ಸಾರಾಂಶ
- ರಾಜ್ಯದ ಪ್ರಥಮ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಉಳಿಸುವ ಹೋರಾಟದಲ್ಲಿ ಡಾ.ಅಲ್ಲಮಪ್ರಭು ಬೆಟ್ಟದೂರು ಕಿಡಿ
- - - ಕನ್ನಡಪ್ರಭ ವಾರ್ತೆ ದಾವಣಗೆರೆರಾಜ್ಯದ ಪ್ರಥಮ ಸರ್ಕಾರಿ ಎಂಜಿನಿಯರಿಂಗ್ ಖ್ಯಾತಿಯ ದಾವಣಗೆರೆ ಯುಬಿಡಿಟಿಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಶೇ.50 ಸೀಟುಗಳು ಪೇಮೆಂಟ್ ಕೋಟಾವೆಂದು ಜಾರಿಗೊಳಿಸುವ ಮೂಲಕ ಬಡ, ಪ್ರತಿಭಾವಂತ ವಿದ್ಯಾರ್ಥಿಗಳ ಸೀಟುಗಳನ್ನು ₹97 ಸಾವಿರಕ್ಕೆ ಮಾರಾಟ ಮಾಡಿಕೊಳ್ಳಲಾಗುತ್ತಿದೆ. ಆ ಮೂಲಕ ರಾಜ್ಯ ಸರ್ಕಾರ ಜನದ್ರೋಹ ಎಸಗುತ್ತಿದೆ ಎಂದು ಬಂಡಾಯ ಸಾಹಿತಿ, ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ರಾಜ್ಯಾಧ್ಯಕ್ಷ ಪ್ರೊ.ಅಲ್ಲಮಪ್ರಭು ಬೆಟ್ಟದೂರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ಎಐಡಿಎಸ್ ಜಿಲ್ಲಾ ಸಮಿತಿ ಹಾಗೂ ಯುಬಿಡಿಟಿ ಕಾಲೇಜು ಹೋರಾಟ ಸಮಿತಿ ಆಯೋಜಿಸಿದ್ದ ಯುಬಿಡಿಟಿ ಉಳಿಸಿ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು. ಈಗಾಗಲೇ ಸಮರ್ಪಕ ಸೌಲಭ್ಯವಿಲ್ಲದೇ, ಬೋಧಕರ ನೇಮಕಾತಿಯೂ ಆಗದೇ ಶಿಕ್ಷಣ ವ್ಯವಸ್ಥೆ ಶೋಚನೀಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಹೆಚ್ಚಿನ ಆರ್ಥಿಕ ಜವಾಬ್ದಾರಿ ವಹಿಸಿ, ಶಿಕ್ಷಣದ ಗುಣಮಟ್ಟ ಅಭಿವೃದ್ಧಿಪಡಿಸಬೇಕಾಗಿತ್ತು. ಆದರೆ, ಸರ್ಕಾರವೇ, ಯುಬಿಡಿಟಿ ಕಾಲೇಜಿನ ಸೀಟುಗಳನ್ನು ಮಾರಲು ಮುಂದಾಗಿದೆ ಎಂದು ಟೀಕಿಸಿದರು.ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಶಿಕ್ಷಣ ವಿರೋಧಿ ಕರಾಳ ರಾಷ್ಟ್ರೀಯ ಶಿಕ್ಷಣ ನೀತಿ-2020ರ ವಿರುದ್ಧ ಹಾಗೂ ಅದರ ಭಾಗವಾದ ನಾಲ್ಕು ವರ್ಷದ ಪದವಿ ಶಿಕ್ಷಣ ವಿರುದ್ಧ ಎಐಡಿಎಸ್‌ಒ, ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಹೋರಾಟ ನಡೆಸಿದವು. ಇದರ ಫಲವಾಗಿ ಅಂತಹ ನೀತಿ ಈಗಿನ ಸರ್ಕಾರ ಹಿಂಪಡೆದು, ರಾಜ್ಯದಲ್ಲಿ ರಾಜ್ಯ ಶಿಕ್ಷಣ ನೀತಿ ರಚನೆಗೆ ಮುಂದಾಗಿದೆ. ಹೀಗೆ ವಿದ್ಯಾರ್ಥಿಗಳು ಬಲಿಷ್ಠ ಚಳವಳಿ ಮೂಲಕ ಯುಬಿಡಿಟಿ ಕಾಲೇಜನ್ನು ಉಳಿಸುವತ್ತ ಸಂಘಟಿತ ಹೋರಾಟ ನಡೆಸಬೇಕು ಎಂದು ಪ್ರೊ.ಅಲ್ಲಮಪ್ರಭು ಕರೆ ನೀಡಿದರು.
