ಸಾರಾಂಶ
ಬಿಸಲೇಹಳ್ಳಿ ಗ್ರಾಮದಲ್ಲಿ ನೂತನ ಗ್ರಾಪಂ ಕಟ್ಟಡ ಲೋಕಾರ್ಪಣೆ
ಕನ್ನಡಪ್ರಭ ವಾರ್ತೆ, ಕಡೂರುತಾಲೂಕಿನ ಜನರ ಜೀವನಾಡಿಯಾದ ಮದಗದ ಕೆರೆ ಪ್ರದೇಶದ ಅಭಿವೃದ್ಧಿಗೆ ₹50 ಕೋಟಿ ಮಂಜೂರು ಆಗಿದೆ ಎಂದು ಶಾಸಕ ಕೆ. ಎಸ್.ಆನಂದ್ ಪ್ರಕಟಿಸಿದರು.
ಬುಧವಾರ ಕಡೂರು ವಿಧಾನಸಭಾ ಕ್ಷೇತ್ರದ ಬಿಸಲೇಹಳ್ಳಿ ಗ್ರಾಮದಲ್ಲಿ ನೂತನ ಗ್ರಾಪಂ ಕಟ್ಟಡ ಲೋಕಾರ್ಪಣೆ ಗೊಳಿಸಿ ಮಾತನಾಡಿದರು. 2019 ರಲ್ಲಿ ಈ ಗ್ರಾಮದ ಪಂಚಾಯ್ತಿ ಕಟ್ಟಡದ ನಿರ್ಮಾಣಕ್ಕೆ ಭೂಮಿ ಪೂಜೆ ಆಗಿದ್ದರೂ ಕಾಮಗಾರಿ ಆಗಿರಲಿಲ್ಲ. ಇದೀಗ ಆಡಳಿತ ಮಂಡಳಿ ಸದಸ್ಯರು, ತಾಪಂ ಇಒ ಪ್ರವೀಣ್, ಪಿಡಿಒ ಸಹಕಾರದಿಂದ ಇಂದು ಉತ್ತಮ ಪಂಚಾಯ್ತಿ ಕಟ್ಟಡ ನಿರ್ಮಾಣವಾಗಿ ರಾಜೀವ್ ಗಾಂಧಿ ಸೇವಾ ಕೇಂದ್ರ ಎಂದು ಹೆಸರಿಡಲಾಗಿದೆ. ಸಂವಿಧಾನದ 73-74ನೇ ವಿಧಿಗೆ ತಿದ್ದುಪಡಿ ತಂದು ಪಂಚಾಯತ್ ವ್ಯವಸ್ಥೆಗೆ ಜಾರಿಗೆ ತಂದವರು ರಾಜೀವ್ ಗಾಂಧಿ. ಮಹಿಳೆಯರು ಸೇರಿದಂತೆ ಪರಿಶಿಷ್ಟ ಜಾತಿ ಸೇರಿ ಎಲ್ಲ ವರ್ಗಕ್ಕೂ ಅಧಿಕಾರ ಮಾಡಲು ಅವಕಾಶ ಮಾಡಿ ಕೊಟ್ಟವರು ಅವರು ಎಂಬುದನ್ನು ಮರೆಯ ಬಾರದು. ಹಾಗಾಗಿ ಪಂಚಾಯ್ತಿ ಕಟ್ಟಡಗಳಿಗೆ ರಾಜೀವ್ ಗಾಂಧಿ ಹೆಸರು ಇಡಲಾಗುತ್ತಿದೆ ಎಂದರು.ಬಿಸಲೇಹಳ್ಳಿಯಲ್ಲಿ ಶ್ರೀಮಂತರು ಬಡವರು ಸೇರಿದಂತೆ ಎಲ್ಲ ವರ್ಗಗಳು ಇದ್ದು, ಅದರಲ್ಲಿ ಶ್ರಮಿಕ ವರ್ಗ ಹೆಚ್ಚಿನ ಪ್ರಮಾಣದಲ್ಲಿದೆ. ರಾಮನಹಳ್ಳಿ, ಲಕ್ಷೀ ಪುರ, ಬಿಸಲೇಹಳ್ಳಿ, ಬುಕ್ಕಸಾಗರ,ಭೋವಿ ಕಾಲೋನಿ, ಚಿಕ್ಕಬುಕ್ಕಸಾಗರ ಸೇರಿರುವ ಈ ಪಂಚಾಯ್ತಿಗೆ ಬರುವ ಜನರ ಕೆಲಸ ಮಾಡಿಕೂಡಬೇಕು.
