ಸಾರಾಂಶ
ವಿಧಾನಸಭೆ : ಅರಣ್ಯ ಪ್ರದೇಶದಲ್ಲಿ ಗುತ್ತಿಗೆದಾರನೊಬ್ಬ ಅಕ್ರಮವಾಗಿ ಬರೋಬ್ಬರಿ 873 ಮರ ಕಡಿದಿದ್ದರೂ ಕೇವಲ 50 ಸಾವಿರ ರು. ದಂಡ ವಿಧಿಸಿ ಪ್ರಕರಣ ಮುಕ್ತಾಯಗೊಳಿಸಿರುವ ಹಾಗೂ ಹೈಕೋರ್ಟ್‌ಗೆ ಕ್ರಿಯಾ ಯೋಜನೆ ಸಲ್ಲಿಸಿರುವ ಹೊರತಾಗಿಯೂ 22,173 ಎಕರೆ ಒತ್ತುವರಿಯನ್ನು ತೆರವುಗೊಳಿಸದಿರುವುದು ಸೇರಿದಂತೆ ಅರಣ್ಯ ಇಲಾಖೆಯ ಹಲವು ನಿರ್ಲಕ್ಷ್ಯಗಳನ್ನು ಸಿಎಜಿ ಅನುಸರಣಾ ವರದಿ ಬಹಿರಂಗಗೊಳಿಸಿದೆ.
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರು, ‘ಮಾ.2022ಕ್ಕೆ ಕೊನೆಗೊಂಡಂತೆ ಕರ್ನಾಟಕ ಸರ್ಕಾರದ ಇಲಾಖೆ ಮತ್ತು ಸಾರ್ವಜನಿಕ ವಲಯ ಉದ್ಯಮಗಳ ಮೇಲಿನ ಪ್ರಧಾನ ಮಹಾಲೇಖಪಾಲ ಹಾಗೂ ಲೆಕ್ಕಪರಿಶೋಧನೆ (ಸಿಎಜಿ) ಅನುಸರಣೆಯ ಮೂರನೇ ವರದಿ’ ಮಂಡನೆ ಮಾಡಿದರು.
ಇದರಲ್ಲಿ ಅರಣ್ಯ ಇಲಾಖೆ, ಮುಜರಾಯಿ ಇಲಾಖೆ, ಲೋಕೋಪಯೋಗಿ ಇಲಾಖೆ, ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ನಿಯಮ ಉಲ್ಲಂಘನೆ, ಅಕ್ರಮ ಹಾಗೂ ನಿರ್ಲಕ್ಷ್ಯಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ.
ಅರಣ್ಯ ನಾಶ ಮಾಡಿದರೆ 2,000 ರು. ದಂಡ!:
ಗುತ್ತಿಗೆದಾರ ಅಕ್ರಮವಾಗಿ ಬರೋಬ್ಬರಿ 873 ಮರ ಕಡಿದಿದ್ದರೂ ಕೇವಲ 50 ಸಾವಿರ ರು. ದಂಡ ವಿಧಿಸಿ ಪ್ರಕರಣ ಮುಕ್ತಾಯಗೊಳಿಸಲಾಗಿದೆ.
ಇನ್ನು ಜೆಸಿಬಿ, ಟ್ರ್ಯಾಕ್ಟರ್ ಬಳಸಿ ಮರಗಳನ್ನು ಕಡಿದು ಭೂಮಿ ಸಮತಟ್ಟು ಮಾಡುವ ಮೂಲಕ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿದಂತಹ ಗಂಭೀರ ಅಪರಾಧಗಳಿಗೆ ಕೇವಲ 2,000 ರು. ದಂಡ ವಿಧಿಸಿ ಪ್ರಕರಣ ಮುಚ್ಚಿ ಹಾಕಲಾಗಿದೆ.
ಇಂತಹ ಐದು ಪ್ರಕರಣಗಳಲ್ಲಿ ಕೇವಲ 2,000 ರು.ಗಳಿಂದ 26 ಸಾವಿರ ರು. ದಂಡ ಮಾತ್ರ ವಿಧಿಸಲಾಗಿದ್ದು, ಅರಣ್ಯ ನಾಶ ಹಾಗೂ ಅರಣ್ಯ ಭೂಮಿ ಸಮತಟ್ಟು ಮಾಡಲು ಬಳಸಿರುವ ಜೆಸಿಬಿ, ಟ್ರ್ಯಾಕ್ಟರ್‌ನಂತಹ ವಾಹನ, ಯಂತ್ರೋಪಕರಣ ಕೂಡ ವಶಪಡಿಸಿಕೊಂಡಿಲ್ಲ ಎಂದು ಸಿಎಜಿ ವರದಿಯಲ್ಲಿ ಆಕ್ಷೇಪಿಸಲಾಗಿದೆ.
ಅರಣ್ಯ ಒತ್ತುವರಿಯ ತೆರವಿಗೂ ನಿರ್ಲಕ್ಷ್ಯ:
ಇನ್ನು ಅರಣ್ಯ ಭೂಮಿಗಳ ಅನಧಿಕೃತ ಒತ್ತುವರಿಯನ್ನು ಸಕ್ರಮಗೊಳಿಸುವಂತೆ ಅತಿಕ್ರಮಣ ಮಾಡಿದವರು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಒತ್ತುವರಿ ತೆರವುಗೊಳಿಸಿಲ್ಲ.
1,322 ಪ್ರಕರಣಗಳಲ್ಲಿ 1,188 ಹೆಕ್ಟೇರ್ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಜತೆಗೆ ಹೈಕೋರ್ಟ್ ಮುಂದೆ ಸಲ್ಲಿಸಿದ್ದ ಕ್ರಿಯಾಯೋಜನೆ ಪ್ರಕಾರ 2016ರ ಜೂನ್ ಒಳಗೆ ತೆರವುಗೊಳಿಸಬೇಕಾಗಿದ್ದ 22,173 ಎಕರೆ ಅರಣ್ಯ ಭೂಮಿಯನ್ನು ತೆರವುಗೊಳಿಸಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
1.98 ಲಕ್ಷ ಹೆಕ್ಟೇರ್ ಅನುಸೂಚಿತ ಅರಣ್ಯ ಘೋಷಣೆ ಬಾಕಿ:
11 ವಿಭಾಗಗಳಲ್ಲಿ 1.98 ಲಕ್ಷ ಹೆಕ್ಟೇರ್ ಅರಣ್ಯ ಭೂಮಿ ಇನ್ನೂ ಅರಣ್ಯ ಇಲಾಖೆ ಪರವಾಗಿ ಅಧಿಸೂಚಿತ ಅರಣ್ಯ ಪ್ರದೇಶವಾಗಿ ಘೋಷಿಸಿಲ್ಲ. ಈ ಬಗ್ಗೆ ಕಂದಾಯ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ.
ಹಿಂದೂ ಧಾರ್ಮಿಕ ಸಂಸ್ಥೆಗಳ ನಿರ್ವಹಣೆಯಲ್ಲಿ ವಿಫಲ:
ಮುಜರಾಯಿ ಇಲಾಖೆಯಲ್ಲೂ ರಾಜ್ಯ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳ ನಿರ್ವಹಣೆಯಲ್ಲಿ ಹಲವು ನಿಯಮ ಉಲ್ಲಂಘನೆಯಾಗಿದೆ. ಅನುದಾನ ಹಂಚಿಕೆ ವೇಳೆ ಖಾಸಗಿ ಸಂಸ್ಥೆ ಹಾಗೂ ಅಧಿಸೂಚಿತ ಸಂಸ್ಥೆಗಳ ನಡುವೆ ತೀವ್ರ ತಾರತಮ್ಯ ಮಾಡಲಾಗಿದೆ. ಶಾಸನಬದ್ಧ ಸ್ವರೂಪದ ತಸ್ತಿಕ್ ಮತ್ತು ವಾರ್ಷಿಕ ಅನುದಾನಗಳನ್ನು ಬಿಡುಗಡೆ ಮಾಡದೆ ತಹಸೀಲ್ದಾರರ ಖಾತೆಗಳಲ್ಲೇ ಉಳಿಸಿಕೊಳ್ಳಲಾಗಿದೆ. ಇನ್ನೂ ಹಲವು ಲೋಪಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬಿಡಿಎನಿಂದ 3,500 ಕೋಟಿ ಸಂಗ್ರಹಕ್ಕೆ ನಿರ್ಲಕ್ಷ್ಯ
ರಾಜ್ಯ ಸರ್ಕಾರವು ಅಭಿವೃದ್ಧಿ ತೆರಿಗೆ ವಿಧಿಸಲು ಅವಕಾಶ ಕಲ್ಪಿಸಿ ಮೂರು ವರ್ಷವಾದರೂ ನಾಡಪ್ರಭು ಕೆಂಪೇಗೌಡ ಬಡಾವಣೆ ಹಾಗೂ ಅರ್ಕಾವತಿ ಬಡಾವಣೆಯಿಂದ ಸಂಗ್ರಹಿಸಲು ಉದ್ದೇಶಿಸಿದ್ದ 3,503 ಕೋಟಿ ರು.ಗಳ ತೆರಿಗೆ ಬದಲಿಗೆ ಬಿಡಿಎಯು ಕೇವಲ 3.22 ಕೋಟಿ ರು. ತೆರಿಗೆ ಸಂಗ್ರಹಿಸಿದೆ. ಇದರಿಂದ 3,500 ಕೋಟಿ ರು. ಆದಾಯ ಸಂಗ್ರಹಣೆ ತಪ್ಪಿಸಿದಂತಾಗಿದೆ ಎಂದು ಸಿಎಜಿ ವರದಿಯಲ್ಲಿ ತಿಳಿಸಿದೆ.