ಬುಧವಾರ ರಾತ್ರಿ ₹ 50 ಲಕ್ಷ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಧಾರವಾಡ ತಹಸೀಲ್ದಾರ್‌ ಸಚ್ಚಿದಾನಂದ ಕುಚನೂರ ಅವರಿಗೆ ಲೋಕಾಯುಕ್ತ ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ.

ಧಾರವಾಡ:

ಬುಧವಾರ ರಾತ್ರಿ ₹ 50 ಲಕ್ಷ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಧಾರವಾಡ ತಹಸೀಲ್ದಾರ್‌ ಸಚ್ಚಿದಾನಂದ ಕುಚನೂರ ಅವರಿಗೆ ಲೋಕಾಯುಕ್ತ ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ. ತಹಸೀಲ್ದಾರ್‌ ಆಗಿ ಎರಡೇ ತಿಂಗಳಲ್ಲಿ ಈ ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿದೆ.

ತಹಸೀಲ್ದಾರ್‌ ಕುಚನೂರು ಮೇಲೆ ಈಗಾಗಲೇ ಹಲವು ದೂರುಗಳಿದ್ದು, ಧಾರವಾಡಕ್ಕೆ ಬಂದು ಎರಡೇ ತಿಂಗಳಲ್ಲಿ ಅವರ ವರ್ತನೆಯಿಂದ ಇತರೆ ಅಧಿಕಾರಿಗಳು ರೋಸಿ ಹೋಗಿದ್ದರು ಎಂಬ ಮಾಹಿತಿ ಇದೆ.

ಬಲೆಗೆ ಬಿದ್ದಿದ್ದು ಹೇಗೆ?

ಸಮೀಪದ ಯರಿಕೊಪ್ಪ ಗ್ರಾಮದ ಬಳಿ ಬಾಗಲಕೋಟೆ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ ಅರಳೀಕಟ್ಟಿ ಎಂಬುವರು 33 ಎಕರೆ ಭೂಮಿ ಖರೀದಿಸಿದ್ದರು. 20 ಎಕರೆ ಸಾಗುವಳಿ ಹಾಗೂ ಇನ್ನುಳಿದ 13 ಎಕರೆ ಎ ಖರಾಬು ಜಮೀನು ಇತ್ತು. ಈ ಹಿನ್ನೆಲೆಯಲ್ಲಿ ಖರಾಬು ಜಮೀನು ಯಾವುದು, ಸಾಗುವಳಿ ಭೂಮಿ ಯಾವುದು ಎಂಬ ಕುರಿತು ಮರು ಸರ್ವೇ ಮಾಡುವಂತೆ ಅರ್ಜಿ ಕೊಟ್ಟಿದ್ದರು. ಈ ಹಿನ್ನೆಲೆ ಸರ್ವೇ ಇಲಾಖೆ ಅಧಿಕಾರಿಗಳು ಧಾರವಾಡ ತಹಸೀಲ್ದಾರ್ ಅವರಿಗೆ ಪತ್ರ ಬರೆದಿದ್ದರು. ಪಹಣಿ ಪತ್ರಿಕೆಯ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ತಹಸೀಲ್ದಾರ್ ಅವರನ್ನು ಮಂಜುನಾಥ ಸಂಪರ್ಕಿಸಿದಾಗ, ತಮಗೇನು ಲಾಭವಾಗುತ್ತದೆ ಎಂದು ಪ್ರಶ್ನಿಸಿದ್ದರಂತೆ. ಕೊನೆಗೆ ಒಂದು ಎಕರೆ ಜಮೀನು ಹಾಗೂ ₹ 50 ಲಕ್ಷ ಲಂಚ ನೀಡುವ ಬಗ್ಗೆ ಮಾತುಕತೆ ಆಗಿತ್ತು.

