ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸಂಪೂರ್ಣ ಸಾಲಮಯವಾಗಿದ್ದರೂ ಹಾವೇರಿಯಲ್ಲಿ ಫೆ.೧೩ರಂದು ಸರ್ಕಾರ ಸಾಧನಾ ಸಮಾವೇಶ ಮಾಡಲು ಹೊರಟಿರುವುದು ಹಾಸ್ಯಾಸ್ಪದ. ಸಾಧನಾ ಸಮಾವೇಶದ ಹೆಸರು ಬದಲಿಸಿ ಸಾಲದ ಸಮಾವೇಶ ಎಂದು ಮಾಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಟೀಕಿಸಿದರು.
ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸಂಪೂರ್ಣ ಸಾಲಮಯವಾಗಿದ್ದರೂ ಹಾವೇರಿಯಲ್ಲಿ ಫೆ.೧೩ರಂದು ಸರ್ಕಾರ ಸಾಧನಾ ಸಮಾವೇಶ ಮಾಡಲು ಹೊರಟಿರುವುದು ಹಾಸ್ಯಾಸ್ಪದ. ಸಾಧನಾ ಸಮಾವೇಶದ ಹೆಸರು ಬದಲಿಸಿ ಸಾಲದ ಸಮಾವೇಶ ಎಂದು ಮಾಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಟೀಕಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಮೇಲೆ ಒಟ್ಟು ೭ಲಕ್ಷ ಕೋಟಿ ರು.ಗಳಷ್ಟು ಸಾಲವಿದೆ. ಶೇ.೬೩ರಷ್ಟು ಸಾಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯಲ್ಲಿಯೇ ಆಗಿದೆ. ಒಂದು ವರ್ಷದಲ್ಲಿ ೩ ಲಕ್ಷ ಕೋಟಿ ರು.ಸಾಲ ಮಾಡಿದ್ದಾರೆ. ಈ ಪೈಕಿ ೧.೧೦ಲಕ್ಷ ಕೋಟಿ ರು.ಹಣ ಗ್ಯಾರಂಟಿ ಯೋಜನೆಗಳಿಗೆ ಹಣ ವ್ಯಯವಾದರೂ ಇನ್ನುಳಿದ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.ಸಾಧನಾ ಸಮಾವೇಶ ಮಾಡಲು ಕಾಂಗ್ರೆಸ್‌ನವರಿಗೆ ನೈತಿಕತೆಯೇ ಇಲ್ಲ. ಇತ್ತೀಚಿಗೆ ಹುಬ್ಬಳ್ಳಿಯಲ್ಲಾದ ಸಮಾವೇಶ ಸಂದರ್ಭದಲ್ಲಿ ರೈತರಿಗೆ, ಬಡವರಿಗೆ ಜಾಗ ನೋಂದಣಿ ಮಾಡಿಸಿಕೊಡಲು ವಸತಿ ಹಾಗೂ ಕಂದಾಯ ಇಲಾಖೆಯವರು ಜನರ ಜೇಬಿನಿಂದ ಹಣ ಪಡೆದುಕೊಂಡಿದ್ದಾರೆ. ಅಬಕಾರಿ ಸುಂಕ ಹೆಚ್ಚಳ, ಆಸ್ತಿ ನೋಂದಣಿ ಶುಲ್ಕ ಹೆಚ್ಚಳ, ಬಾಂಡ್ ಪೇಪರ್ ಹೆಚ್ಚಳ, ನಕ್ಷೆ ಹೊಂದಿಸಲು, ಮುದ್ರಾಂಕ ಶುಲ್ಕ, ಪಹಣಿ ಶುಲ್ಕ, ಸ್ಪಿಂಕ್ಲರ್ ಸೆಟ್ ದರ ಹೀಗೆ ಎಲ್ಲದರಲ್ಲೂ ಹೆಚ್ಚಿಗೆ ಹಣವನ್ನು ಪಡೆದುಕೊಂಡಿದ್ದಾರೆ. ಜನರ ಮೇಲೆ ಹೊರೆ ಹಾಕಿದ್ದಾರೆ. ಸಾಧನಾ ಸಮಾವೇಶ ನಡೆಸಲು ಪೂರಕವಾದ ವಾತಾವರಣವೇ ಇಲ್ಲ ಎಂದು ಆರೋಪಿಸಿದರು.