ಸಾರಾಂಶ
ಸಿರಿಗೆರೆ: ಭದ್ರಾ, ಮೇಲ್ದಂಡೆ ಯೋಜನೆಗೆ ಮೋದಿ ಸರ್ಕಾರ ಘೋಷಣೆ ಮಾಡಿರುವ ೫೩೦೦ ಕೋಟಿ ರು.ಗಳನ್ನು ತರುವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.
ಭರಮಸಾಗರದಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಪರ ಮತಯಾಚನೆ ಮಾಡಿದ ನಂತರ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.
ಈ ಬಾರಿ ಚುನಾವಣೆಗೂ ಮುನ್ನವೇ ಫಲಿತಾಂಶ ಸ್ಪಷ್ಟವಾಗಿದೆ. ಎಲ್ಲೆಲ್ಲಿಯೂ ಬಿಜೆಪಿ ಪರ ವಾತಾವರಣ ಇದೆ. ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ೨ ಲಕ್ಷ ಮತಗಳಿಂದ ಜಯಗಳಿಸುತ್ತಾರೆ ಎಂಬ ಅಭಯ ನೀಡಿದರು.
ಬಿಜೆಪಿ ಪಕ್ಷವು ಅಕ್ಷಯ ಪಾತ್ರೆ. ಬಡವರು ಮತ್ತು ಶೋಷಿತರ ಪರವಾಗಿ ಹತ್ತಾರು ಯೋಜನೆಗಳನ್ನು ರೂಪಿಸಲಾಗಿದೆ. ಮುಂದಿನ ಬಾರಿಗೂ ಪ್ರಧಾನಿಯಾಗಲಿರುವ ನರೇಂದ್ರ ಮೋದಿ ಭಾರತೀಯರ ಕನಸನ್ನು ನನಸು ಮಾಡುವ ಹತ್ತಾರು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಚುನಾವಣೆಗೆ ಇಳಿದಿದ್ದೇವೆ. ಇದರಿಂದ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ ಎಂದರು.
ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಈ ಬಾರಿ ರಘುಚಂದನ್ ಸ್ಪರ್ಧೆಗೆ ಅಪೇಕ್ಷೆ ಇತ್ತು. ಅವಕಾಶ ಸಿಗದೇ ಹೋದಾಗ ದುಡುಕಿ ಮಾತಾಡಿದ್ದೇನೆ. ನಾನು ಎಂದಿಗೂ ಬಿ.ಎಸ್.ಯಡಿಯೂರಪ್ಪ ಅವರನ್ನೇ ಬೆಂಬಲಿಸುತ್ತೇನೆ. ನಾನು ನೀಡಿರುವ ಮಾತಿಗೆ ಬದ್ಧನಾಗಿ ನಡೆದುಕೊಳ್ಳುವೆ. ಅವರಿಗೆ ಕೊಟ್ಟಿರುವ ಮಾತಿನಂತೆ ನಡೆದುಕೊಂಡು ಕ್ಷೇತ್ರದಲ್ಲಿ ಗೋವಿಂದ ಕಾರಜೋಳಗೆ ಬಹುಮತದ ಜೊತೆಗೆ ಗೆಲುವಿಗೆ ಶ್ರಮಿಸುವೆ ಎಂದರು.
ಅಭ್ಯರ್ಥಿ ಗೋವಿಂದ ಕಾರಜೋಳ ಮಾತನಾಡಿ, ಚುನಾವಣೆಗೆ ಇನ್ನು ಕೇವಲ ನಾಲ್ಕು ದಿನಗಳು ಉಳಿದಿವೆ. ಕಾರ್ಯಕರ್ತರು ಈ ನಾಲ್ಕು ದಿನಗಳ ಕಾಲ ಪ್ರತಿ ಮನೆಮನೆಗೆ ತೆರಳಿ ಕಮಲದ ಗುರುತಿಗೆ ಮತ ಹಾಕಿಸಬೇಕು. ನರೇಂದ್ರ ಮೋದಿ 3ನೇ ಬಾರಿಗೆ ಪ್ರಧಾನಿ ಆಗುವುದನ್ನು ನಾವೆಲ್ಲರೂ ನೋಡಬೇಕು.
ಭರಮಸಾಗರ ಏತ ನೀರಾವರಿ ಯೋಜನೆಗೆ ತರಳಬಾಳು ಶ್ರೀಗಳ ದೂರದೃಷ್ಟಿಯಂತೆ ೧೨೫೦ ಕೋಟಿ ರು.ಗಳ ಹಣ ಬಿಡುಗಡೆ ಮಾಡುವ ಸಂದರ್ಭದಲ್ಲಿ ನಾವೆಲ್ಲ ಒಟ್ಟಿಗೇ ಇದ್ದೇವೆ ಎಂದರು.
ಮಾಜಿ ಎಂಎಲ್‌ಸಿ ಎಂ.ಡಿ.ಲಕ್ಷ್ಮೀನಾರಾಯಣ, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್, ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ವೆಂಕಟೇಶ್ ಮಾತನಾಡಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಮುರಳಿ, ಎಸ್.ಕೆ.ಬಸವರಾಜನ್, ರಘುಚಂದನ್, ಲಿಂಗಮೂರ್ತಿ, ಡಿ.ವಿ.ಶರಣಪ್ಪ, ಕೆ.ಬಿ.ಮೋಹನ್, ಶೈಲೇಶ್ ಕುಮಾರ್ ಮುಂತಾದವರು ಭಾಗವಹಿಸಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))