ಸಾರಾಂಶ
ತಾಲೂಕು ಮಟ್ಟದಲ್ಲಿ ಸಾಯಿ ಆರೋಗ್ಯ ಕೇಂದ್ರವನ್ನು ತೆರೆಯುವ ಗುರಿಯನ್ನು ಹೊಂದಿದ್ದೇವೆ. ಇದು 30 ರಿಂದ 40 ಹಾಸಿಗೆಗಳ ಸಾಮಾನ್ಯ ಆಸ್ಪತ್ರೆಯಾಗಿರುತ್ತದೆ. ನಂತರದ ಹಂತದಲ್ಲಿ ಸ್ಪೆಷಾಲಿಟಿ ಆಸ್ಪತ್ರೆ, ಮೆಡಿಕಲ್ ಕಾಲೇಜು ಇರುತ್ತವೆ. ಪ್ರಾಥಮಿಕ ಆರೋಗ್ಯ ಮಾದರಿಯನ್ನು ಉತ್ತೇಜಿಸಿದರೆ ಗರ್ಭಿಣಿ ಮತ್ತು ಶಿಶುಗಳ ಅಕಾಲಿಕ ಮರಣಗಳನ್ನು ಸುಲಭವಾಗಿ ತಡೆಯಬಹುದು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸತ್ಯ ಸಾಯಿ ಬಾಬಾ ಅವರ 100ನೇ ಜನ್ಮದಿನದ ವೇಳೆಗೆ ದೇಶದಲ್ಲಿ 100 ಸ್ವಾಸ್ಥ್ಯ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವ ಗುರಿಯನ್ನು ಹಾಕಿಕೊಂಡಿದ್ದೇವೆ. ಒಟ್ಟಾರೆಯಾಗಿ ದೇಶದಲ್ಲಿ 6 ಸಾವಿರ ಸಾಯಿ ಸ್ವಾಸ್ಥ್ಯ ಆರೈಕೆ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶವಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಿಸಿದರು.ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ನವರಾತ್ರಿ ಹೋಮ, ಅತಿರುದ್ರ ಮಹಾಯಜ್ಞ ಮತ್ತು ದುರ್ಗಾ ಪೂಜೆಯ ಸಂಜೆಯ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿ, ಪಂಚಾಯತಿ ಮಟ್ಟದಲ್ಲಿ ಆರೈಕೆ ಕೇಂದ್ರಗಳನ್ನು ತೆರೆಯಲಾಗುತ್ತದೆ ಎಂದರು.ತಾಲೂಕು ಮಟ್ಟದಲ್ಲಿ ಆರೋಗ್ಯ ಕೇಂದ್ರ
ತಾಲೂಕು ಮಟ್ಟದಲ್ಲಿ ಸಾಯಿ ಆರೋಗ್ಯ ಕೇಂದ್ರವನ್ನು ತೆರೆಯುವ ಗುರಿಯನ್ನು ಹೊಂದಿದ್ದೇವೆ. ಇದು 30 ರಿಂದ 40 ಹಾಸಿಗೆಗಳ ಸಾಮಾನ್ಯ ಆಸ್ಪತ್ರೆಯಾಗಿರುತ್ತದೆ. ನಂತರದ ಹಂತದಲ್ಲಿ ಸ್ಪೆಷಾಲಿಟಿ ಆಸ್ಪತ್ರೆ, ಮೆಡಿಕಲ್ ಕಾಲೇಜು ಇರುತ್ತವೆ. ಪ್ರಾಥಮಿಕ ಆರೋಗ್ಯ ಮಾದರಿಯನ್ನು ಉತ್ತೇಜಿಸಿದರೆ ಗರ್ಭಿಣಿ ಮತ್ತು ಶಿಶುಗಳ ಅಕಾಲಿಕ ಮರಣಗಳನ್ನು ಸುಲಭವಾಗಿ ತಡೆಯಬಹುದು ಎಂದರು. ಭಾರತದಲ್ಲಿ ಪ್ರತಿ ವರ್ಷ 25,000 ಕ್ಕೂ ಹೆಚ್ಚುತಾಯಂದಿರು ಮಗುವನ್ನು ಹೆರುವಾಗ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಮಗು ಅಥವಾ ತಾಯಿಯ ಸಾವನ್ನು ಸಂಪೂರ್ಣವಾಗಿ ತಪ್ಪಿಸಬಹುದು. ನಾವು ಅವರ ಸಮಸ್ಯೆಗಳನ್ನು ಸ್ವಲ್ಪ ಮೊದಲೇ ಕಂಡುಕೊಂಡು ಉತ್ತಮ ಆರೈಕೆಯನ್ನು ಮಾಡಬೇಕಾಗುತ್ತದೆ ಎಂದು ಹೇಳಿದರು.ಸಂಸ್ಕೃತಿ, ಸಂಸ್ಕಾರ ಉಳಿಸಿ
ಲೋಕಾಯುಕ್ತ ಬಿ.ಎಸ್. ಪಾಟೀಲ್ ಮಾತನಾಡಿ, ನಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಉಳಿಸಿ, ಬೆಳೆಸುವುದು ಸಹ ಮೂಲಭೂತ ಕರ್ತವ್ಯ. ಹಣ, ವಿದ್ಯೆ ಸಂಪತ್ತು ಏನೇ ಇದ್ದರೂ ಮನುಷ್ಯನಿಗೆ ಅಂತರಿಕ ಶಾಂತಿ, ನೆಮ್ಮದಿ ಇರುವುದಿಲ್ಲ. ಆದರೆ ಸತ್ಯ ಸಾಯಿ ಗ್ರಾಮಕ್ಕೆ ಬಂದಾಗ ಇದೆಲ್ಲವೂ ಸಿಗುತ್ತದೆ. ತುಂಬಾ ವ್ಯವಸ್ಥಿತವಾಗಿ ಎಲ್ಲಾ ರೀತಿಯ ಸೇವೆಗಳನ್ನು ನೀಡುತ್ತಿದ್ದಾರೆ. ಇಲ್ಲಿಗೆ ಬಂದಾಗ ತೃಪ್ತಿ ಮತ್ತು ಸಂತೋಷವನ್ನು ಅನುಭವಿಸುತ್ತೀರಿ. ಆಧ್ಯಾತ್ಮಿಕ ಅನುಭವಕ್ಕೆ ಒಡ್ಡಿಕೊಂಡಾಗ ತೃಪ್ತರಾಗುತ್ತೀರಿ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಮಾಜಿ ವಿತ್ತ ಕಾರ್ಯದರ್ಶಿ, ಜಿಎಸ್ ಟಿ ನಿರ್ಮಾತೃ ಡಾ. ಹಸ್ಮುಕ್ ಅಧಿಯಾ ಅವರಿಗೆ ‘ಗ್ಲೋಬಲ್ ಲೀಡರ್ ಶಿಪ್ ಪುರಸ್ಕಾರ’ ಮತ್ತು ಗುರುಕುಲಂ ಶಿಕ್ಷಣ, ಆರೋಗ್ಯ ವಾಹಿನಿ ಮೊಬೈಲ್ ಆಸ್ಪತ್ರೆ ಹಾಗೂ ಸಾಯಿ ಸ್ವಾಸ್ಥ್ಯ ಆರೈಕೆ ಕೇಂದ್ರಕ್ಕೆ ಬೆಂಬಲ ನೀಡುತ್ತಿರುವ ‘ವೇದಾಂತ್ ಮೋಟಾರ್ಸ್’ ಕಂಪನಿಗೆ ‘ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಕಂಪನಿಯ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿವೇಕ್ ಸರಫ್ ಮತ್ತು ನಿರ್ದೇಶಕ ಸ್ಮಿತಾ ಸರಫ್ ಅವರು ಪ್ರಶಸ್ತಿ ಸ್ವೀಕರಿಸಿದರು. ಧಾರ್ಮಿಕ ಕಾರ್ಯಕ್ರಮ
ನವರಾತ್ರಿಯ ಭಾಗವಾಗಿ ರಾಮತಾರಕ ಹೋಮ, ಆಂಜನೇಯ ಹೋಮ, ಸಾಯಿ ಗಾಯತ್ರಿ ಹೋಮ, ಬೆಂಗಾಲಿ ಶೈಲಿಯಲ್ಲಿ ದುರ್ಗಾ ಪೂಜೆ ಮತ್ತು ಆರತಿ ನೆರವೇತು. ಪೂರ್ಣಾಹುತಿ, ಅಷ್ಟಾವಧಾನ ಸೇವಾ, ಚತುರ್ವೇದ ಪಾರಾಯಣಂ, ಸಂಗೀತ, ಪಂಚವಾದ್ಯ ಹಾಗೂ ನಾದಸ್ವರದೊಂದಿಗೆ ರುದ್ರಯಾಗ ಪೂರ್ಣಗೊಂಡಿತು.