ಪಂಚಾಯ್ತಿ ನಿರ್ವಹಣೆಗೆ ಕಷ್ಟವಾಗಿದ್ದು, ಎಷ್ಟೋ ಹಳ್ಳಿಗಳು ಸ್ವಾತಂತ್ರ್ಯ ಬಂದು ದಶಕಗಳೇ ಉರುಳಿದರೂ ಡಾಂಬರ್, ಕುಡಿವ ನೀರು, ದೀಪ ಕಂಡಿರಲಿಲ್ಲ. 2004-2014ರವರೆಗೂ ಪ್ರಧಾನಿಗಳಾಗಿದ್ದ ಮನಮೋಹನ್ ಸಿಂಗ್ ನರೇಗಾ ಯೋಜನೆ ಜಾರಿ ಮಾಡಿ, ಪಂಚಾಯ್ತಿಗಳಿಗೆ ನೇರ ಅನುದಾನ ನೀಡಿ ಅಧ್ಯಕ್ಷರೇ ನೇರ ಅನುದಾನ ಪಡೆದು ಗ್ರಾಮ ಗಳಿಗೆ ಡಾಂಬರ್, ರಸ್ತೆ, ನೀರು ಸೇರಿದಂತೆ ಅಭಿವೃದ್ಧಿ ಕಾರ್ಯಕ್ಕೆ ಅಂದಿನ ಕಾಂಗ್ರೆಸ್ ಸರಕಾರ ಕಾರಣ ಎಂಬುದನ್ನು ಮರೆಯಬಾರದು ಎಂದರು.ನರೇಗಾದ ಮೂಲಕ ಗ್ರಾಮ ರಾಜ್ಯದ ಕನಸು ಕಂಡಿದ್ದ ಗಾಂಧೀಜಿ ಕನಸು ನನಸಾಗಿದೆ. ಪಂಚಾಯ್ತಿ ಸದಸ್ಯರು ಮುಂದೆ ಸದಸ್ಯರಾಗಲು ಬಯಸುವಂತವರು. ಗ್ರಾಮಗಳ ಅಭಿವೃದ್ಧಿಗೆ ಶ್ರಮ ಹಾಕಿ ಶೇ. 100ರಷ್ಟು ಪ್ರಗತಿ ಸಾಧಿಸಬೇಕು ಎಂದರು.
ನರೇಗಾದಲ್ಲಿ ಶಾಲೆ, ಆಸ್ಪತ್ರೆ ಮತ್ತು ಕಾಲೇಜುಗಳಿಗೆ ಕಾಂಪೌಂಡ್ ನಿರ್ಮಾಣ ಮಾಡಬಹುದು. ಗ್ರಾಮದ ಜನರ ಬೇಡಿಕೆ ಯಂತೆ ರಾಮನಹಳ್ಳಿಗೇಟಿನಿಂದ- ಬಿಸಲೇಹಳ್ಳಿ ಮತ್ತು ಬಿಸಲೇಹಳ್ಳಿ ಗ್ರಾಮ ದೊಳಗಿನ ರಸ್ತೆ ಮಾಡಲಾಗುವುದು ಎಂದರು.ಈಗಾಗಲೇ ₹50 ಲಕ್ಷ ದಲ್ಲಿ ಕಾಂಕ್ರಿಟ್ ರಸ್ತೆಗಳು, ₹30ಲಕ್ಷ ಗಳನ್ನು ಸಮುದಾಯಭವನಕ್ಕೆ ನೀಡಿದ್ದು ಮತ್ತಷ್ಟು ಅನುದಾನ ನೀಡಲಾಗುವುದು. ಹಂತ ಹಂತವಾಗಿ ಗ್ರಾಮಗಳ ಅಭಿವೃದ್ಧಿ ಮಾಡಲಾಗುವುದು. ಶ್ರೀಕಟ್ಟೆ ಹೊಳೆಯಮ್ಮ ದೇವಸ್ಥಾನದ ಕೆಲಸ ಮಾಡಿಸುತ್ತೇನೆ ಎಂದರು.