ಐದು ಗ್ಯಾರಂಟಿ ಯೋಜನೆ ಬಡವರಿಗಾಗಿ ಕೊಟ್ಟಿದ್ದಾರೆ ಕೊಡಲಿ, ಆದರೆ ಯೋಜನೆ ಯಾರಿಗೂ ಸಮರ್ಪಕವಾಗಿ ತಲುಪಿಲ್ಲ. ಯಾರದೋ ಹಣ ಇನ್ಯಾರದೋ ಅಕೌಂಟ್‌ಗೆ ಹೋಗಿದೆಯೋ ಅನ್ನೋದೆ ತಿಳಿಯುತ್ತಿಲ್ಲ. ಯೋಜನೆಯು ಪ್ರತಿ ತಿಂಗಳು ಫಲಾನುಭವಿಗಳಿಗೆ ಸಿಗುತ್ತಿಲ್ಲ. ಈ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಕುಟುಕಿದ ಅವರು, ಯೋಜನೆಗಳನ್ನು ಕೊಡಲಿಕ್ಕೆ ಆಗುತ್ತಿಲ್ಲ, ಜನರ ಜೇಬಿನಿಂದ ಹಣ ಸಂಗ್ರಹಿಸುವ ಸುಲಭದ ದಾರಿಯನ್ನು ಹುಡುಕಿದ್ದಾರೆ ಎಂದು ಟೀಕಿಸಿದರು.ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣವರ ಮಾತನಾಡಿ, ಸರ್ಕಾರ ಮೊದಲು ಜಿಲ್ಲಾದ್ಯಂತ ಮೊಣಕಾಲುದ್ದ ಬಿದ್ದಿರುವ ರಸ್ತೆ ಗುಂಡಿಗಳನ್ನು ಮುಚ್ಚಲಿ. ಜನರಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳನ್ನು, ಅಭಿವೃದ್ಧಿ ಕೆಲಸಗಳನ್ನು ಮಾಡಿ ಆಮೇಲೆ ಬೇಕಾದರೆ ಸಮಾವೇಶ ಮಾಡಿಕೊಳ್ಳಲಿ. ಸಿದ್ದರಾಮಯ್ಯ ಮಾತೆತ್ತಿದರೆ ನಾವು ಕೆಳ ವರ್ಗದವರ ಪರ ಇದ್ದೇವೆ ಎಂದು ಹೇಳುತ್ತಲೇ ಎಸ್ಸಿ, ಎಸ್ಟಿ ವರ್ಗದವರ ಕೋಟ್ಯಂತರ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಶಿವರಾಜ ಸಜ್ಜನರ, ಸಂತೋಷ ಆಲದಕಟ್ಟಿ, ಕಿರಣಕುಮಾರ ಕೋಣನವರ, ನೀಲಪ್ಪ ಚಾವಡಿ, ವಿಜಯಕುಮಾರ ಚಿನ್ನಿಕಟ್ಟಿ, ಮಂಜುನಾಥ ಮಡಿವಾಳರ, ಪ್ರವೀಣ ಶೆಟ್ಟರ, ಮೃತ್ಯುಂಜಯ ಮುಷ್ಠಿ ಸೇರಿದಂತೆ ಇತರರು ಇದ್ದರು.ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜನಪ್ರಿಯತೆಗಿಂತ ಜನಹಿತ ತತ್ವದಡಿ ಜನೋಪಯೋಗಿ ಬಜೆಟ್‌ನ್ನು ಮಂಡಿಸಿದ್ದಾರೆ. ೨೦೪೭ರ ದೂರದೃಷ್ಟಿಯನ್ನು ಇಟ್ಟುಕೊಂಡು ಆತ್ಮನಿರ್ಭರ ಭಾರತ್, ವಿಕಸಿತ ಭಾರತ ಸಂಕಲ್ಪದೊಂದಿಗೆ ಅಭಿವೃದ್ಧಿಗೆ ಪೂರಕ ಬಜೆಟ್‌ನ್ನು ಮಂಡಿಸಲಾಗಿದೆ. ಹೈಸ್ಪೀಡ್ ರೈಲು ಯೋಜನೆ, ತೆಂಗು, ಗೊಡಂಬಿ, ಕೋಕೋ ಬೆಳೆಗಾರರ ಹಿತರಕ್ಷಣೆಗೆ ಒತ್ತು ನೀಡಿದ್ದಾರೆ. ಅಟೋಮೊಬೈಲ್, ಸೆಮಿಕಂಡಕ್ಟರ್, ಎಐ ತಂತ್ರಜ್ಞಾನದ ನಡುವೆಯೂ ಅಭಿವೃದ್ಧಿಗೆ ವೇಗ ನೀಡುವ ಬಜೆಟ್ ಮಂಡಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.