ಚನ್ನಪಟ್ಟಣ ಹಾಗೂ ರಾಮನಗರ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು 51 ಕೋಟಿ . ಅನುದಾನ

| N/A | Published : Feb 22 2025, 12:49 AM IST / Updated: Feb 22 2025, 09:26 AM IST

Dr CN Manjunath

ಸಾರಾಂಶ

ರೈಲ್ವೆಗೆ ಸಂಬಂಧಿಸಿದಂತೆ ಯುಪಿಎ ಅವಧಿಯಲ್ಲಿ ರಾಜ್ಯಕ್ಕೆ 835 ಕೋಟಿ ರುಪಾಯಿ ಹಣ ಬಿಡುಗಡೆಯಾದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅವಧಿಯಲ್ಲಿ 7,564 ಕೋಟಿ ರುಪಾಯಿ ಬಿಡುಗಡೆಯಾಗಿದ್ದು ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. 

 ರಾಮನಗರ : ಕೇಂದ್ರ ಸರ್ಕಾರದ ವಿತ್ತ ಸಚಿವರಾದ ನಿರ್ಮಲ ಸೀತಾರಾಮನ್ ಅವರು ಸತತ 8ನೇ ಬಾರಿಗೆ ಮಂಡಿಸಿರುವ ಬಜೆಟ್‌ನಲ್ಲಿ ಆರೋಗ್ಯ, ರಕ್ಷಣೆ, ಕೃಷಿ ಉತ್ಪಾದಕತೆ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಸಂಸದ ಡಾ. ಮಂಜುನಾಥ್ ಸಂತಸ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಪಂಚಾಯತ್‌ನ ಮಿನಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ದೇಶದ ಜಿಡಿಪಿ ಬೆಳವಣಿಗೆ ದರ 6.2 ರಿಂದ 6.3 ರಷ್ಟಿದೆ. ಆರ್ಥಿಕ ಬೆಳವಣಿಗೆಯಲ್ಲಿ ಭಾರತವು ಇದೇ ವೇಗದಲ್ಲಿ ಮುಂದುವರಿದರೆ 2027ಕ್ಕೆ ಜಗತ್ತಿನಲ್ಲಿ 3ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದರು.

ಕೃಷಿಗೆ ಆದ್ಯತೆ ನೀಡಿರುವ ಬಜೆಟ್‌ನಲ್ಲಿ ಪ್ರಧಾನ ಮಂತ್ರಿ ಧನ ಧಾನ್ಯ ಯೋಜನೆಯಡಿ 1.70 ಕೋಟಿ ರೈತರಿಗೆ ನೆರವು ನೀಡಲಾಗುತ್ತಿದೆ. ತೊಗರಿ ಬೆಳೆ ಹಾಗೂ ಅವರೆ ಬೇಳೆಯ ಉತ್ತಮ ಇಳುವರಿಗೆ ಕ್ರಮಕೈಗೊಳ್ಳಲಾಗಿದೆ. ರೈತರಿಗೆ 6,000 ರು.ಗಳ ನೇರ ನೆರವು ನೀಡಲಾಗುತ್ತಿದೆ. ರಾಗಿ, ಭತ್ತ ಸೇರಿದಂತೆ 23 ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿ ಮಾಡಿ ಬೆಳೆಗಳನ್ನು ಖರೀದಿಸಲಾಗುವುದು. ಫಸಲ್ ಭೀಮಾ ಯೋಜನೆಯಡಿ ರಾಮನಗರ ಜಿಲ್ಲೆಯಲ್ಲಿ 2.60 ಕೋಟಿ ರು.ಗಳನ್ನು ಕ್ಲೇಮ್ ಮಾಡಲಾಗಿದೆ ಎಂದು ಹೇಳಿದರು.

ರೈಲ್ವೆಗೆ ಸಂಬಂಧಿಸಿದಂತೆ ಯುಪಿಎ ಅವಧಿಯಲ್ಲಿ ರಾಜ್ಯಕ್ಕೆ 835 ಕೋಟಿ ರುಪಾಯಿ ಹಣ ಬಿಡುಗಡೆಯಾದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅವಧಿಯಲ್ಲಿ 7,564 ಕೋಟಿ ರುಪಾಯಿ ಬಿಡುಗಡೆಯಾಗಿದ್ದು ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಚನ್ನಪಟ್ಟಣ ಹಾಗೂ ರಾಮನಗರ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು 51 ಕೋಟಿ ರು.ಗಳನ್ನು ಬಿಡುಗಡೆ ಮಾಡಲಾಗಿದೆ. ಬಿಡದಿ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಹೆಣ್ಣು ಮಕ್ಕಳ ಆರ್ಥಿಕ ಸಬಲೀಕರಣಕ್ಕೆ ಸ್ವಂತ ಯೋಜನೆಗಳನ್ನು ಸ್ಥಾಪಿಸಲು 2 ಕೋಟಿ ರು.ಗಳ ವರೆಗೆ ಸಾಲ ಮಂಜೂರಾತಿ ಮಾಡಲಾಗುವುದು. ಹಾರೋಹಳ್ಳಿಯಲ್ಲಿ ಇಎಸ್‌ಐ ಆಸ್ಪತ್ರೆ ಸ್ಥಾಪಿಸಲಾಗುವುದು. ಪಿ.ಎಂ. ಶ್ರೀ ಯೋಜನೆಯಡಿ ದೇಶದಲ್ಲಿ 2000 ದಿಂದ 2500 ಕೇಂದ್ರೀಯ ವಿದ್ಯಾಲಯ ಸ್ಥಾಪನೆ ಮಾಡಲಾಗುವುದು. ಕೇಂದ್ರ ಸರ್ಕಾರದ ಬಜೆಟ್ ಬಡವರು, ಮಧ್ಯಮವರ್ಗ, ರೈತರ ಪರವಾಗಿದೆ ಎಂದು ಮಂಜುನಾಥ್ ತಿಳಿಸಿದರು.