ಮಾಲಿನ್ಯ ನಿಯಂತ್ರಣ ಮಂಡಳಿಗೆ 50ರ ಸಂಭ್ರಮ!

| Published : Oct 09 2025, 02:00 AM IST

ಮಾಲಿನ್ಯ ನಿಯಂತ್ರಣ ಮಂಡಳಿಗೆ 50ರ ಸಂಭ್ರಮ!
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವವನ್ನು ರಾಜ್ಯದಲ್ಲಿ ಅ.10 ರಿಂದ ನ.19 ರವರೆಗೂ ಅದ್ದೂರಿಯಾಗಿ ಆಚರಿಸಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವವನ್ನು ರಾಜ್ಯದಲ್ಲಿ ಅ.10 ರಿಂದ ನ.19 ರವರೆಗೂ ಅದ್ದೂರಿಯಾಗಿ ಆಚರಿಸಲಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪರಿಸರ ಜಾಗೃತಿ, ಮಾಲಿನ್ಯ ನಿಯಂತ್ರಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಂಡಳಿಯ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ರಾಜ್ಯದ ಪ್ರತಿ ಹಳ್ಳಿಯಲ್ಲೂ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಮಂಡಳಿ ಸ್ಥಾಪನೆಯಾಗಲು ಕಾರಣಕರ್ತರಾದ ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಅವರನ್ನು ಸ್ಮರಿಸಲಾಗುವುದು ಎಂದು ಹೇಳಿದರು.

ಅ.10 ರಂದು ಬಳ್ಳಾರಿಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ಪ್ರಾರಂಭವಾಗಿ ಇಂದಿರಾ ಗಾಂಧಿ ಅವರ ಜನ್ಮ ದಿನವಾದ ನ.19 ರಂದು ಬೆಂಗಳೂರಿನಲ್ಲಿ ಬೃಹತ್‌ ಸಮಾರಂಭದೊಂದಿಗೆ ಮುಕ್ತಾಯವಾಗಲಿದೆ. ರಾಜ್ಯದ 15 ಭಾಗದಲ್ಲಿ ಬೃಹತ್‌ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು ಎಲ್ಲ ಜಿಲ್ಲೆಗಳೂ ಒಳಗೊಳ್ಳುವಂತೆ ನೋಡಿಕೊಳ್ಳಲಾಗುವುದು. ಜಿಲ್ಲಾ ಮಟ್ಟ, ತಾಲೂಕು ಮಟ್ಟ ಮಾತ್ರವಲ್ಲದೆ ಪ್ರತಿ ಹಳ್ಳಿಯಲ್ಲೂ ಕಾರ್ಯಕ್ರಮ ಏರ್ಪಡಿಸಿ ಪರಿಸರ ಜಾಗೃತಿ ಮತ್ತು ಮಾಲಿನ್ಯ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ವಿವರಿಸಿದರು.

ವಿವಿಧ ಸ್ಪರ್ಧೆ:

ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಚಿತ್ರಕಲೆ ಸೇರಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ವಿಧಾನಸಭಾ ಕ್ಷೇತ್ರವಾರು ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಜಿಲ್ಲಾ ಮಟ್ಟದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 3 ಸಾವಿರ ರು. ಬಹುಮಾನ ನೀಡಲಾಗುವುದು. ಪರಿಸರ ಉಳಿವು ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಶ್ರಮಿಸುವ ವ್ಯಕ್ತಿ ಮತ್ತು ಸಂಘ ಸಂಸ್ಥೆಗಳಿಗೆ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ‘ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.

ಎಲ್ಲಾ ಜಿಲ್ಲೆಗಳಲ್ಲಿ ಪರಿಸರ ಸಂರಕ್ಷಣೆಯ ಚರ್ಚೆ ನಡೆಸಲಾಗುವುದು. ಸ್ಥಳೀಯವಾಗಿ ನಡೆದ ಚರ್ಚೆ, ಸಂವಾದಗಳಲ್ಲಿ ಕೇಳಿಬಂದ ಸಲಹೆಗಳ ಬಗ್ಗೆ ಚರ್ಚಿಸಲು ನ.18 ಮತ್ತು 19 ರಂದು ರಾಜ್ಯಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ, ಮಂಡಳಿಯ ಸದಸ್ಯ ಕಾರ್ಯದರ್ಶಿ ಲಿಂಗರಾಜು ಉಪಸ್ಥಿತರಿದ್ದರು.

- ಬಾಕ್ಸ್‌-

ಪರಿಸರದ ಬಗ್ಗೆ ರೀಲ್ಸ್‌

ಮಾಡಿ, ಬಹುಮಾನ ಗೆಲ್ಲಿ

ಮಾಲಿನ್ಯ ನಿಯಂತ್ರಣ ಮಂಡಳಿಯು ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ‘ಪರಿಸರದ ಬಗ್ಗೆ ರೀಲ್ಸ್‌ ಮಾಡಿ ಬಹುಮಾನ ಗೆಲ್ಲಿ’ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ನರೇಂದ್ರ ಸ್ವಾಮಿ ತಿಳಿಸಿದರು.

ಪರಿಸರ ಕಾಳಜಿ, ಸಂರಕ್ಷಣೆಯ ಸಂದೇಶ ಸಾರುವ ಸಾರ್ವಜನಿಕರ ರೀಲ್ಸ್‌ಗೆ ಬಹುಮಾನ ವಿತರಿಸಲಾಗುವುದು. ಉತ್ತಮ ರೀಲ್ಸ್‌ಗೆ 50 ಸಾವಿರ ರು. ಪ್ರಥಮ ಬಹುಮಾನ, 25 ಸಾವಿರ ದ್ವಿತೀಯ ಬಹುಮಾನ ಹಾಗೂ 10 ಸಾವಿರ ರು. ತೃತೀಯ ಬಹುಮಾನ ನೀಡಲಾಗುವುದು ಎಂದು ಹೇಳಿದರು.

=

(ರಾಜಕ್ಕೆ ಕಡ್ಡಾಯ)