ಸಾರಾಂಶ
ಹಾವೇರಿ: ನಗರದ ಒಳಚರಂಡಿ ಹಾಗೂ 24x7 ಕುಡಿಯುವ ನೀರು ಸರಬರಾಜು ಕಾಮಗಾರಿಯನ್ನು ಪೂರ್ಣಗೊಳಿಸುತ್ತೇನೆ ಎಂದು ಚುನಾವಣೆ ಸಂದರ್ಭದಲ್ಲಿ ಮಾತು ಕೊಟ್ಟಿದ್ದೆ. ಅದಕ್ಕೆ ಬದ್ಧನಾಗಿ ನಡೆದುಕೊಳ್ಳುತ್ತೇನೆ. ತುಂಗಭದ್ರಾ ನದಿಗೆ ಕಂಚಾರಗಟ್ಟಿ ಬಳಿ ಬ್ಯಾರೇಜ್ ನಿರ್ಮಾಣಕ್ಕೆ ₹50 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ, ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ತಿಳಿಸಿದರು.
ಸ್ಥಳೀಯ ನಗರಸಭೆ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ತುಂಗಭದ್ರಾ ನದಿಗೆ ಕಂಚಾರಗಟ್ಟಿ ಬಳಿ ಬ್ಯಾರೇಜ್ ನಿರ್ಮಾಣಕ್ಕೆ ₹150 ಕೋಟಿ ಅನುದಾನ ಕೇಳಿದ್ದೆ. ಈಗ ಮೊದಲ ಕಂತಿನಲ್ಲಿ ₹50 ಕೋಟಿ ಅನುದಾನ ಬಿಡುಗಡೆ ಮಾಡಿದೆ. ನೀರಾವರಿ ಇಲಾಖೆಯವರು ಸರ್ವೇ ನಡೆಸಿ ಡಿಪಿಆರ್(ವಿಸ್ತ್ರತ ಯೋಜನಾ ವರದಿ) ಸಿದ್ಧಪಡಿಸುತ್ತಿದ್ದಾರೆ. ಇದು ಸಾಕಾರಗೊಂಡರೆ ಹಾವೇರಿ ನಗರದ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದರು.ಮುನ್ಸಿಪಲ್ ಹೈಸ್ಕೂಲ್ ಮೈದಾನದ ಪಕ್ಕದಲ್ಲಿರುವ ನಗರಸಭೆ ಜಾಗದಲ್ಲಿದ್ದ ಮರಗಳನ್ನು ಮಾರಾಟ ಮಾಡಿಕೊಳ್ಳಲು ಅರಣ್ಯ ಇಲಾಖೆಗೆ ಕೊಟ್ಟಿದ್ದೀರಿ. ಅಲ್ಲಿರುವ ಗುಜರಿ ಸಾಮಗ್ರಿಗಳನ್ನು ಯರ‍್ಯಾರೋ ಮಾರಾಟ ಮಾಡಿಕೊಳ್ಳುದ್ದಾರೆ. 25 ಮರಗಳನ್ನು ಕಡಿಯಲು ಅನುಮತಿ ಮಾತ್ರ ಅರಣ್ಯ ಇಲಾಖೆ ನೀಡಬೇಕಿತ್ತು. ಹರಾಜು ಮಾಡುವ ಹಾಗೂ ಅದರ ಹಣ ನಗರಸಭೆಗೆ ಸೇರಬೇಕಿತ್ತು. ಆದರೆ, ಅರಣ್ಯ ಇಲಾಖೆಯವರು ಹರಾಜಿನಿಂದ ಬಂದ ಹಣವನ್ನು ಸರ್ಕಾರಕ್ಕೆ ಭರಣ ಮಾಡಿರುವುದಾಗಿ ಹೇಳುತ್ತಿದ್ದಾರೆ. ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹೀಗಾಗಿದೆ. ಇಷ್ಟೊಂದು ಬೇಜವಾಬ್ದಾರಿತನ ಸರಿಯಲ್ಲ. ಸರ್ಕಾರಕ್ಕೆ ಹೋದ ಹಣ, ಸ್ಮಶಾನಕ್ಕೆ ಹೋದ ಹೆಣ ವಾಪಸ್ ತರುವುದು ಕಷ್ಟ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆಯ ಆಸ್ತಿ ಉಳಿಸಿಕೊಳ್ಳಬೇಕು, ಗಿಡಗಳನ್ನು ಹರಾಜು ಮಾಡಿದ ಹಣ ನಗರಸಭೆಗೆ ಜಮಾ ಆಗಬೇಕು ಎಂಬುದು ಸಾಮಾನ್ಯ ಜ್ಞಾನ. ಸಿಬ್ಬಂದಿಗೆ ಅಷ್ಟು ತಿಳಿವಳಿಕೆ ಇಲ್ಲ ಅಂದರೆ ಹೇಗೆ? ಹಳೆಯ ಗುಜರಿ ಸಾಮಗ್ರಿಗಳ ಮಾರಾಟದ ಬಗ್ಗೆ ಸಮಿತಿ ರಚಿಸಿ, ತನಿಖೆ ಮಾಡಿಸಿ ನಾಲ್ಕು ಮಂದಿ ಅಮಾನತು ಮಾಡಿಸಿದರೆ ಬಿಸಿ ಮುಟ್ಟುತ್ತೆ ಎಂದು ಕಿಡಿಕಾರಿದರು.ನಗರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆ ನಿರ್ಮಾಣಕ್ಕೆ ಅವಕಾಶ ಕೊಡಬೇಡಿ. ಯಾರು ಎಷ್ಟೇ ಒತ್ತಡ ಹಾಕಿದರೂ ಅನುಮತಿ ಕೊಡಬೇಡಿ ಎಂದು ಶಾಸಕ ರುದ್ರಪ್ಪ ಲಮಾಣಿ ತಾಕೀತು ಮಾಡಿದರು. ಸದಸ್ಯ ಸಂಜೀವಕುಮಾರ ನೀರಲಗಿ ಮಾತನಾಡಿ, ಕೆಯುಐಡಿಎಫ್‌ಸಿ ವತಿಯಿಂದ ನಗರದಲ್ಲಿ ಒಳಚರಂಡಿ ಯೋಜನೆ ನಡೆದಿದ್ದು, ₹26.5ಕೋಟಿ ಟೆಂಡರ್ ಆಗಿ ಈಗಾಗಲೇ ಗುತ್ತಿಗೆದಾರರಿಗೆ ₹15 ಕೋಟಿ ಅನುದಾನ ಪಾವತಿಯಾಗಿದೆ. ಆದರೆ, ಇನ್ನೂ 220 ಮಾನ್ಯುವಲ್ ದುರಸ್ತಿಪಡಿಸಬೇಕಿದೆ. ಹೊಸನಗರ, ಬಸವೇಶ್ವರ ನಗರ, ಮಾಲಿಂಗಶೆಟ್ಟಿಯವರ ಅಂಗಡಿ ಸೇರಿ ನಾಲ್ಕು ಕಡೆ ಮಾನ್ಯುವಲ್ ಸಂಪರ್ಕ ಕೂಡಿದರೆ ಒಳಚರಂಡಿ ಕಾಮಗಾರಿ ಪೂರ್ಣಗೊಳ್ಳುತ್ತದೆ. ಈ ಎಲ್ಲ ಕಾಮಗಾರಿಗಳನ್ನು ಮೊದಲು ಪೂರ್ಣಗೊಳ್ಳಬೇಕು ಎಂದರು.ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಪ್ರಭಾರ ಪೌರಾಯುಕ್ತ ಸುರೇಶ ಕಂಬಳಿ ಸೇರಿದಂತೆ ನಗರಸಭೆ ಸದಸ್ಯರು, ನಾಮನಿರ್ದೇಶಿತ ಸದಸ್ಯರು ಇದ್ದರು.ಕೇಳದೇ ಅನುದಾನ ಹಾಕಿದ್ದಕ್ಕೆ ನೀರಲಗಿ ಆಕ್ರೋಶ15ನೇ ಹಣಕಾಸು ಯೋಜನೆಯಲ್ಲಿ ಮಂಜೂರಾಗಿದ್ದ ₹3.61 ಕೋಟಿ ಅನುದಾನದಲ್ಲಿ ಪ್ರಮುಖ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಬಳಸಿಕೊಳ್ಳುವಂತೆ ಸಲಹೆ ನೀಡಲಾಗಿತ್ತು. ಆದರೆ, ಪ್ರತಿ ವಾರ್ಡ್‌ಗೆ ₹5 ಲಕ್ಷದಂತೆ ಹಂಚಿ ಹಾಕಿದ್ದೀರಿ. ನಗರದ ಹಾಳು ಬಿದ್ದ ರಸ್ತೆ ದುರಸ್ತಿಗೆ ಹಣ ಬಳಸಿ ಎಂದು ತಿಳಿಸಿದ್ದೆ. ಆದರೆ, ನನ್ನ ಗಮನಕ್ಕೆ ತಾರದೇ ನಮ್ಮ ವಾರ್ಡ್‌ನಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಪಾರ್ಕ್‌ನ ಕೊಳವೆ ಬಾವಿ ದುರಸ್ತಿಗೆ ₹3.25 ಲಕ್ಷ ಅನುದಾನ ಕೊಟ್ಟಿದ್ದೀರಿ. ಈ ಬಗ್ಗೆ ನನಗೆ ಮಾಹಿತಿನೇ ಇಲ್ಲ ಎಂದು ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ ಆಕ್ರೋಶ ವ್ಯಕ್ತಪಡಿಸಿ ಧರಣಿಗೆ ಮುಂದಾದರು.
ಆಗ ಶಾಸಕ ರುದ್ರಪ್ಪ ಲಮಾಣಿ ಸಮಾಧಾನಪಡಿಸಿದರು. ಆಗ ಪ್ರತಿಕ್ರಿಯಿಸಿದ ಅಧ್ಯಕ್ಷರಾದ ಶಶಿಕಲಾ ಮಾಳಗಿ, ಎಲ್ಲಿ ತುರ್ತು ಕೆಲಸ ಇವೆಯೋ ಅಲ್ಲಿ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಸಮಾಜಾಯಿಷಿ ನೀಡಲು ಮುಂದಾದಾಗ, ನಾವಿನ್ನೂ ಬದುಕಿದ್ದೇವೆ. ನಮ್ಮ ವಾರ್ಡ್‌ನಲ್ಲಿ ಏನೇನು ಅಭಿವೃದ್ಧಿ ಆಗಬೇಕು ಎಂಬುದನ್ನು ಯಾರೂ ಹೇಳಿಕೊಡಬೇಕಿಲ್ಲ ಎಂದು ತಿರುಗೇಟು ನೀಡಿದರು.