ಸಾರಾಂಶ
ಕನ್ನಡಪ್ರಭ ವಾರ್ತೆ ಯಲಹಂಕ
ಕೇಂದ್ರೀಯ ಅರೆಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಯಲಹಂಕದ ಸಿಆರ್‌ಪಿಎಫ್ ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ ‘ಪುಲ್ವಾಮಾ ಹುತಾತ್ಮ ಯೋಧರ 5ನೇ ವಾರ್ಷಿಕ ಸ್ಮರಣಾಂಜಲಿ ಕಾರ್ಯಕ್ರಮ’ದಲ್ಲಿ ಸಿಆರ್‌ಪಿಎಫ್‌ನ 44 ವೀರ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಹುತಾತ್ಮ ಯೋಧರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ನಾವು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕ್ಷಮೆ ಕೇಳಬೇಕು.
ಅವರು ನಮಗಾಗಿ ಹುತಾತ್ಮರಾಗಿದ್ದಾರೆ. ಸೈನಿಕರ ಅನನ್ಯ ಸೇವೆಯ ನಿಮಿತ್ತ ನಾವು ನೆಮ್ಮದಿಯಿಂದ ಇರಲು ಸಾಧ್ಯವಾಗಿದೆ. ಸೈನಿಕ, ಕೃಷಿಕ, ಶಿಕ್ಷಕ, ಕಾರ್ಮಿಕ ದೇಶದ ನಾಲ್ಕು ಆಧಾರ ಸ್ಥಂಭಗಳಿದ್ದಂತೆ. ಇವರಿಗೆ ಸೂಕ್ತ ಗೌರವ, ಅಗ್ರಸ್ಥಾನ ನೀಡಿದರೆ ಮಾತ್ರ ದೇಶ ಸುಭಧ್ರವಾಗಿರುತ್ತದೆ ಎಂದರು.
ಪರೋಪಕಾರಂ ಇದಂ ಶರೀರಂ ಎಂಬ ಶ್ಲೋಕದ ಸಾರದಂತೆ ನಮ್ಮ ಸೈನಿಕರು ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆ ಅನನ್ಯವಾದುದು. ದೇವರು ಯಾರಿಗೂ ವರವನ್ನೂ ಕೊಡುವುದಿಲ್ಲ, ಶಾಪವನ್ನೂ ಕೊಡುವುದಿಲ್ಲ, ಆದರೆ ಪ್ರತಿಯೊಬ್ಬರಿಗೂ ಸದವಕಾಶವನ್ನು ಕೊಡುತ್ತಾನೆ, ದೇವರು ಕೊಟ್ಟ ಆ ಅವಕಾಶವನ್ನು ಪರೋಪಕಾರಕ್ಕಾಗಿ ಮೀಸಲಿಟ್ಟರೆ ನಮ್ಮ ಬದುಕು ಸಾರ್ಥಕವಾಗುತ್ತದೆ.
ಇಂತಹ ಸಾರ್ಥಕ ಬದುಕು ನಮ್ಮ ಸೈನಿಕರದ್ದು. ಮಾಜಿ ಯೋಧರು ಅವರ ಹಲವು ಸಮಸ್ಯೆಗಳನ್ನು ನಮ್ಮ ಬಳಿ ತೋಡಿಕೊಂಡಿದ್ದಾರೆ. ಆ ಬಗ್ಗೆ ಮಾಜಿ ಸೈನಿಕರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ಸಿಆರ್‌ಪಿಎಫ್ ನಿವೃತ್ತ ಮಹಾ ನಿರೀಕ್ಷಕ ಕೆ.ಅರ್ಕೇಶ್ ಮಾತನಾಡಿ, ಸಿಆರ್‌ಪಿಎಫ್ ಯೋಧರು ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಸಹ ಜೀವದ ಹಂಗು ತೊರೆದು ದಿನದ 24 ಗಂಟೆ ಸೇವೆ ಸಲ್ಲಿಸುತ್ತಾರೆ.
ಬಾಹ್ಯ ಶತ್ರುಗಳು ಮತ್ತು ಆಂತರಿಕ ಶತ್ರುಗಳೊಂದಿಗೆ ಸದಾ ಸೆಣೆಸಾಡುವ ಸವಾಲಿನ ಕೆಲಸವನ್ನು ಸಿಆರ್‌ಪಿಎಫ್ ಯೋಧರು ಮಾಡುತ್ತಾರೆ ಎಂದು ಹೇಳಿದರು.
ಹಲವೆಡೆ ಸಿಆರ್‌ಪಿಎಫ್ ಯೋಧರ ಮೇಲೆ ಆಂತರಿಕ ಶತ್ರುಗಳಿಂದಲೇ ದಾಳಿಗಳಾಗುತ್ತವೆ. ಆದರೆ ಅರೆಸೇನಾ ಪಡೆಗಳ ವಿಭಾಗಕ್ಕೆ ಸೇರುವ ಸಿಆರ್‌ಪಿಎಫ್ ಯೋಧರನ್ನು ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ಸರಿಯಾದ ರೀತಿಯಲ್ಲಿ ಪರಿಗಣಿಸುವುದಿಲ್ಲ, ಸಿಆರ್‌ಪಿಎಫ್ ಯೋಧರದ್ದು ಒಂದು ರೀತಿಯ ತ್ರಿಶಂಕು ಸ್ವರ್ಗದ ಪರಿಸ್ಥಿತಿಯಾಗಿದೆ.
ಹಲವೆಡೆ ಸಿಆರ್‌ಪಿಎಫ್ ಯೋಧರಿಗೆ ಶೌಚ ವ್ಯವಸ್ಥೆ ಸೇರಿದಂತೆ ಸಮರ್ಪಕವಾದ ಮೂಲ ಸೌಕರ್ಯಗಳೂ ಇರುವುದಿಲ್ಲ, ಆದರೂ ದೇಶಾಭಿಮಾನದ ಏಕೈಕ ಉದ್ದೇಶದಿಂದ ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಕಾರ್ಯ ನಿರ್ವಹಿಸುತ್ತಾರೆ ಎಂದರು.
ಎಲ್ಲಾ ನಿವೃತ್ತ ಅರೆಸೇನಾ ಯೋಧರನ್ನು ಮಾಜಿ ಸಶಸ್ತ್ರ ಪಡೆಗಳೆಂದು ಘೋಷಿಸಿ, ಅವರಿಗೆ ಪ್ರತ್ಯೇಕ ಅರೇಸೇನಾ ಕಲ್ಯಾಣ ಮಂಡಳಿ ರಚಿಸಿ, ಭೂದಳ, ವಾಯುದಳ, ನೌಕಾದಳದ ಯೋಧರಿಗೆ ಕೊಡುತ್ತಿರುವ ಎಲ್ಲಾ ಸೌಲಭ್ಯಗಳನ್ನು ಅವರ ಸಂಖ್ಯೆಗೆ ಅನುಗುಣವಾಗಿ ಅಂದರೆ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರೀಯ ಅರೆಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ಛೇರ್ಮನ್ ಎಚ್.ಆರ್.ಸಿಂಗ್, ರಾಷ್ಟ್ರೀಯ ಅಧ್ಯಕ್ಷ ರಾಣಾ, ರಾಜ್ಯಧ್ಯಕ್ಷ ನರಸಿಂಹರೆಡ್ಡಿ, ಪ್ರಧಾನ ಕಾರ್ಯದರ್ಶಿ ರಾಜಗೋಪಾಲ್ ಇದ್ದರು.