ಫೀ ಲೆಸ್ ಕೋಟಾವೆಂದು ಜಾರಿಗೊಳಿಸಿದರೆ ಪ್ರಶಂಸೆ:ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಎ.ಮುರುಗಪ್ಪ ಮಾತನಾಡಿ, ಸೀಟುಗಳ ಪೇಮೆಂಟ್ ಕೋಟಾ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ವಸೂಲಿ ಮಾಡುವ ₹6 ಕೋಟಿಗಳನ್ನು ಭರಿಸುವುದು ಸರ್ಕಾರಕ್ಕೆ ಭಾರವಲ್ಲ. ಈ ಕಾಲೇಜಿನಲ್ಲಿ ಪೇಮೆಂಟ್ ಕೋಟಾ ಬದಲಿಗೆ ಫೀ ಲೆಸ್ (ಶುಲ್ಕರಹಿತ) ಕೋಟಾ ಜಾರಿಗೊಳಿಸಿದರೆ ಸರ್ಕಾರ ನಡೆ ಪ್ರಶಂಸೆಗೆ ಅರ್ಹವಾಗುತ್ತದೆ. ರಾಜ್ಯದ ಜನರಿಗೆ 5 ಗ್ಯಾರಂಟಿ ಕೊಟ್ಟ ಸರ್ಕಾರ ಶಿಕ್ಷಣವನ್ನೇ 6ನೇ ಗ್ಯಾರಂಟಿಯಾಗಿ ನೀಡಲಿ ಎಂದರು.
ಶಾಸಕ ಶಾಮನೂರು ದನಿಯೆತ್ತಲಿ:ಡಿಆರ್‌ಎಂ ವಿಜ್ಞಾನ ಪದವಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ. ಕೆ.ಎಸ್. ಈಶ್ವರಪ್ಪ ಮಾತನಾಡಿ, ಬಡ, ರೈತ, ಕಾರ್ಮಿಕರ ಮಕ್ಕಳನ್ನು ಉನ್ನತ ಶಿಕ್ಷಣದಿಂದ ಹೊರಗಿಡುವ ಪೇಮೆಂಟ್ ಕೋಟಾ ಸೀಟು ನೀತಿಯು ಬುದ್ಧ, ಬಸವ, ಅಂಬೇಡ್ಕರ್ ಅವರಂಥ ಮಹಾನ್ ವ್ಯಕ್ತಿಗಳ ಆಶಯಕ್ಕೆ ವಿರುದ್ಧವಾಗಿದೆ. ಸಿಎಂ ಬಡವಿದ್ಯಾರ್ಥಿಗಳ ಹೋರಾಟದ ಕೂಗಿಗೆ ಸ್ಪಂದಿಸಲಿ. ಶಾಸಕರಾದ ಶಾಮನೂರು ಶಿವಶಂಕರಪ್ಪ ವಿದ್ಯಾರ್ಥಿಗಳ ಕೂಗನ್ನು ಸರ್ಕಾರಕ್ಕೆ ಮುಟ್ಟಿಸಲಿ ಎಂದು ಹಾರೈಸಿದರು.
