ಸಾರಾಂಶ
ಈ ಬಾರಿಯ ಸಮ್ಮೇಳನದಲ್ಲಿ ಹದಿನೈದು ಲಕ್ಷಕ್ಕೂ ಅಧಿಕ ಪುಸ್ತಕ ಮಾರಾಟವಾಗುವ ನಿರೀಕ್ಷೆ ಇತ್ತು. ನಿರೀಕ್ಷೆಯನ್ನು ನಿಜ ಮಾಡುವಂತೆ ಲಕ್ಷಾಂತರ ಜನ ಪುಸ್ತಕ ಮಳಿಗೆಗೆ ಭೇಟಿಯನ್ನೂ ನೀಡಿದರು. ಆದರೆ ಬಂದವರು ಪುಸ್ತಕಕೊಳ್ಳದೇ ವ್ಯಾಪಾರಿಗಳು ಜೋಲುಮೋರೆ ಹಾಕುವಂತಾಯಿತು.
ಮಂಡ್ಯ : ಮಂಡ್ಯದಲ್ಲಿ ನಡೆಯುತ್ತಿರುವ ಎಂಭತ್ತೇಳನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಮಾರಾಟದಲ್ಲಿ ಗಣನೀಯ ಕುಸಿತ ಕಂಡಿದೆ. ನಿರೀಕ್ಷಿತ ವಹಿವಾಟು ನಡೆಯದೇ ವ್ಯಾಪಾರಿಗಳು ನಿರಾಸೆಯಿಂದ ಮರಳುವಂತಾಗಿದೆ.
ಈ ಬಾರಿಯ ಸಮ್ಮೇಳನದಲ್ಲಿ ಹದಿನೈದು ಲಕ್ಷಕ್ಕೂ ಅಧಿಕ ಪುಸ್ತಕ ಮಾರಾಟವಾಗುವ ನಿರೀಕ್ಷೆ ಇತ್ತು. ನಿರೀಕ್ಷೆಯನ್ನು ನಿಜ ಮಾಡುವಂತೆ ಲಕ್ಷಾಂತರ ಜನ ಪುಸ್ತಕ ಮಳಿಗೆಗೆ ಭೇಟಿಯನ್ನೂ ನೀಡಿದರು. ಆದರೆ ಬಂದವರು ಪುಸ್ತಕಕೊಳ್ಳದೇ ವ್ಯಾಪಾರಿಗಳು ಜೋಲುಮೋರೆ ಹಾಕುವಂತಾಯಿತು. ಪ್ರಕಾಶಕರ ಪ್ರಕಾರ ನಿರೀಕ್ಷೆಯ ಶೇ.50ರಷ್ಟೇ ಪುಸ್ತಕ ಮಾರಾಟವಾಗಿದೆ.
ಕಳೆದ ಬಾರಿಯ ಹಾವೇರಿ ಸಮ್ಮೇಳನದಷ್ಟೂ ಪುಸ್ತಕ ವಹಿವಾಟು ನಡೆದಿಲ್ಲ ಎಂದು ಪ್ರಕಾಶಕರು ಹೇಳುತ್ತಾರೆ. ಈ ಬಾರಿ ಸಮ್ಮೇಳನದಲ್ಲಿ ಪುಸ್ತಕ ವ್ಯಾಪಾರಿಗಳಿಗೆ ನೆಟ್‌ವರ್ಕ್ ಸಮಸ್ಯೆ ಇರಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಷಿ ಘಂಟಾಘೋಷವಾಗಿ ಘೋಷಿಸಿದ್ದೇ ಬಂತು, ಸಮಸ್ಯೆಗೆ ಪರಿಹಾರ ಸಿಗಲೇ ಇಲ್ಲ.