ಇನ್ನು ಮತಿಘಟ್ಟ ಸಮೀಪದಲ್ಲಿ ಗಾರ್ಮೆಂಟ್ ಕಂಪನಿ ಆರಂಭವಾಗುತ್ತಿದ್ದು, ಇದರಿಂದ 6 ಸಾವಿರ ಮಹಿಳೆಯರಿಗೆ ಉದ್ಯೋಗ ಸಿಗಲಿದೆ. ಯುವಕರಿಗೂ ಉದ್ಯೋಗ ನೀಡುವ ಪ್ರಯತ್ನ ನಡೆದಿದೆ. ಕ್ಷೇತ್ರದ 10 ಸಾವಿರ ಯುವಕರಿಗೆ ಉದ್ಯೋಗ ನೀಡಲು ಶ್ರಮಿಸುತ್ತಿದ್ದೇನೆ ಎಂದರು.ತಾಲೂಕಿನ ಮದಗದಕೆರೆ ಮತ್ತು ಅದರ ಸರಣಿ ಕೆರೆಗಳ ನೀರು ಹರಿವ ಕಾಲುವೆಗಳು ಮತ್ತು ಅಚ್ಚುಕಟ್ಟು ಪ್ರದೇಶಗಳ ಅಬಿವೃದ್ಧಿಗೆ ₹50 ಕೋಟಿ ಮಂಜೂರಾಗಿದೆ ಎಂದರು.
ಅಲ್ಲದೆ ರಾಜ್ಯ ಸರಕಾರ ಭದ್ರಾ ಉಪ ಕಣಿವೆ ಯೋಜನೆಯ 3ನೇ ಹಂತದ ಕಾಮಗಾರಿಗೆ ₹407 ಕೋಟಿ ಅನುದಾನ ನೀಡಿದ್ದು, ಎರಡು ವರ್ಷದ ಒಳಗೆ ತಾಲೂಕಿನ 118 ಕೆರೆಗಳಿಗೆ ನೀರು ಹರಿಯಲಿದೆ. ಬರಗಾಲದ ವಾತಾವರಣ ಹೋಗಿ ನೀರಾವರಿ ಆಗಲಿದೆ ಎಂದು ತಿಳಿಸಿದರು.ಗ್ರಾಪಂ ಮಾಜಿ ಅಧ್ಯಕ್ಷ ಕಂಸಾಗರ ಸೋಮಶೇಖರ್, ಪಂಚಾಯ್ತಿ ಅಧ್ಯಕ್ಷೆ ಮಮತಾ ಓಂಕಾರಮೂರ್ತಿ, ಉಪಾಧ್ಯಕ್ಷ ಲೋಕೇಶ್ , ಗ್ರಾಪಂ ಪಿಡಿಒ ಎಸ್. ಆರ್. ಚಂದ್ರಶೇಖರ್, ಕಾರ್ಯದರ್ಶಿ ಲೋಕೇಶ್,ರವಿ ಎಲ್.ಎನ್.ಪ್ರಭು, ಸಿ. ಕೆಂಪಣ್ಣ, ಸುಮಾ ಪ್ರಸಾದ್ ಸೇರಿದಂತೆ ವಿವಿಧ ಗ್ರಾಮಗಳ ಜನರು ಹಾಜರಿದ್ದರು.
6ಕೆಕೆಡಿಯು1.ಕಡೂರು ತಾಲೂಕಿನ ಬಿಸಲೇಹಳ್ಳಿ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯ್ತಿ ಕಚೇರಿಯನ್ನು ಶಾಸಕ ಕೆ.ಎಸ್. ಆನಂದ್ ಉಧ್ಗಾಟಿಸಿದರು.