ಸರ್ಕಾರವೇ ಜವಾಬ್ದಾರಿ ಹೊರಲಿ:ಯುಬಿಡಿಟಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ಸುರೇಶ್ಚಂದ್ರ ಮೋಹನ್ ಮಾತನಾಡಿ, ಯುಬಿಡಿಟಿ ಕಾಲೇಜನ್ನು ಉಳಿಸಲು ನಡೆಯುತ್ತಿರುವ ಹೋರಾಟಕ್ಕೆ ಜಯ ಸಿಗುವವರೆಗೂ ವಿದ್ಯಾರ್ಥಿಗಳು ಸಂಘಟಿತರಾಗಿ ನಿಲ್ಲಬೇಕು. ಹಾಗಾದಲ್ಲಿ ಯಶಸ್ಸು ಶತಸಿದ್ಧ. ಈಗಿರುವ ₹43 ಸಾವಿರ ಶುಲ್ಕವೇ ಬಡ ವಿದ್ಯಾರ್ಥಿಗಳಿಗೆ ಹೊರೆಯಾಗಿದೆ. ಎಲ್ಲ ವಿದ್ಯಾರ್ಥಿಗಳಿಗೂ ಈ ಶುಲ್ಕ ಭರಿಸಲು ಸಾಧ್ಯವಿಲ್ಲ. ಆದ್ದರಿಂದ ಸರ್ಕಾರವೇ ಯುಬಿಡಿಟಿ ಕಾಲೇಜಿನ ಸಂಪೂರ್ಣ ಆರ್ಥಿಕ ಜವಾಬ್ದಾರಿ ವಹಿಸಬೇಕು ಎಂದು ಒತ್ತಾಯಿಸಿದರು.
ತಾರತಮ್ಯ ನೀತಿ ಸೃಷ್ಠಿ:ಯುವಿಸಿಇ ಎಂಜಿನಿಯರಿಂಗ್ ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಎಐಡಿಎಸ್ಒ ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ ಮಾತನಾಡಿ, ಶುಲ್ಕ ಹೆಚ್ಚಳ ಸೇರಿದಂತೆ ಯುಬಿಡಿಟಿ ಕಾಲೇಜಿನ ಹಲವಾರು ಸಮಸ್ಯೆಗಳ ವಿರುದ್ಧ ಎಐಡಿಎಸ್ಒ ಹೋರಾಟ ಸಾಕಷ್ಟು ಯಶ ಕಂಡಿವೆ. ಯುಬಿಡಿಟಿಯಲ್ಲಿ ಪೇಮೆಂಟ್ ಕೋಟಾ ಶುಲ್ಕವು ಸಂಸ್ಥೆಯನ್ನು ಆರ್ಥಿಕ ಸ್ವಾಯತ್ತ ಸಂಸ್ಥೆಯಾಗಿಸಿ, ಅಂತಿಮವಾಗಿ ಖಾಸಗಿಯವರ ಪಾಲು ಮಾಡುತ್ತದೆ. ಇಂದು ಸರ್ಕಾರವು ಶಿಕ್ಷಣವನ್ನು ಮಾರುತ್ತಿದೆ. ಪೇಮೆಂಟ್ ಕೋಟಾ ಹೆಸರಲ್ಲಿ ವಿದ್ಯಾರ್ಥಿಗಳ ನಡುವೆ ತಾರತಮ್ಯ ಉಂಟುಮಾಡುತ್ತಿದೆ ಎಂದು ಆರೋಪಿಸಿದರು.
