ಕಳೆದ ಕೆಲ ತಿಂಗಳಿನಿಂದ ನಡೆಯುತ್ತಿರುವ ಉತ್ಖನನ ಕಾರ್ಯದಲ್ಲಿ ಮೂರು ತಂಡಗಳು ಭಾಗವಹಿಸಿದ್ದವು.
ಸಿರುಗುಪ್ಪ: ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಪಶ್ಚಿಮ ನೈರುತ್ಯ ಭಾಗದಲ್ಲಿ ವಿಸ್ತಾರವಾಗಿ ಆವೃತವಾಗಿರುವ ಬೆಟ್ಟ ಗುಡ್ಡಗಳ ''''ಗೌಡ್ರ ಮೂಲೆ''''ಯಲ್ಲಿ ಸುಮಾರು 5 ಸಾವಿರ ವರ್ಷಗಳ ಹಿಂದಿನ ಮಾನವನ ಪಳೆಯುಳಿಕೆ, ಮಡಿಕೆಗಳು ಹಾಗೂ ಇತರೆ ವಸ್ತುಗಳು ಪತ್ತೆಯಾಗಿವೆ ಎಂದು ಅಮೆರಿಕದ ಹಾರ್ಟ್‌ವಿಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ನಮಿತಾ ಎಸ್. ಸುಗಂಧಿ ತಿಳಿಸಿದ್ದಾರೆ.
ಕಳೆದ ಕೆಲ ತಿಂಗಳಿನಿಂದ ನಡೆಯುತ್ತಿರುವ ಉತ್ಖನನ ಕಾರ್ಯದಲ್ಲಿ ಮೂರು ತಂಡಗಳು ಭಾಗವಹಿಸಿದ್ದವು. ಪಟ್ಟಣದ ಹಿರೇ ಅರ್ಲ, ಬೂದಿ ದಿಬ್ಬ, ಬಾಳೆತೋಟ, ಜಕ್ಕೇರುಗುಡ್ಡ, ಹುಡೇದಗುಡ್ಡ ಸೇರಿದಂತೆ ಸುತ್ತಲಿನ ಹಲವು ಸ್ಥಳಗಳಲ್ಲಿ ಉತ್ಪನನ ಹಾಗೂ ಸಂಶೋಧನೆ ನಡೆಯುತ್ತಿದೆ.ಶಿಲಾಯುಗದ ಜನರ ಕುರುಹುಗಳು, ಅವರ ನಿತ್ಯ ಬಳಕೆಗೆ ಬಳಸುತ್ತಿದ್ದ ಚೂಪಾದ ಕಲ್ಲಿನ ಆಯುಧಗಳು, ಕೈ ಕೊಡಲಿ, ಪ್ರಾಣಿಗಳ ಹಲ್ಲು, ದಿನ ಬಳಕೆ ವಸ್ತುಗಳು, ಒರಳು, ಗುಂಡು ಸೇರಿ ಇತರೆ ಮಹತ್ವದ ವಸ್ತುಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.
ತೆಕ್ಕಲಕೋಟೆಯ ಈ ನೆಲೆಗಳು ಬಹು ವೈಶಿಷ್ಟ್ಯಪೂರ್ಣವಾಗಿದ್ದು, ಇಲ್ಲಿ ಪ್ರಾಗೈತಿಹಾಸಿಕ ಕಾಲದ ಶಿಲಾಯುಗ, ನವಶಿಲಾಯುಗ ಹಾಗೂ ಲೋಹಯುಗದ ಕುರುಹುಗಳು ಯಥೇಚ್ಛವಾಗಿ ಕಾಣಸಿಗುತ್ತವೆ. ಇದರಿಂದಾಗಿ ಸುಮಾರು 3,500 ರಿಂದ 5,000 ವರ್ಷಗಳ ಹಿಂದಿನ ಚರಿತ್ರೆ ಬಗೆಗೆ ತಿಳಿದು ಬರುತ್ತದೆ.ಅಲ್ಲದೆ, ಇಲ್ಲಿ ವಿವಿಧ ವಿನ್ಯಾಸದ ಮಡಿಕೆಗಳು, ಪ್ರಾಣಿಗಳ ಎಲುಬುಗಳು, ಶಿಲಾಯುಧಗಳ ಅವಶೇಷಗಳು ಲಭಿಸಿವೆ. ನವಶಿಲಾಯುಗ ಸಂಸ್ಕೃತಿಯ ಶಿಲಾಯುಧ ಕಾರ್ಖಾನೆಯಾಗಿದ್ದ ಇಲ್ಲಿನ ನೆಲೆಗಳು ಅಧ್ಯಯನಾಸಕ್ತರಿಗೆ ಸೂಕ್ತ ಸ್ಥಳವಾಗಿದೆ ಎಂದು ನಮಿತಾ ಅಭಿಪ್ರಾಯ ಪಡುತ್ತಾರೆ.