ಇದರ ಜೊತೆಗೆ ಪುಸ್ತಕ ಮಳಿಗೆಗಳ ವ್ಯವಸ್ಥೆ ಸಮರ್ಪಕವಾಗಿರಲಿಲ್ಲ. ಮಳಿಗೆಗಳಿಗೆ ಆಗಮನ-ನಿರ್ಗಮನವೇ ಸರಿಯಾಗಿರಲಿಲ್ಲ. ಜೊತೆಗೆ ಈ ಹಿಂದಿನಂತೆ ಮಳಿಗೆಗಳ ಮುಂಭಾಗ, ಒಳಭಾಗದಲ್ಲಿರುವ ಮಳಿಗೆಗಳ ಮಾಹಿತಿ ನೀಡುವ ಡೈರೆಕ್ಟರಿ ಇಡದಿರುವುದೂ ಮಾರಾಟದ ಮೇಲೆ ಪರಿಣಾಮ ಬೀರಿದೆ ಎಂಬ ಮಾತುಗಳು ಕೇಳಿಬಂದಿವೆ. ಇದರಿಂದಾಗಿ ತಮ್ಮಿಷ್ಟದ ವಿವಿಧ ಪ್ರಕಾಶನಗಳ ಮಳಿಗೆಗಳನ್ನು ಪತ್ತೆ ಮಾಡಲು ಜನ ಪರದಾಡುತ್ತಿದ್ದದ್ದು ಸಾಮಾನ್ಯವಾಗಿತ್ತು.
ಇಕ್ಕಟ್ಟಾದ ಹಾದಿ: ಮಳಿಗೆಗಳ ನಡುವೆ ಇಕ್ಕಟ್ಟಾದ ಹಾದಿ ಇದ್ದಕಾರಣ, ಜನರಿಗೆ ಸರಿಯಾಗಿ ಪುಸ್ತಕ ನೋಡಲು ಸಾಧ್ಯವಾಗುತ್ತಿರಲಿಲ್ಲ ಎಂಬ ಮಾತುಗಳೂ ಕೇಳಿಬಂದಿವೆ. ಎಲ್ಲಕ್ಕಿಂತ ಮುಖ್ಯವಾಗಿ ಮಳಿಗೆಗಳ ಒಳಗೆ ಗಾಳಿಯಾಡುವ ವ್ಯವಸ್ಥೆ ಇಲ್ಲದೆ ಒಳಗೆ ಅಸಹನೀಯ ಸ್ಥಿತಿ ಇತ್ತು.
ಈ ಬಗ್ಗೆ ಮಾತನಾಡಿದ ಸಪ್ನಾ ಪುಸ್ತಕದ ಮುಖ್ಯಸ್ಥರಾದ ಆರ್ ದೊಡ್ಡೇಗೌಡ, ‘ ನಮ್ಮ ಮಳಿಗೆಯವರಿಗೆ ಊಟದ ವ್ಯವಸ್ಥೆಗೆ ಕೂಪನ್ ಕೂಡ ನೀಡಿರಲಿಲ್ಲ. ಕುಡಿಯುವ ನೀರು, ಬ್ಯಾಡ್ಜ್‌ಗಳನ್ನು ನೀಡದೆ ಕಡೆಗಣಿಸಲಾಗಿತ್ತು. ಬೆಂಕಿ ಅವಘಡಗಳು ಸಂಭವಿಸಿದರೆ ವಹಿಸಬೇಕಿದ್ದ ಮುನ್ನೆಚ್ಚರಿಕೆ, ವೆಂಟಿಲೇಷನ್ ವ್ಯವಸ್ಥೆಗಳು ಮಳಿಗೆಗಳಲ್ಲಿ ಇರಲಿಲ್ಲ. ಮಳಿಗೆಗಳ ನೋಂದಣಿ ಕ್ರಮವೂ ವ್ಯವಸ್ಥಿತವಾಗಿರಲಿಲ್ಲ. ನೋಂದಣಿಗೂ ವ್ಯವಸ್ಥೆ ಸಮರ್ಪಕವಾಗಿರಲಿಲ್ಲ. ಮಳಿಗೆಗಳ ಬುಕಿಂಗ್ ಸಂದರ್ಭದಲ್ಲೂ ಒಮ್ಮೆಗೆ ಒಂದು ಮಳಿಗೆಯನ್ನು ಬುಕ್ ಮಾಡುವುದಕ್ಕೆ ಅವಕಾಶ ನೀಡಲಾಗಿತ್ತು. ಒಮ್ಮೆಗೆ ನಾಲ್ಕೈದು ಮಳಿಗೆಗಳನ್ನು ಬುಕ್ಕಿಂಗ್ ಮಾಡುವುದಕ್ಕೆ ಅವಕಾಶ ನೀಡದಿದ್ದರಿಂದ ತೊಂದರೆ ಉಂಟಾಯಿತು. ಪುಸ್ತಕ ಸಮಿತಿಯ ಯಾವೊಬ್ಬ ಸದಸ್ಯರೂ ಪ್ರಕಾಶಕರ ಬಳಿ ಬಂದು ಸಮಸ್ಯೆಗಳೇನೆಂದು ವಿಚಾರಿಸಲಿಲ್ಲ. ವ್ಯವಸ್ಥೆಗಳು ಹೇಗಿವೆ ಎಂಬ ಬಗ್ಗೆ ಕೇಳಲೂ ಇಲ್ಲ’ ಎಂದಿದ್ದಾರೆ.
‘ಸಮ್ಮೇಳನ ಆರಂಭಕ್ಕೂ ಮುನ್ನ ಪ್ರಕಾಶಕರನ್ನು ಕರೆದು ಸಮಾಲೋಚನೆ ನಡೆಸಿದರೆ ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ಸಿಗುತ್ತವೆ. ಲಕ್ಷಾಂತರ ಜನ ಸೇರುವ ಜಾಗದಲ್ಲಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸೂಚಿಸಲಾಗುವುದಿಲ್ಲ. ಆದರೆ, ಅವರಿಂದ ಕೆಲ ಸಲಹೆ ಸಿಗುತ್ತವೆ. ಅವುಗಳನ್ನು ಪರಿಗಣಿಸಿದರೆ ಪುಸ್ತಕ ಮಳಿಗೆಗಳಲ್ಲಿ ಆಗಬಹುದಾದ ಅನಾನುಕೂಲಗಳನ್ನು ಗುರುತಿಸಿ ಮೊದಲೇ ಪರಿಹಾರ ಸೂಚಿಸಬಹುದು’ ಎಂದೂ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
15 ಲಕ್ಷ ರು. ವ್ಯಾಪಾರ ನಿರೀಕ್ಷೆ -ಆಗಿದ್ದು 8.5 ಲಕ್ಷ ಮಾತ್ರ: ಸಪ್ನಾ
ಸಪ್ನಾ ಬುಕ್ ಹೌಸ್ ನವರ ಪ್ರಕಾರ ಈ ಬಾರಿ ಹಾಕಲಾಗಿರುವ ಮಳಿಗೆಗಳಲ್ಲಿ15 ಲಕ್ಷ ರು. ವಹಿವಾಟು ನಡೆಯುವ ನಿರೀಕ್ಷೆ ಇತ್ತು. ಆದರೆ ಆಗಿದ್ದು ಕೇವಲ 8 ಲಕ್ಷ ರು.ವಹಿವಾಟು ಅಷ್ಟೆ. ಇನ್ನು ಸಾವಣ್ಣ ಪ್ರಕಾಶನದವರಿಗೆ 5 ಲಕ್ಷ ರು. ವಹಿವಾಟಿನ ನಿರೀಕ್ಷೆ ಇತ್ತು. ಆದರೆ 2.5 ಲಕ್ಷ ರು. ಅಷ್ಟೇ ವ್ಯಾಪಾರ ಆಗಿದೆ. ವೀರಲೋಕ ಪ್ರಕಾಶನಕ್ಕೆ 5 ಲಕ್ಷ ರು.ಗೂ ಹೆಚ್ಚು ವಹಿವಾಟು ನಡೆಸಿದೆ.