ಎಐಡಿಎಸ್ಓ ಸಂಘಟನೆಯ ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ, ಕಾರ್ಯದರ್ಶಿ ಟಿ.ಎಸ್.ಸುಮನ್, ಯುಬಿಡಿಟಿ ಕಾಲೇಜು ಹೋರಾಟ ಸಮಿತಿ ಚಂದನ, ಅಭಿಷೇಕ್, ಅಖಿಲೇಶ್, ಭರತ್, ಆದರ್ಶ, ಶಿವನಗೌಡ, ರಕ್ಷಿತಾ, ರೀಮಾ, ಮೇಘನಾ, ರುದ್ರೇಶ, ಸಂತೋಷ, ಚೇತನ, ಶ್ರವಣ್, ವಿಜಯ, ನಾಗೇಂದ್ರ ಸೇರಿದಂತೆ ಯುಬಿಡಿಟಿ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಸಮಾವೇಶದಲ್ಲಿ ಭಾಗಿಯಾಗಿ, ಯುಬಿಡಿಟಿಯಲ್ಲಿ ಪೇಮೆಂಟ್ ಕೊಟಾ ರದ್ಧಾಗುವವರೆಗೂ ಹೋರಾಟ ಮುಂದುವರಿಸುವ ಸಂಕಲ್ಪ ಮಾಡಿದರು. ಹೋರಾಟಕ್ಕೆ ಬೆಂಬಲಿಸಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ಬಿ.ರಾಮಚಂದ್ರಪ್ಪ, ನಿವೃತ್ತ ಎಸ್‌ಪಿ ರವಿನಾರಾಯಣ ಇತರರು ಭಾಗವಹಿಸಿದ್ದರು.- - -
ಬಾಕ್ಸ್ * ಜಿಲ್ಲಾದ್ಯಂತ ಚಳವಳಿ ಎಚ್ಚರಿಕೆ3 ದಶಕಗಳ ಎಐಡಿಎಸ್‌ಒ ಹೋರಾಟದ ಫಲವಾಗಿ ಈವರೆಗೂ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಡೊನೇಷನ್ ಕ್ಯಾಪಿಟೇಶನ್ ಹಾವಳಿ ತಲೆದೋರಿಲ್ಲ. ಸಂಘಟನೆ ನೇತೃತ್ವದ ವಿದ್ಯಾರ್ಥಿ ಚಳವಳಿಯಿಂದ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ನಿಗದಿಯಾಯಿತು. ಹೀಗಿರುವಾಗ, ಸರ್ಕಾರಿ ಕಾಲೇಜಿನಲ್ಲಿ ಪೇಮೆಂಟ್ ಕೋಟಾ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ನಿವೃತ್ತ ಪ್ರಾಂಶುಪಾಲರು, ಹಳೇ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಯುಬಿಡಿಟಿ ಹೋರಾಟ ಮುನ್ನಡೆಸಲಾಗುವುದು. ಮುಂದಿನ ಹಂತವಾಗಿ ದಾವಣಗೆರೆಯಾದ್ಯಂತ ಜನಗಳ ಸಹಿ ಸಂಗ್ರಹಿಸಿ, ರಾಜ್ಯದ ಉನ್ನತ ಶಿಕ್ಷಣ ಸಚಿವರನ್ನು ಭೇಟಿ ಮಾಡಿಲಾಗುವುದು. ಬಡ, ರೈತ, ಕಾರ್ಮಿಕರ ಮಕ್ಕಳ ಕಲಿಕೆಗಳಿಗೆ ಇರುವ ಸೀಟುಗಳನ್ನು ಕಸಿಯುವ ಹುನ್ನಾರ ಕೂಡಲೇ ಕೈ ಬಿಡಬೇಕು. ಇಲ್ಲದಿದ್ದರೆ ವಿವಿಧ ಹಂತಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.- - - -24ಕೆಡಿವಿಜಿ1, 2:
ದಾವಣಗೆರೆಯಲ್ಲಿ ಮಂಗಳವಾರ ಐಡಿಎಸ್ ಜಿಲ್ಲಾ ಸಮಿತಿ ಹಾಗೂ ಯುಬಿಡಿಟಿ ಕಾಲೇಜು ಹೋರಾಟ ಸಮಿತಿ ಆಯೋಜಿಸಿದ್ದ ಯುಬಿಡಿಟಿ ಉಳಿಸಿ ಪ್ರತಿಭಟನಾ ಸಮಾವೇಶದಲ್ಲಿ ಗಣ್ಯರು, ಶಿಕ್ಷಣ ಕ್ಷೇತ್ರದ ಹಿರಿಯರು, ಸಾಧಕರು, ವಿದ್ಯಾರ್ಥಿ, ಯುವ ಜನರು ಪಾಲ್ಗೊಂಡರು.