ಸಾರಾಂಶ
ವಿಶ್ವವಿದ್ಯಾಲಯವು ಒಟ್ಟು 71 ಅಂಕಗಳನ್ನು ಕಲೆ ಹಾಕಿ ಅಗ್ರ ಸ್ಥಾನ ಪಡೆದು ಸಹಾಯಧನ ಪಡೆಯಲು ಅರ್ಹತೆ ಹೊಂದಿತ್ತು.
ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯಕ್ಕೆ ರಾಜ್ಯ ಸರ್ಕಾರವು ₹50 ಲಕ್ಷ ಪ್ರೋತ್ಸಾಹಧನವನ್ನು ಮಂಜೂರು ಮಾಡಿದೆ.
2023- 24ನೇ ಆರ್ಥಿಕ ಸಾಲಿನ ಆಯವ್ಯಯದ ಭಾಷಣದಲ್ಲಿ ಅತ್ಯುತ್ತಮ ಸಾಧನೆ ಮಾಡುವ ರಾಜ್ಯ ವಿಶ್ವವಿದ್ಯಾಲಯಗಳಿಗೆ ಸಹಾಯಧನ ನೀಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದರು. ಆಡಳಿತ ವ್ಯವಸ್ಥೆ ಉತ್ತಮಪಡಿಸಲು 10 ಸುಶಾಸನ ಸೂಚ್ಯಂಕ ಮಾನದಂಡಗಳನ್ನು ನೀಡಿ ಮೌಲ್ಯಮಾಪನ ನಡೆಸಲು ಸಮಿತಿಯೊಂದನ್ನು ರಚಿಸಲಾಗಿತ್ತು.ಒಟ್ಟು 7 ವಿವಿಧ ವರ್ಗಗಳಲ್ಲಿ ಉತ್ತಮ ಸಾಧನೆ ತೋರುವ ವಿಶ್ವವಿದ್ಯಾಲಯಗಳಿಗೆ ಒಟ್ಟು ₹350 ಲಕ್ಷಗಳನ್ನು ನಿಗದಿಪಡಿಸಲಾಗಿತ್ತು. ಇದರಲ್ಲಿ ‘ಪಾಲುದಾರರ ಸಂಭಾಷಣೆ’ ವಿಭಾಗದಲ್ಲಿ ವಿಶ್ವವಿದ್ಯಾಲಯವು ಒಟ್ಟು 71 ಅಂಕಗಳನ್ನು ಕಲೆ ಹಾಕಿ ಅಗ್ರ ಸ್ಥಾನ ಪಡೆದು ಸಹಾಯಧನ ಪಡೆಯಲು ಅರ್ಹತೆ ಹೊಂದಿತ್ತು.
ವಿಶ್ವವಿದ್ಯಾಲಯದ ಚಟುವಟಿಕೆಗಳ ಕುರಿತು ನಿರಂತರವಾಗಿ ವಿದ್ಯಾರ್ಥಿಗಳಿಂದ ಪ್ರತಿಕ್ರಿಯೆ ಸಂಗ್ರಹಿಸುವುದು, ಹಳೆ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ಆಯೋಜಿಸುವುದು ಮತ್ತು ಪ್ರತಿಕ್ರಿಯೆ ಪಡೆಯುವುದು, ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿಯಿಂದ ಸುಧಾರಣಾ ಕ್ರಮಗಳ ಕುರಿತು ನಿರಂತರವಾಗಿ ಸಲಹೆಗಳನ್ನು ಸಂಗ್ರಹಿಸುವುದು, ಉದ್ಯಮ ಸಂಸ್ಥೆಗಳೊಂದಿಗೆ ಹಾಗೂ ಉದ್ಯಮಶೀಲ ವ್ಯಕ್ತಿಗಳನ್ನು ವಿಶ್ವವಿದ್ಯಾಲಯದ ಪಠ್ಯ ರಚನಾ ಸಮಿತಿಯಲ್ಲಿ ವಿಶೇಷ ಸದಸ್ಯರಾಗಿ ಅವಕಾಶ ನೀಡಿರುವುದು, ಸ್ಥಳೀಯ ಆಡಳಿತದ ಜತೆಗೆ ಕೋವಿಡ್- 19ರ ಬಿಕ್ಕಟ್ಟಿನ ಸಂದರ್ಭದಲ್ಲಿ ಕೈಜೋಡಿಸಿ ನೆರವಿನಹಸ್ತ ಒದಗಿಸಿರುವುದು, ತೃತೀಯ ಲಿಂಗಿ ಮತ್ತು ಮಾಜಿ ದೇವದಾಸಿ ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡುವ ಮಹತ್ತರ ಕಾರ್ಯ, ಸಿಬ್ಬಂದಿಯ ಮಕ್ಕಳ ಪೋಷಣೆಗೆ ಡೇ ಕೇರ್ ಸೆಂಟರ್ ಸೇರಿದಂತೆ ಹಲವು ಯೋಜನೆಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತ ಸಾಗಿರುವ ವಿಶ್ವವಿದ್ಯಾಲಯಕ್ಕೆ ಇದೀಗ ಸರ್ಕಾರದಿಂದ ದೊರೆತಿರುವ ಪ್ರೋತ್ಸಾಹಧನ ಮತ್ತಷ್ಟು ಉತ್ತಮ ಯೋಜನೆಗಳಿಗೆ ಮುನ್ನುಡಿ ಬರೆಯಲು ಪ್ರೇರೇಪಿಸಿದೆ.ಉತ್ತಮ ಆಡಳಿತ ನೀಡುತ್ತಿರುವ ವಿಶ್ವವಿದ್ಯಾಲಯಗಳ ಮೌಲ್ಯಮಾಪನಕ್ಕೆ ಉಪಾಧ್ಯಕ್ಷರು, ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಇವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಕಳೆದ ತಿಂಗಳ 29ರಂದು ಬೆಂಗಳೂರಿನ ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ನಡೆದ ಸಭೆಯಲ್ಲಿ ಎಲ್ಲ ವಿಶ್ವವಿದ್ಯಾಲಯಗಳ ಪ್ರಸ್ತಾವನೆಗಳನ್ನು ಮೌಲ್ಯಮಾಪನಕ್ಕೊಳಪಡಿಸಿ ಅಂತಿಮವಾಗಿ ಅತ್ಯುತ್ತಮ ಸಾಧನೆ ತೋರುತ್ತಿರುವ ವಿಶ್ವವಿದ್ಯಾಲಯಗಳನ್ನು ಆಯ್ಕೆ ಮಾಡಿ ಸಮಿತಿಯು ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು.