ಸಾರಾಂಶ
ಮಲೇಬೆನ್ನೂರು : ದಾವಣಗೆರೆ ಜಿಲ್ಲೆಯಲ್ಲಿ ಕಾನೂನು ಅರಿವು ಹೆಚ್ಚಿಸುವ ಸಲುವಾಗಿ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಬಾಲ್ಯ ವಿವಾಹ, ಬಾಲ ಕಾರ್ಮಿಕ, ಭಿಕ್ಷಾಟನೆ ಮತ್ತು ಕಡ್ಡಾಯ ಶಿಕ್ಷಣದ ಕಾನೂನು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಕಾರಿ ಉಮಾ ಪ್ರಶಾಂತ್ ತಿಳಿಸಿದರು.ಸಮೀಪದ ಭಾನುವಳ್ಳಿ ಗ್ರಾಮದ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಬುಧವಾರ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಶಿಕ್ಷಣ ಇಲಾಖೆ ಸಂಘಟಿಸಿದ್ದ ಬಾಲ್ಯ ವಿವಾಹ ಕಾಯ್ದೆ, ಫೋಕ್ಸೋ ಕಾಯ್ದೆ ಬಗ್ಗೆ ಅರಿವು ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಫೋಕ್ಸೋ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇವೆ. 2022ರಲ್ಲಿ 103, 2023ರಲ್ಲಿ 108 ಹಾಗೂ 2024ರಲ್ಲಿ 56 ಫೋಕ್ಸೋ ಪ್ರಕರಣಗಳು ದಾಖಲಾಗಿವೆ. 53 ಬಾಲ್ಯ ವಿವಾಹಗಳನ್ನು ತಡೆದು ಪೋಷಕರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಕಾನೂನು ತಿಳುವಳಿಕೆ ಕೊರತೆಯಿಂದ ಬಾಲ್ಯ ವಿವಾಹಗಳು ಮತ್ತು ಫೋಕ್ಸೋ ಘಟನೆಗಳು ನಡೆಯುತ್ತಿವೆ. ಶಾಲೆಯಲ್ಲಿ ಉಪಾಧ್ಯಾಯರು ಪಾಠ ಮಾಡುವುದಷ್ಟೇ ಅಲ್ಲದೇ ಮಕ್ಕಳೊಂದಿಗೆ ಆಪ್ತ ಸಮಾಲೋಚನೆ ಮಾಡುವುದು ಅವರಿಗೆ ಲೈಗಿಕ ಶಿಕ್ಷಣದ ಬಗ್ಗೆ ತಿಳುವಳಿಕೆ ನೀಡುವುದೂ ಅಷ್ಟೇ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಜಿ.ಪಂ ಮುಖ್ಯಕಾರ್ಯ ನಿವಾಹಣಾಧಿಕಾರಿ ಸುರೇಶ್ ಹಿಟ್ನಾಳ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಲೈಗಿಕ ಹಿಂಸೆ ಪ್ರಕರಣಗಳು ನಡೆಯುತ್ತಿದ್ದರೂ ಗ್ರಾಮ ಮಟ್ಟದ ಸಮಿತಿಯಲ್ಲಿನ ಪಿಡಿಓ, ಶಿಕ್ಷಕರು, ಗ್ರಾಮಲೆಕ್ಕಾಧಿಕಾರಿ, ಅಂಗನವಾಡಿ ಕಾರ್ಯಕರ್ತರು, ಪೋಲೀಸರು, ಗ್ರಾ,ಪಂ ಅಧ್ಯಕ್ಷರು ಮೌನ ವಹಿಸಿದರೆ ಕರ್ತವ್ಯ ಲೋಪವಾಗುತ್ತದೆ. ಅವರೆಲ್ಲರೂ ಜತೆಗೂಡಿ ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಗ್ರಾ.ಪಂ ಅಧ್ಯಕ್ಷ ಎಂ.ಕೆ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಇಂದಿರಾ, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ, ವೃತ್ತ ನಿರೀಕ್ಷಕ ಸುರೇಶ್ ಸಗರಿ, ಸಿಡಿಪಿಓ ಪೂರ್ಣಿಮಾ, ಮೇಲ್ವಿಚಾರಕಿ ಶೈಲಾ, ಡಾ. ಪ್ರಶಾಂತ್, ತಾ.ಪಂ ಅಧಿಕಾರಿ ರಾಮಕೃಷ್ಣ, ಪಿಎಸ್‌ಐ ಮಹದೇವ್ ಪತ್ತೆ, ಮಕ್ಕಳ ರಕ್ಷಣಾಧಿಕಾರಿ ಕವಿತಾ, ಗ್ರಾ.ಪಂ ಸದಸ್ಯರು, ನೂರಾರು ವಿದ್ಯಾರ್ಥಿಗಳು, ರಕ್ಷ್ಷಣಾ ಘಟಕದ ಸಂಯೋಜಕರು, ನಾಗರೀಕರು ಇದ್ದರು. ಡಾ ಸೋಮಶೇಖರ್ ಉಪನ್ಯಾಸ ನೀಡಿದರು.