ಕನಕಗಿರಿ ಹಾಗೂ ಕಲಬುರಗಿಯಲ್ಲಿ ಸೇನಾ ಪೂರ್ವ ಆಯ್ಕೆ ತರಬೇತಿ ಕೇಂದ್ರ ಸ್ಥಾಪನೆ : ಪ್ರದೀಪ

| Published : Jul 22 2024, 01:25 AM IST / Updated: Jul 22 2024, 12:24 PM IST

ಕನಕಗಿರಿ ಹಾಗೂ ಕಲಬುರಗಿಯಲ್ಲಿ ಸೇನಾ ಪೂರ್ವ ಆಯ್ಕೆ ತರಬೇತಿ ಕೇಂದ್ರ ಸ್ಥಾಪನೆ : ಪ್ರದೀಪ
Share this Article
  • FB
  • TW
  • Linkdin
  • Email

ಸಾರಾಂಶ

ಕನಕಗಿರಿ ಹಾಗೂ ಕಲಬುರಗಿಯಲ್ಲಿ ಸೇನಾ ಪೂರ್ವ ಆಯ್ಕೆ ತರಬೇತಿ ಕೇಂದ್ರ ಸ್ಥಾಪಿಸಲು ರಾಜ್ಯ ಸರ್ಕಾರ ತಲಾ ₹೫೦ ಲಕ್ಷ ಮೀಸಲಿಟ್ಟಿದೆ.

  ಕನಕಗಿರಿ :  ಕನಕಗಿರಿ ಹಾಗೂ ಕಲಬುರಗಿಯಲ್ಲಿ ಸೇನಾ ಪೂರ್ವ ಆಯ್ಕೆ ತರಬೇತಿ ಕೇಂದ್ರ ಸ್ಥಾಪಿಸಲು ರಾಜ್ಯ ಸರ್ಕಾರ ತಲಾ ₹೫೦ ಲಕ್ಷ ಮೀಸಲಿಟ್ಟಿದ್ದು, ಅಧಿವೇಶನದ ನಂತರ ಬಾಡಿಗೆ ಕಟ್ಟಡದಲ್ಲಿ ಕೇಂದ್ರಗಳ ಕಾರ್ಯಾರಂಭಗೊಳಿಸುವುದಾಗಿ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಪ್ರದೀಪ ತಿಳಿಸಿದರು.

ಭಾನುವಾರ ಪಟ್ಟಣದ ಪಾಂಡುರಂಗ ಟ್ರಸ್ಟ್ ಕಮೀಟಿಗೆ ಸೇರಿದ ಕಟ್ಟಡ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಮೂರು ವರ್ಷದ ಹಿಂದೆ ಆರ್ಮಿ ಸೇವೆಗಳಿಗೆ ಹೋಗಲಿಚ್ಛಿಸುವ ಯುವಕರಿಗೆ ರಾಜ್ಯದ ಉಡುಪಿ, ಮಂಗಳೂರು ಮತ್ತು ಕಾರವಾರದಲ್ಲಿ ಮಾರ್ಗದರ್ಶನ ಹಾಗೂ ತರಬೇತಿ ಕೇಂದ್ರ ತೆರೆಯಲಾಗಿದೆ. ಅದರಂತೆ ಉತ್ತರ ಕರ್ನಾಟಕದ ಯುವಕರು ಇತ್ತೀಚೆಗೆ ಆರ್ಮಿ ಸೇವೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಿದ್ದರಿಂದ ಕಲಬುರಗಿ ಮತ್ತು ಕನಕಗಿರಿ ಎರಡು ಕಡೆಗಳಲ್ಲಿ ಭಾರತೀಯ ಸೇನಾ ಪೂರ್ವ ತರಬೇತಿ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದೆ ಮಾಹಿತಿ ನೀಡಿದರು.

ಅಭ್ಯರ್ಥಿಗಳ ಮಾರ್ಗದರ್ಶನಕ್ಕಾಗಿ ತಾತ್ಕಾಲಿಕ ಕಟ್ಟಡ ಹಾಗೂ ಶಾರೀರಕ, ಆಟೋಟಗಳ ತಾಲೀಮು ನಡೆಸಲು ವಿಶಾಲ ಮೈದಾನ ಗುರುತಿಸಲು ಕಾರ್ಯ ಪ್ರವೃತ್ತರಾಗಿದ್ದೇವೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ನಿವೃತ್ತ ಸೈನಿಕರಿಂದ ತರಬೇತಿ ನೀಡುವ ಉದ್ದೇಶವಿದೆ. ಆರ್ಮಿ ವ್ಯವಸ್ಥೆಯಲ್ಲಿರುವಂತೆ ಊಟ, ವಸತಿಯೂ ಇರಲಿದೆ. ವರ್ಷದಲ್ಲಿ ೩೦೦ ಅಭ್ಯರ್ಥಿಗಳಿಗೆ ಅಚ್ಚುಕಟ್ಟಾದ ತರಬೇತಿ ಮತ್ತು ಮಾರ್ಗದರ್ಶನ ನೀಡುವ ಗುರಿ ಹೊಂದಲಾಗಿದೆ ಎಂದರು.

ಶಾರೀರಕ, ಆಟೋಟಗಳಿಗೆ ಹಾಗೂ ದೇಹ ಸದೃಢತೆಗಾಗಿ ಕಲಿಕೇರಿ ರಸ್ತೆಯಲ್ಲಿನ ಗಂಗಾಧರ ಸಜ್ಜನ ಅವರಿಗೆ ಸೇರಿದ ಭೂಮಿಯನ್ನು ಪರಿಶೀಲಿಸಿದರು. ಇಲ್ಲಿಯ ನಿಸರ್ಗ, ವಾತಾವರಣ ಮೈದಾನಕ್ಕೆ ಹೇಳಿ ಮಾಡಿಸಿದಂತಿದೆ. ಸದರಿ ಭೂಮಿಯ ದಾಖಲೆ ಪಡೆದು ಸರ್ಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದರು.ಬಳಿಕ ಕನಕಾಚಲಪತಿ ದೇವಸ್ಥಾನ ಭೇಟಿ ನೀಡಿ ನಂತರ ಮಾತನಾಡಿ, ವಿಜಯನಗರ ಕಾಲದಲ್ಲಿ ನಿರ್ಮಾಣಗೊಂಡ ದೇವಸ್ಥಾನ ಅದ್ಭುತವಾಗಿದೆ. ಇಲ್ಲಿಯ ಸಂಸ್ಕೃತಿ, ಶಿಲ್ಪಕಲೆ ಅತ್ಯುತ್ತಮವಾಗಿದೆ. ಗೋಪುರಗಳ ನಿರ್ಮಾಣದ ಶೈಲಿ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಗುರು ಪೂರ್ಣಿಮೆಯ ದಿನ ಕನಕಾಚಲಪತಿ ದರ್ಶನ ದೊರೆತಿರುವುದಕ್ಕೆ ಖುಷಿಯಾಗಿದೆ ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ವಿಜಯ ಪಾಟೀಲ, ತಹಸೀಲ್ದಾರ ವಿಶ್ವನಾಥ ಮುರುಡಿ, ಗ್ರೇಡ್-೨ ತಹಸೀಲ್ದಾರ ವಿ.ಎಚ್. ಹೊರಪೇಟೆ, ತಾಲೂಕು ಅಧಿಕಾರಿಗಳಾದ ಶಿವಶಂಕರ, ಉಷಾ, ಪ್ರಮುಖರಾದ ವೀರೇಶ ಸಮಗಂಡಿ, ಗಂಗಾಧರಸ್ವಾಮಿ, ಶರಣಪ್ಪ ಭತ್ತದ, ಅನಿಲ ಬಿಜ್ಜಳ, ರಾಜಸಾಬ ನಂದಾಪೂರ, ಹೊನ್ನೂರುಸಾಬ ಉಪ್ಪು, ಅಂಭಾಜಿರಾವ್ ಬೊಂದಾಡೆ, ಅನಂತಪ್ಪ ಧಾಯಿಪುಲ್ಲೆ, ಶಶಿಧರ ಟೈಲರ್, ಶಶಿಕುಮಾರ ಇತರರು ಇದ್ದರು. :