಿ ಮಾರ್ಗಕ್ಕೆ ಎಲೆಕ್ಟ್ರಾನಿಕ್ ಸಿಟಿ ಬಳಿಯ ಹೆಬ್ಬಗೋಡಿಯಲ್ಲಿ ಡಿಪೋ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ಇದೇ ಡಿಸೆಂಬರ್‌ನಿಂದ ಇಲ್ಲಿಂದ ಚಾಲಕರಹಿತ ರೈಲು ಕಾರ್ಯಾಚರಣೆ ಆಗಲಿದೆ.