ಕಳೆದ ಬಜೆಟ್ ನಲ್ಲಿ ರಸ್ತೆ ಅಭಿವೃದ್ಧಿಗೆ 50 ಲಕ್ಷ ಮೀಸಲಿರಿಸಿ, ಭೂಮಿಪೂಜೆ ನಡೆಸಿದರೂ, ಕಾಮಗಾರಿ ಕೈಗೊಳ್ಳಲಿಲ್ಲ !

| Published : Jan 22 2025, 12:34 AM IST

ಕಳೆದ ಬಜೆಟ್ ನಲ್ಲಿ ರಸ್ತೆ ಅಭಿವೃದ್ಧಿಗೆ 50 ಲಕ್ಷ ಮೀಸಲಿರಿಸಿ, ಭೂಮಿಪೂಜೆ ನಡೆಸಿದರೂ, ಕಾಮಗಾರಿ ಕೈಗೊಳ್ಳಲಿಲ್ಲ !
Share this Article
  • FB
  • TW
  • Linkdin
  • Email

ಸಾರಾಂಶ

ಚಾಮುಂಡೇಶ್ವರಿ ಬಡಾವಣೆಯಲ್ಲಿ ಹಲವರು ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿದ್ದಾರೆ, ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ,

ಕನ್ನಡಪ್ರಭ ವಾರ್ತೆ ನಂಜನಗೂಡು

ಕಳೆದ ಬಜೆಟ್ ನಲ್ಲಿ ರಸ್ತೆ ಅಭಿವೃದ್ಧಿಗೆ 50 ಲಕ್ಷ ಮೀಸಲಿರಿಸಿ, ಭೂಮಿಪೂಜೆ ನಡೆಸಿದರೂ, ಕಾಮಗಾರಿ ಕೈಗೊಳ್ಳಲಿಲ್ಲ!

ಪಟ್ಟಣದ ಅಂಬೆಡ್ಕರ್ ಭವನದಲ್ಲಿ ಮಂಗಳವಾರ ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ನಗರಸಭೆಯ 2025-26 ನೇ ಆಯವ್ಯಯ ಮಂಡನೆಯ ಪೂರ್ವಬಾವಿ ಸಭೆಯಲ್ಲಿ ಕೇಳಿ ಬಂದ ದೂರು.

ಪಟ್ಟಣದ ಚಾಮುಂಡೇಶ್ವರಿ ಬಡಾವಣೆಯ ನಿವಾಸಿ ತಿಪ್ಪಯ್ಯ ಮಾತನಾಡಿ, ಚಾಮುಂಡೇಶ್ವರಿ ಬಡಾವಣೆಯಲ್ಲಿ ಹಲವರು ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿದ್ದಾರೆ, ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ, ಈ ಬಗ್ಗೆ ಹಲವು ಬಾರಿ ನಗರಸಭೆಗೆ ಮನವಿ ಸಲ್ಲಿಸಿದ್ದರೂ ಕ್ರಮವಹಿಸಿಲ್ಲ, ಕಳೆದ ಬಜೆಟ್ ನಲ್ಲಿ ನಮ್ಮ ಬಡಾವಣೆಯ ರಸ್ತೆ ಅಭಿವೃದ್ಧಿಗಾಗಿ 50 ಲಕ್ಷ ಮೀಸಲಿರಿಸಿ, ಭೂಮಿ ಪೂಜೆ ಸಹ ನಡೆಸಲಾಗಿತ್ತು, ಕಾಮಗಾರಿ ಕೈಗೊಳ್ಳಲಿಲ್ಲ ಎಂದು ಅವರು ಆರೋಪಿಸಿದರು.

ನಗರಸಭೆ ಆಯುಕ್ತ ವಿಜಯ್ ಮಾತನಾಡಿ, ಈ ಬಾರಿಯ ಬಜೆಟ್ ನಲ್ಲಿ ಚಾಮುಂಡೇಶ್ವರಿ ಬಡಾವಣೆಯ ರಸ್ತೆ ನಿರ್ಮಾಣಕ್ಕಾಗಿ ಅನುದಾನ ನೀಡಲಾಗುವುದು, ಬಡಾವಣೆಯಲ್ಲಿ ಸರ್ವೆ ನಡೆಸಿ, ಒತ್ತುವರಿಯನ್ನು ತೆರವುಗೊಳಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ಅಶೋಕಪುರಂ ನಿವಾಸಿ ಪ್ರಕಾಶ್ ಮಾತನಾಡಿ, ಶವಸಂಸ್ಕಾರಕ್ಕಾಗಿ ನಗರಸಭೆಯಿಂದ ಸಹಾಯಧನ ನೀಡಲಾಗುತ್ತಿತ್ತು, ಈ ಬಾರಿಯ ಬಜೆಟ್ ನಲ್ಲಿ ಶವಸಂಸ್ಕಾರಕ್ಕಾಗಿ ಸಹಾಯಧನ ಮೀಸಲಿರಿಸಬೇಕು,

ಥಾಮಸ್ ಬಡಾವಣೆಯ ಗೋಪಾಲ್ ಮಾತನಾಡಿ, ಬಡಾವಣೆಯ ವಿಶ್ವ ಗುರು ಬಸವೇಶ್ವರ ಉದ್ಯಾನದಲ್ಲಿ ದೀಪದ ವ್ಯವಸ್ಥೆ ಇಲ್ಲ, ಬಡಾವಣೆಯ ನಿವಾಸಿಗಳು ಬೆಳಗಿನ ಜಾವ ಹಾಗೂ ಸಂಜೆ ವಾಯುವಿಹಾರ ನಡೆಸುತ್ತಾರೆ, ದೀಪದ ವ್ಯವಸ್ಥೆ ಇಲ್ಲದೆ ತೊಂದರೆಯಾಗಿದೆ, ವಿದ್ಯುತ್ ದೀಪ ಅಳವಡಿಸಿ ಎಂದು ಮನವಿ ಮಾಡಿದರು.

ತಾಲೂಕು ವರ್ತಕರ ಸಂಘದ ಅಧ್ಯಕ್ಷ ಗೋವಿಂದರಾಜ್ ಮಾತನಾಡಿ, ಹಳೇ ಶುಭಾಷ್ ಪಾರ್ಕ್ ನ ರಸ್ತೆಯಲ್ಲಿ ಎರಡು ಕಡೆ ಗಡಿಗಳನ್ನು ನೆಟ್ಟು ಪರಿಸರವನ್ನು ಸ್ವಚ್ಛಗೊಳಿಸಬೇಕು ಎಂದು ಹೇಳಿದರು.

ಅಶೋಕಪುರಂ ನಿವಾಸಿ ದೇವರಾಜ್ ಮಾತನಾಡಿ, ಕೊಳೆಗೇರಿ ನಿವಾಸಿಗಳಿಗೆ ಮಂಡಳಿ ಮನೆ ಮಂಜೂರು ಮಾಡುವಾಗ ನಿವಾಸಿಗಳು 1 ಲಕ್ಷ ಪ್ರಥಮ ಕಂತು ಕಟ್ಟಬೇಕಾಗಿದೆ, ಬಡಾವಣೆಯಲ್ಲಿ ಹೆಚ್ಚಾಗಿ ಬಡವರು ವಾಸಿಸುತ್ತಾರೆ, ಅವರಿಗೆ ನಗರಸಭೆ ವತಿಯಿಂದ ಕೊಳಚೆ ನಿರ್ಮೂಲನ ಮಂಡಳಿಯ ಒಂದು ಲಕ್ಷ ಕಂತನ್ನು ನಗರಸಭೆಯಿಂದ ಭರಿಸಿ ಮನೆ ನಿರ್ಮಿಸಿಕೊಳ್ಳಲು ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.

ಪುರಸಭೆ ಮಾಜಿ ಅಧ್ಯಕ್ಷ ಪಿ. ಶ್ರೀನಿವಾಸ್ ಮಾತನಾಡಿ, 8 ನೇ ವಾರ್ಡಿನ ಗಂಗಾಮತಸ್ಥರ ಸ್ಮಶಾನಕ್ಕೆ ವಿದ್ಯುತ್ ದೀಪ ಅಳವಡಿಸಿ, ನೀರಿನ ವ್ಯವಸ್ಥೆ ಮಾಡಲು ಅನುದಾನ ನೀಡಬೇಕು ಎಮದು ಮನವಿ ಮಾಡಿದರು.

ನಗರಸಭೆ ಆಯುಕ್ತ ವಿಜಯ್ ಮಾತನಾಡಿ, ಪಟ್ಟಣದ ಉದ್ಯಾನವನ, ಸ್ಮಶಾನ ಅಭಿವೃದ್ದಿಗೆ ಅನುದಾನ ಮೀಸಲಿರಿಸಲಾಗುವುದು, ಅಗತ್ಯವಿರುವ ಕಡೆ ಶುದ್ದ ನೀರಿನ ಘಟಕ ಸ್ಥಾಪಿಸಲು ಕ್ರಮವಹಿಸಲಾಗುವುದು ಎಂದು ಹೇಳಿದರು.

ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ ಮಾತನಾಡಿ, ಪಟ್ಟಣದ ಸಮಗ್ರ ಅಭಿವೃದ್ದಿಯ ಉದ್ದೇಶದಿಂದ ನಗರದ ನಾಗರಿಕರ ಸಲಹೆ ಪಡೆದು, ನಗರೋತ್ಥಾನ ಯೋಜನೆಯ ಅನುದಾನ ಬಳಸಿಕೊಂಡು ಮೂಲ ಸೌಲಭ್ಯಗಳ ಕೊರತೆ ನೀಗಿಸಲಾಗುವುದು ಎಂದು ಹೇಳಿದರು.

ನಗರಸಭೆ ಉಪಾಧ್ಯಕ್ಷೆ ರೆಹೆನಾಬಾನು, ಸದಸ್ಯರಾದ ಗಾಯಿತ್ರಿ ಮೋಹನ್, ಯೋಗೇಶ್, ಮಹದೇವ ಪ್ರಸಾದ್, ಸಿದ್ದಿಕ್ ಅಹಮ್ಮದ್, ಮಹೇಶ್ ಅತ್ತಿಕಾನೆ, ಬಾಬು ಇದ್ದರು.