ಅಂತೆಯೇ, ₹ 50 ಲಕ್ಷ ನಗದನ್ನು ಧಾರವಾಡದ ಹೊಯ್ಸಳ ಹೋಟೆಲ್ ಬಳಿ ನೀಡುವುದಾಗಿ ಮೊದಲು ಒಪ್ಪಂದವಾಗಿತ್ತು. ಆದರೆ, ಸಂಜೆ ಅಲ್ಲಿ ಹೆಚ್ಚು ಜನಸಂದಣಿ ಇರುವುದರಿಂದ ತಹಸೀಲ್ದಾರ್ ಅವರನ್ನು ಕರ್ನಾಟಕ ಕಾಲೇಜು ವೃತ್ತದ ಬಳಿ ಬರುವಂತೆ ಮಂಜುನಾಥ ಹೇಳಿದ್ದರು. ಈ ಮಧ್ಯೆ ಬುಧವಾರ ಮಧ್ಯಾಹ್ನವೇ ಮಂಜುನಾಥ ಲೋಕಾಯುಕ್ತ ಪೊಲೀಸರಿಗೆ ಈ ಬಗ್ಗೆ ದೂರು ನೀಡಿ ಹಣವನ್ನು ಲೋಕಾಯುಕ್ತರ ಬಳಿ ತೆಗೆದುಕೊಂಡು ಹೋಗಿದ್ದರು. ಕಾರ್ಯತಂತ್ರದ ವಿಧಾನ ಹೆಣೆದಿದ್ದ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ಹಾಗೂ ಅವರ ತಂಡ ಅಂದುಕೊಂಡಂತೆ ರಾತ್ರಿ 9ರ ಹೊತ್ತಿಗೆ ಕರ್ನಾಟಕ ಕಾಲೇಜು ಬಳಿ ಬಂದ ಸಚ್ಚಿದಾನಂದ ತಮ್ಮ ಬಳಿಯಲ್ಲಿದ್ದ ಬ್ಯಾಗ್‌ಗೆ ₹ 50 ಲಕ್ಷ ಪಡೆದು ಹಾಕಿಕೊಳ್ಳುತ್ತಿದ್ದಾಗ ದಾಳಿ ಮಾಡಲಾಗಿದೆ.

ಗುರುವಾರ ಬೆಳಗ್ಗೆ ಲೋಕಾಯುಕ್ತ ನ್ಯಾಯಾಲಯಕ್ಕೆ ಆರೋಪಿ ತಹಸೀಲ್ದಾರ್‌ ಸಚ್ಚಿದಾನಂದ ಅವರನ್ನು ಹಾಜುರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಸೂಚಿಸಿದೆ.ಲೋಕಾ ದಾಳಿಗೆ ಒಳಗಾದ ಧಾರವಾಡ ತಹಸೀಲ್ದಾರ್‌ ಸಚ್ಚಿದಾನಂದ ಮೂಲತಃ ಬಾಗಲಕೋಟೆ ಜಿಲ್ಲೆಯವರು. ದುರಾಸೆ ಇದ್ದ ಕಾರಣ ತಮ್ಮ ಹುದ್ದೆಯಲ್ಲಿ ಎಲ್ಲಿಯೂ ಬಹಳ ದಿನಗಳ ಕಾಲ ಕಾರ್ಯ ನಿರ್ವಹಿಸಿದ ಉದಾಹರಣೆಗಳಿಲ್ಲ. ಇದೀಗ ದೊಡ್ಡ ಮೊತ್ತದ ಲಂಚದ ಹಣದೊಂದಿಗೆ ಈತ ಸಿಕ್ಕಿಬಿದ್ದಿರುವುದು ತಹಸೀಲ್ದಾರ್ ಕಚೇರಿಯಲ್ಲಿ ನಡೆಯುತ್ತಿದ್ದ ಲಂಚದ ಹಾವಳಿಯನ್ನು ಎತ್ತಿ ತೋರಿಸುತ್ತಿದೆ. ಅನ್ನಪ್ರಸಾದವೇ ರದ್ದುಗಣೇಶ ಚತುರ್ಥಿ ಹಬ್ಬದಂಗವಾಗಿ ಪ್ರತಿ ವರ್ಷವು ತಹಸೀಲ್ದಾರ್‌ ಕಚೇರಿಯಲ್ಲಿ ಸತ್ಯನಾರಾಯಣ ಪೂಜೆ ಹಾಗೂ ಅನ್ನಪ್ರಸಾದ ಏರ್ಪಡಿಸಲಾಗುತ್ತಿತ್ತು. ಅದರಂತೆ ಈ ವರ್ಷವೂ ಗುರುವಾರ ಪೂಜಾ ಕಾರ್ಯಕ್ರಮ ಹಾಗೂ ಭಕ್ತರಿಗೆ ಅನ್ನಪ್ರಸಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದಕ್ಕಾಗಿ ಸಿಬ್ಬಂದಿ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದರು. ಆದರೆ, ಬುಧವಾರ ರಾತ್ರಿ ತಹಸೀಲ್ದಾರ್‌ ಲೋಕಾಯುಕ್ತ ಬಲೆಗೆ ಬಿದ್ದು ಜೈಲುಪಾಲಾದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನೇ ರದ್ದುಪಡಿಸಲಾಯಿತು.