ಚನ್ನಪಟ್ಟಣ: ಸುಮಾರು ೫೦ ಅಡಿ ಆಳದ ಕಂದಕಕ್ಕೆ ಬಿದ್ದು ಕಾಡಾನೆಯೊಂದು ಮೃತಪಟ್ಟಿರುವ ಘಟನೆ ತಾಲೂಕಿನ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದ ಕೆಂಗಲ್ ಗುಡ್ಡೆ ಬಳಿ ನಡೆದಿದ್ದು, ತಡವಾಗಿ ಬೆಳೆಕಿಗೆ ಬಂದಿದೆ.

ಸುಮಾರು ೩೫ರಿಂದ ೪೫ ವರ್ಷದ ಕಾಡಾನೆ ಮೃತದೇಹ ಅರೆಕೊಳೆತ ಸ್ಥಿತಿಯಲ್ಲಿ ಕಂದಕದಲ್ಲಿ ಪತ್ತೆಯಾಗಿದ್ದು, ಸುಮಾರು ೧೦ರಿಂದ ೧೫ದಿನಗಳ ಹಿಂದೆಯೇ ಆನೆ ಮೃತಪಟ್ಟಿದೆ ಎಂದು ಅಂದಾಜಿಸಲಾಗಿದೆ.

ಕೆಂಗಲ್ ಗುಡ್ಡೆ ಸಮೀಪ ಮೂರು ಕಾಡಾನೆಗಳು ಕಾಣಿಸಿಕೊಂಡಿದ್ದು ಅವುಗಳನ್ನು ಕಾಡಿಗೆ ಹಿಮ್ಮಟಿಸುವ ಕಾರ್ಯಾಚರಣೆ ನಡೆಸುವ ಆನೆಗಳು ಕಂದಕದ ಬಳಿ ಹೋಗಿ ನಿಂತುಕೊಂಡಿರುವುದು ಡ್ರೋಣ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆನೆಗಳು ಇಲ್ಲೇಕೆ ನಿಂತಿವೆ ಎಂದು ಪರಿಶೀಲಿಸಿದಾಗ ಕಂದಕದಲ್ಲಿ ಆನೆಯ ಮೃತದೇಹ ಕಂಡುಬಂದಿದೆ.

ವಿಚಾರ ತಿಳಿದು ಸ್ಥಳಕ್ಕೆ ಉಪಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪುಟ್ಟಮ್ಮ, ಚೈತ್ರ, ಶ್ರೀನಿವಾಸ್ ಹಾಗೂ ವಲಯ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಶುವೈದ್ಯಾಧಿಕಾರಿಗಳಾದ ಡಾ.ಕಿರಣ್ ಹಾಗೂ ನಜೀರ್ ಅಹ್ಮದ್ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ಕೆಂಗಲ್‌ಗುಡ್ಡದ ಬಳಿ ಆನೆ ಅಂತ್ಯಕ್ರಿಯೆ ನಡೆಸಲಾಯಿತು.

ಮೇಲ್ನೋಟಕ್ಕೆ ಯಾವುದೋ ಬಲಿಷ್ಠ ಕಾಡಾನೆಯೊಂದಿಗೆ ಕಾದಾಡಿ ಆನೆ ಕಂದಕ್ಕೆ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಆನೆಯ ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ವಲಯ ಅರಣ್ಯಾಧಿಕಾರಿ ಮಲ್ಲೇಶ್ ಮಾಹಿತಿ ನೀಡಿದರು.


ಪೊಟೋ೨೮ಸಿಪಿಟಿ೧: ಚನ್ನಪಟ್ಟಣ ತಾಲೂಕಿನ ಕೆಂಗಲ್‌ಗುಡ್ಡೆ ಬಳಿ ಕಂದಕದಲ್ಲಿ ಬಿದ್ದು ಮೃತಪಟ್ಟ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು.