ಮದೆನಾಡು ಬಳಿ ಕೊಡಗು ಗೌಡ ಸಮಾಜದ ಅಭಿವೃದ್ಧಿಗೆ ಸರ್ಕಾರದಿಂದ 6 ಎಕರೆ ಭೂಮಿ ಕಾಯ್ದಿರಿಸಿದೆ. ಹಾಗೆಯೇ ಭಾಗಮಂಡಲ ಗೌಡ ಸಮಾಜ ನೂತನ ಕಟ್ಟಡ ನಿರ್ಮಾಣಕ್ಕೆ ಒಂದು ಕೋಟಿ ರು. ನಿಗದಿ ಮಾಡಿದೆ ಎಂದು ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ತಿಳಿಸಿದ್ದಾರೆ.
ಮಡಿಕೇರಿ: ಮದೆನಾಡು ಬಳಿ ಕೊಡಗು ಗೌಡ ಸಮಾಜದ ಅಭಿವೃದ್ಧಿಗೆ ಸರ್ಕಾರದಿಂದ 6 ಎಕರೆ ಭೂಮಿ ಕಾಯ್ದಿರಿಸಿದೆ. ಹಾಗೆಯೇ ಭಾಗಮಂಡಲ ಗೌಡ ಸಮಾಜ ನೂತನ ಕಟ್ಟಡ ನಿರ್ಮಾಣಕ್ಕೆ ಒಂದು ಕೋಟಿ ರು. ನಿಗದಿ ಮಾಡಿದೆ ಎಂದು ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ತಿಳಿಸಿದ್ದಾರೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ವಿರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮದ ಅರೆಭಾಷೆ, ಸಂಸ್ಕೃತಿ ಮತ್ತು ಅಭಿವೃದ್ಧಿ ಸಂಘ ಇವರ ಸಹಕಾರದಲ್ಲಿ ತೋರ ಸಮುದಾಯ ಭವನದ ಆವರಣದಲ್ಲಿ ಬುಧವಾರ ನಡೆದ ಅರೆಭಾಷೆ ಗಡಿನಾಡ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಬೆಂಗಳೂರಿನಲ್ಲಿ ನವೆಂಬರ್ ತಿಂಗಳಲ್ಲಿ ನಡೆದ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದಂತೆ 6 ಎಕರೆ ಭೂಮಿ ನೀಡಿದ್ದಾರೆ. ಭಾಗಮಂಡಲ ಗೌಡ ಸಮಾಜ ನೂತನ ಕಟ್ಟಡ ನಿರ್ಮಾಣಕ್ಕೆ ಒಂದು ಕೋಟಿ ರು.. ಪ್ರಕಟಿಸಿದ್ದರು. ಅದರಂತೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರು ನುಡಿದಂತೆ ನಡೆದಿದ್ದು, ಸರ್ಕಾರ ಎಲ್ಲಾ ಸಮಾಜಗಳ ಶ್ರೇಯೋಭಿವೃದ್ಧಿಗೆ ಬದ್ಧವಾಗಿದೆ ಎಂದು ಎ.ಎಸ್.ಪೊನ್ನಣ್ಣ ಅವರು ತಿಳಿಸಿದರು. ಶ್ಲಾಘನೀಯ ಕಾರ್ಯ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅರೆಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ತೋರದಂತಹ ಗಡಿ ಗ್ರಾಮದಲ್ಲಿಯೂ ಸಹ ಗಡಿನಾಡ ಉತ್ಸವ ಕಾರ್ಯಕ್ರಮ ಹಮ್ಮಿಕೊಂಡಿರುವುದು ವಿಶೇಷವೇ ಸರಿ. ಇದರಿಂದ ಅರೆಭಾಷೆ, ಸಂಸ್ಕೃತಿ, ಸಾಹಿತ್ಯ, ಕಲೆಗಳನ್ನು ಉಳಿಸಿ, ಬೆಳೆಸಲು ಸಹಕಾರಿ ಎಂದರು.
ಯಾವುದೇ ಒಂದು ಭಾಷೆಗೆ ಗಡಿ ಇಲ್ಲ. ಭಾಷೆಯನ್ನು ಮತ್ತಷ್ಟು ವಿಸ್ತರಿಸಿ ಬೆಳೆಸುವಲ್ಲಿ ಶ್ರಮಿಸಬೇಕು. ಆ ನಿಟ್ಟಿನಲ್ಲಿ ಕುಟುಂಬದಿಂದಲೇ ಭಾಷೆ ಬೆಳವಣಿಗೆಗೆ ಪ್ರಯತ್ನಗಳು ನಡೆಯಬೇಕು. ಭಾಷೆ ಉಳಿದರೆ ಜನಾಂಗ ಉಳಿಯುತ್ತದೆ ಎಂಬುದನ್ನು ಮರೆಯಬಾರದು ಎಂದರು. ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಟಿ.ಎಂ.ಧರ್ಮಜ ಉತ್ತಪ್ಪ ಮಾತನಾಡಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಹಲವು ವಿಭಿನ್ನ ಹಾಗೂ ವಿಶಿಷ್ಟ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವುದು ಅಕಾಡೆಮಿ ಕಾರ್ಯ ಚಟುವಟಿಕೆಗಳನ್ನು ತಿಳಿಸಲು ಸಹಕಾರಿ ಎಂದರು.ಗ್ರಾಮೀಣ ಪ್ರದೇಶಕ್ಕೆ ತಲುಪಿಸಲು ಶ್ರಮ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ ಅಕಾಡೆಮಿ ವತಿಯಿಂದ ಸುಳ್ಯ ತಾಲೂಕಿನ ಬಂದ್ಯಡ್ಕ, ಮಂಡೆಕೋಲು, ಮಡಿಕೇರಿ ತಾಲೂಕಿನ ಚೆಯ್ಯಂಡಾಣಿ, ಸೇರಿದಂತೆ ವಿವಿಧ ಕಡೆಗಳಲ್ಲಿ ಗಡಿನಾಡ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಅರೆಭಾಷೆ ಜಾತಿಯನ್ನು ಮೀರಿ ಬೆಳೆದಿದ್ದು, ರಾಜ್ಯ ಭಾಷೆಯಾಗಿದೆ. 2025 ರಲ್ಲಿ ಗಡಿನಾಡ ಉತ್ಸವ ಆರಂಭಿಸಿ ಹಲವು ಸಾಂಸ್ಕೃತಿಕ ಶಿಬಿರ ಏರ್ಪಡಿಸಲಾಗಿದೆ ಎಂದರು. ಕೆದಮುಳ್ಳೂರು ಗ್ರಾಮದ ಅರೆಭಾಷೆ ಸಂಸ್ಕೃತಿ ಮತ್ತು ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಪೊಕ್ಕುಳಂಡ್ರ ಎಸ್.ದಿನೇಶ್ ಅವರು ಮಾತನಾಡಿ ತೋರ ಗ್ರಾಮದ ಸುತ್ತಮುತ್ತ ಅರೆಭಾಷಿಗರು ಹೆಚ್ಚಿನ ಸಂಖ್ಯೆಯಲ್ಲಿ ವಾಸ ಮಾಡುತ್ತಿದ್ದು, ಅರೆಭಾಷಿಕರ ಭವನ ನಿರ್ಮಾಣಕ್ಕೆ ಜಾಗ ಒದಗಿಸುವಂತಾಗಬೇಕು ಎಂದು ಅವರು ಮನವಿ ಮಾಡಿದರು. ವಿರಾಜಪೇಟೆ ಗೌಡ ಸಮಾಜದ ಅಧ್ಯಕ್ಷರಾದ ಮುಕ್ಕಾಟಿ ವಾಸು ಗಣಪತಿ ಮಾತನಾಡಿ ಅಕಾಡೆಮಿ ಆರಂಭದ ನಂತರ ಅರೆಭಾಷೆ ಬೆಳವಣಿಗೆಗೆ ಹೆಚ್ಚಿನ ಸಹಕಾರ ಆಗಿದೆ. ಆ ನಿಟ್ಟಿನಲ್ಲಿ ಅರೆಭಾಷೆ ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸಬೇಕು ಎಂದು ಸಲಹೆ ಮಾಡಿದರು. ಮಡಿಕೇರಿ ಕೊಡಗು ಗೌಡ ಸಮಾಜದ ನಿರ್ದೇಶಕ ತೋಟಂಬೈಲು ಕುಮಾರ, ಸದಸ್ಯ ಸಂಚಾಲಕ ಸೂದನ ಎಸ್.ಈರಪ್ಪ, ಸದಸ್ಯ ಸಂಚಾಲಕ ಮೋಹನ್ ಪೊನ್ನಚನ ಮಾತನಾಡಿದರು.ಕೆದಮುಳ್ಳೂರು ಗ್ರಾಮದ ಜಾನಪದ ವಿಭಾಗದ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಕುಡಿಯರ ಬಿ.ಅಮ್ಮುಣಿ, ಹಿರಿಯರಾದ ಪೊಕ್ಕುಳಂಡ್ರ ಕೆ.ಪಾಪಯ್ಯ, ತೋಟಂಬೈಲು ರಾಜು(ಪೆಮ್ಮಯ್ಯ) ಅವರನ್ನು ಗೌರವಿಸಲಾಯಿತು. ನರಿಯಂದಡ ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷರಾದ ಬೊಳಿಯಂಡ್ರ ಹರಿಪ್ರಸಾದ್, ಅಕಾಡೆಮಿ ಸದಸ್ಯರಾದ ಪೂಳಕಂಡ ಸಂದೀಪ್ ಎಂ., ತೇಜಕುಮಾರ್ ಕುಡೆಕಲ್ಲು, ಡಾ.ಎನ್.ಎ.ಜ್ಞಾನೇಶ್, ಲತಾ ಪ್ರಸಾದ್ ಕುದ್ಪಾಜೆ, ಕುದುಪಜೆ ಕೆ.ಪ್ರಕಾಶ್ ಇತರರು ಇದ್ದರು. ಉಳುವಾರನ ರೋಷನ್, ಕಲ್ಲುಮುಟ್ಲು ಜಸ್ಮಿ ಮತ್ತು ಚೈತ್ರ ಅವರು ನಿರೂಪಿಸಿದರು. ಬೈಮನ ಪ್ರೇಮ ಪ್ರಾರ್ಥಿಸಿದರು. ಸೂದನ ಈರಪ್ಪ ಸ್ವಾಗತಿಸಿದರು. ಅಕಾಡೆಮಿ ರಿಜಿಸ್ಟ್ರಾರ್ ಚಿನ್ನಸ್ವಾಮಿ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.