ಸಿರುಗುಪ್ಪ: ಮುಂಗಾರು ಹಂಗಾಮಿನಲ್ಲಿ ತಾಲೂಕಿನಲ್ಲಿ 57,943 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ರೆಡ್ಡಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ 12,090 ವಾಣಿಜ್ಯ ಬೆಳೆಯಾದ ಹತ್ತಿ ಬೆಳೆಯುವ ಗುರಿಯನ್ನು ಹೊಂದಲಾಗಿದೆ. 370 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ, 12 ಹೆಕ್ಟೇರ್ ಜೋಳ, 40 ಹೆಕ್ಟೇರ್ ತೊಗರಿ, ಶೇಂಗಾ 20 ಹೆಕ್ಟೇರ್, ಸೂರ್ಯಕಾಂತಿ 150 ಹೆಕ್ಟೇರ್, ಕಬ್ಬು 80 ಹೆಕ್ಟೇರ್, 5000 ಹೆಕ್ಟೇರ್‌ನಲ್ಲಿ ಹತ್ತಿ ಬೆಳೆಯಲಾಗಿದೆ. ಇಲ್ಲಿವರೆಗೆ 5640 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದು ಮಾಹಿತಿ ನೀಡಿದರು.35,680 ಹೆಕ್ಟೇರ್ ನೀರಾವರಿ ಪ್ರದೇಶವಾಗಿದೆ. 19825 ಹೆಕ್ಟೇರ್ ಮಳೆಯಾಶ್ರಿತ ಜಮೀನಾಗಿದೆ. ಉತ್ತಮ ಮಳೆ ಬಂದರೆ ರೈತರು ಹತ್ತಿ ಬಿತ್ತನೆ ಮಾಡಲು ಈಗಾಗಲೇ ಹತ್ತಿ ಬೀಜ ಖರೀದಿ ಮಾಡಿದ್ದಾರೆ. ತಾಲೂಕಿನಲ್ಲಿ ಯಾವುದೇ ರಸಗೊಬ್ಬರದ ಕೊರತೆ ಇಲ್ಲ. ರೈತರು ಹತ್ತಿ ಸೇರಿದಂತೆ ವಿವಿಧ ಬೀಜಗಳನ್ನು ಖರೀದಿ ಮಾಡುವಾಗ ಅಂಗಡಿಯವರಿಂದ ಕಡ್ಡಾಯವಾಗಿ ರಸೀದಿ ಪಡೆಯಬೇಕು. ತಾಲೂಕಿನ ವಿವಿಧ ರಸಗೊಬ್ಬರ ಅಂಗಡಿಗಳಿಗೆ
ಭೇಟಿ ನೀಡಿ ದಾಸ್ತಾನು ಪರಿಶೀಲಿಸಲಾಗಿದೆ. ಎಂಆರ್‌ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಗೊಬ್ಬರ ಮಾರಾಟ ಮಾಡಬಾರದೆಂದು ವ್ಯಾಪಾರಸ್ಥರಿಗೆ ಸೂಚಿಸಿದ್ದೇವೆ. ಒಂದು ವೇಳೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ ಬಗ್ಗೆ ರೈತರಿಂದ ದೂರುಗಳು ಬಂದರೆ ಅಂತಹ ಅಂಗಡಿಗಳ ಮಾಲೀಕರ ವಿರುದ್ದ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಹಚ್ಚೋಳ್ಳಿ ಮತ್ತು ಕರೂರು ಭಾಗದಲ್ಲಿ ಉತ್ತಮವಾದ ಮಳೆಯಾಗಿರುವುದರಿಂದ ರೈತರು ಕೂರಿಗೆ ಬಿತ್ತನೆ ಮೂಲಕ ಭತ್ತವನ್ನು ಬಿತ್ತನೆ ಮಾಡುತ್ತಿದ್ದಾರೆ. ತಾಲೂಕಿನಲ್ಲಿ 4725, ಮೆಟ್ರಿಕ್ ಟನ್ ಯೂರಿಯಾ,1675 ಮೆಟ್ರಿಕ್ ಟನ್ ಡಿಎಪಿ, 39 ಮೆಟ್ರಿಕ್ ಟನ್ ಪೊಟ್ಯಾಶ್, 524 ಮೆಟ್ರಿಕ್ ಟನ್ಇತರೆ ರಸಗೊಬ್ಬರ, ಸಿಂಗಲ್ ಸೂಪರ್ ಪಾಸ್ಪೇಟ್ 90 ಮೆಟ್ರಿಕ್ ಟನ್, ಒಟ್ಟು 12,000 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ.ಸೋನಾಮಸೂರಿ ಭತ್ತಮತ್ತು ತೊಗರಿ ಬೀಜ 163 ಕ್ವಿಂಟಲ್ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಇದೆ. ತೊಗರಿ 22 ಕ್ವಿಂಟಲ್, ಭತ್ತ 10 ಕ್ವಿಂಟಲ್ ಬೀಜ ರಿಯಾಯಿತಿ ದರದಲ್ಲಿ ರೈತರಿಗೆ ವಿತರಿಸಲಾಗಿದೆ ಎಂದು ಹೇಳಿದರು.