5 ಸಾವಿರ ವರ್ಷಗಳ ಹಿಂದಿನ ಕುರುಹು ಪತ್ತೆ: ಉತ್ಖನನದ ಸಂದರ್ಭದಲ್ಲಿ ಸುಮಾರು 3.5 ರಿಂದ 5 ಸಾವಿರ ವರ್ಷಗಳ ಹಿಂದಿನ ಮಾನವನ ಶರೀರದ ಪಳೆಯುಳಿಕೆ ಪತ್ತೆಯಾಗಿದೆ. ಸುಮಾರು 5.5 ಅಡಿ ಉದ್ದದ ಮಾನವನ ಶವ ಪತ್ತೆಯಾಗಿದ್ದು, ಇವರ ಶವ ಸಂಸ್ಕಾರವು ವಿಶಿಷ್ಟವಾಗಿದೆ. ಇಲ್ಲಿನ ಮಾನವ ದೇಹದ ಮೇಲೆ ಕಲ್ಲುಗಳನ್ನು ಇಟ್ಟು ಶವ ಸಂಸ್ಕಾರ ಮಾಡುತ್ತಿದ್ದರು ಎಂದು ತಿಳಿದುಬರುತ್ತದೆ.ಗ್ರೀಸ್ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞೆ ಸುಸೇನ್ ಕ್ರಿಕ್ ಪ್ಯಾಟ್ರಿಕ್ ಸ್ಮಿತ್ ಅವರು ಪಳೆಯುಳಿಕೆ ಸಂರಕ್ಷಣೆ ಹಾಗೂ ಅದರ ಕಾಲಮಾನ ಅಧ್ಯಯನ ಹಾಗೂ ಮಡಿಕೆಗಳು ಚೂರಾಗಿದ್ದರೂ ಅವುಗಳ ಸ೦ರಕ್ಷಣೆ ಕುರಿತು ಸಲಹೆ, ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ನಮಿತಾ ತಿಳಿಸಿದ್ದಾರೆ.
ಇಲ್ಲಿನ ಕೆಲವು ನೆಲೆಗಳಲ್ಲಿ ವಿವಿಧ ಗಾತ್ರದ ಮಣಿಕೆಗಳು ದೊರೆತಿವೆ. 2 ರಿಂದ 2.5 ಅಡಿ ಎತ್ತರದ ಒಂದು ಅಡಿ ವ್ಯಾಸದ ಗಡಿಗೆಗಳು ದೊರೆತಿವೆ. ಇವುಗಳಲ್ಲಿಯೂ ಮೊಳೆಗಳು ಕಂಡು ಬಂದಿವೆ. ಈ ಮಡಿಕೆಗಳು ವಿವಿಧ ಗಾತ್ರ ಅಲ್ಲದೆ, ವಿವಿಧ ವಿನ್ಯಾಸ ಹೊಂದಿವೆ. ಶವಸಂಸ್ಕಾರಕ್ಕೆ ಇವುಗಳನ್ನು ಬಳಸಿರುವ ಸಾಧ್ಯತೆ ಇದೆ ಎಂದು ನಮಿತಾ ಎಸ್. ಸುಗಂಧಿ ತಿಳಿಸಿದ್ದಾರೆ.ಉತ್ಪನನ ತಂಡದಲ್ಲಿ ಐಐಟಿ ಕಾನ್ಪುರದ ಡಾ.ಯಶಸ್ವಿನಿ ಜಯದೇವಯ್ಯ, ಕಲಬುರಗಿ ಸೆಂಟ್ರಲ್ ಯೂನಿವರ್ಸಿಟಿಯ ಸಂಶೋಧನಾರ್ಥಿ ಜಿ.ರೋಹಿಣಿ ಹಾಗೂ ಅಶೋಕ ಅಬಕಾರಿ ಭಾಗವಹಿಸಿದ್ದಾರೆ.
ನಾಗರಿಕತೆಯ ಚರಿತ್ರೆಯ ಅಧ್ಯಯನದ ದೃಷ್ಟಿಯಿಂದ ಆ ಪ್ರದೇಶ ಮಹತ್ವ ಪಡೆದುಕೊಂಡಿದ್ದರೂ ಇದರ ರಕ್ಷಣೆ ಬಗೆಗೆ ಕ್ರಮ ವಹಿಸಿಲ್ಲ. ಸ್ಥಳದ ಮಹತ್ವ ತಿಳಿಸಿಕೊಡುವ ಸಣ್ಣ ಫಲಕವನ್ನೂ ಪ್ರಾಚ್ಯವಸ್ತು ಇಲಾಖೆ ಹಾಕಿಲ್ಲ. ಬೂದಿ ದಿಬ್ಬಕ್ಕೆ ತೆರಳಲು ಸರಿಯಾದ ರಸ್ತೆ ಇಲ್ಲ; ಮಾರ್ಗಸೂಚಿಗಳೂ ಇಲ್ಲ. ಆಸಕ್ತಿಯಿಂದ ಅಧ್ಯಯನ, ವೀಕ್ಷಣೆಗೆ ಬರುವವರಿಗೆ ಸಾಕಷ್ಟು ತೊಂದರೆ ಆಗುತ್ತಿದೆ ಎಂದು ಉಪನ್ಯಾಸಕ ಮನೋಹರ ಬೇಸರ ವ್ಯಕ್ತಪಡಿಸಿದರು